ADVERTISEMENT

ಹುಣಸಗಿ: ಬೇಕಿದೆ ಕೃಷಿ ಎಂಜಿನಿಯರಿಂಗ್ ಕಾಲೇಜು

350 ಕ್ಕೂ ಹೆಚ್ಚು ಕೃಷಿ ಭೂಮಿ ಲಭ್ಯ, ಕಾಲೇಜು ಆರಂಭಕ್ಕೆ ವಿಫುಲ ಅವಕಾಶ

ಭೀಮಶೇನರಾವ ಕುಲಕರ್ಣಿ
Published 27 ಫೆಬ್ರುವರಿ 2025, 5:15 IST
Last Updated 27 ಫೆಬ್ರುವರಿ 2025, 5:15 IST
ಹುಣಸಗಿ ತಾಲ್ಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಆರಂಭಿಸಲು ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ವಿಷ್ಣುವರ್ಧನ್ ಅವರಿಗೆ ಡಾ.ಪ್ರಕಾಶ್‌ ಚವಾಣ್‌ ಹಾಗೂ ಚಂದ್ರಶೇಖರ ದಂಡಿನ್ ಮನವಿ ಸಲ್ಲಿಸಿದ್ದರು (ಸಂಗ್ರಹ ಚಿತ್ರ)
ಹುಣಸಗಿ ತಾಲ್ಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕಾ ಕಾಲೇಜು ಆರಂಭಿಸಲು ಬಾಗಲಕೋಟೆ ತೋಟಗಾರಿಕೆ ವಿವಿಯ ಕುಲಪತಿ ವಿಷ್ಣುವರ್ಧನ್ ಅವರಿಗೆ ಡಾ.ಪ್ರಕಾಶ್‌ ಚವಾಣ್‌ ಹಾಗೂ ಚಂದ್ರಶೇಖರ ದಂಡಿನ್ ಮನವಿ ಸಲ್ಲಿಸಿದ್ದರು (ಸಂಗ್ರಹ ಚಿತ್ರ)   

ಹುಣಸಗಿ: ತಾಲ್ಲೂಕಿನ ಮಾಳನೂರು ಕೃಷಿ ಸಂಶೋಧನಾ ಕೇಂದ್ರದ ವ್ಯಾಪ್ತಿಯಲ್ಲಿ ಸುಮಾರು 350 ಕ್ಕೂ ಹೆಚ್ಚು ಕೃಷಿ ಭೂಮಿ ಇದ್ದು, ಈ ಭಾಗದಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜುಗಳಿಲ್ಲ. ಆದ್ದರಿಂದ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಭೂಮಿಯ ಸದ್ಬಳಕೆಗೆ ಮತ್ತು ಈ ಭಾಗದ ಕೃಷಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತಾಂತ್ರಿಕತೆ ವಿಷಯದ ಕುರಿತು ತಿಳಿದುಕೊಳ್ಳುವಂತಾಗಲು ಕೃಷಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಈ ಭಾಗದವರ ಒತ್ತಾಸೆಯಾಗಿದೆ.

ಯಾದಗಿರಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲ್ಲೂಕಿನ ಗಡಿ ಭಾಗದಲ್ಲಿ ಮಾಳನೂರು ಕೃಷಿ ಸಂಶೋಧನಾ ಕೇಂದ್ರವನ್ನು 1991 ರಲ್ಲಿಯೇ ಅಂದಿನ ಸರ್ಕಾರ ಆರಂಭಿಸಿದೆ.

‘2011 ರಲ್ಲಿ ಸುಮಾರು ₹75 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಕೃಷಿ ಕಾಲೇಜಿಗೆ ಬೇಕಾಗಿರುವ ಕೃಷಿ ಭೂಮಿ, ನೀರು, ಪಾಠ ಪ್ರಯೋಗಾಲಯ ಸೇರಿದಂತೆ ಸೂಕ್ತ ಮೂಲಭೂತ ಸೌಲಭ್ಯಗಳಿವೆ. ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ’ ಎಂದು ಹುಣಸಗಿಯ ವೈದ್ಯ ಡಾ. ಪ್ರಕಾಶ ಚವಾಣ್‌ ಹೇಳುತ್ತಾರೆ.

ADVERTISEMENT

‘ಈ ಕುರಿತು ಈಗಾಗಲೇ ರಾಯಚೂರು ಹಾಗೂ ಬಾಗಲಕೋಟೆ ವಿವಿಯ ಕುಲಪತಿ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ಇಲ್ಲಿನ ವ್ಯವಸ್ಥೆಗಳ ಕುರಿತು ಮನವಿ ಸಲ್ಲಿಸಲಾಗಿದೆ. ಅಲ್ಲದೇ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ’ ಎಂದು ವಿವರಿಸಿದರು.

‘ಯಾದಗಿರಿ ಜಿಲ್ಲೆಯಲ್ಲಿ ಭೀಮರಾಯನಗುಡಿಯಲ್ಲಿ ಮಾತ್ರ ಕೃಷಿ ವಿದ್ಯಾಲಯ ಇದೆ. ಅದನ್ನು ಬಿಟ್ಟಿರೆ ಮತ್ತೆ ಕೃಷಿಗೆ ಆದ್ಯತೆ ನೀಡುವ ವಿದ್ಯಾಲಯಗಳಿಲ್ಲ. ಬೆಳೆಯುತ್ತಿರುವ ಕಾಲಘಟ್ಟದಲ್ಲಿ ಕೃಷಿಯಲ್ಲಿಯೂ ಸಾಕಷ್ಟು ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿದೆ. ನೀರಿನ ಮಿತಬಳಕೆಯೊಂದಿಗೆ ತಂತ್ರಜ್ಞಾನ ಅಳವಡಿಸಿಕೊಳ್ಳುವಂತಾಗಲು ಇಲ್ಲಿ ಕೃಷಿ ಎಂಜಿನಿಯರಿಂಗ್, ಅರಣ್ಯ, ತೋಟಗಾರಿಕೆ ಹೀಗೆ ಮಹಾವಿದ್ಯಾಲಯಗಳ ಅಗತ್ಯವಿದೆ. ಇರುವ ವ್ಯವಸ್ಥೆಯನ್ನೇ ಬಳಕೆ ಮಾಡಿಕೊಂಡು ಕಾಲೇಜು ಆರಂಭಿಸಲು ಎಲ್ಲ ವ್ಯವಸ್ಥೆ ಇದೆ. ಸರ್ಕಾರ ಸ್ಥಾಪನೆಗೆ ಮುಂದಾಗಲಿ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಹೇಳುತ್ತಾರೆ.

ಕೃಷಿ ವಿಸ್ತರಣಾ ಘಟಕವೂ ಇಲ್ಲ

ಈ ಭಾಗದಲ್ಲಿ ಅತಿ ಹೆಚ್ಚು ನೀರಾವರಿ ಇದ್ದರೂ ಕೃಷಿ ವಿಸ್ತರಣಾ ಘಟಕವೂ ಇಲ್ಲ. ಹೀಗಾಗಿ ರೈತರಿಗೆ ಮಾರ್ಗದರ್ಶನ ಕೊರತೆ ಕಾಡುತ್ತಿದೆ.

‘ರೈತರಿಗೆ ತಿಳಿವಳಿಕೆ ಕೊರತೆ ಹಾಗೂ ಅತಿಯಾದ ಬೆಳೆ ಪಡೆಯುವ ನಿರೀಕ್ಷೆಯಿಂದಾಗಿ ಗೊಬ್ಬರ ಹಾಗೂ ಹೆಚ್ಚಿನ ನೀರನ್ನು ಬಳಸಲಾಗುತ್ತದೆ. ಆದರೆ ಕೃಷಿ ಕಾಲೇಜು ಆರಂಭಿಸಿದರೆ ಅಧಿಕಾರಿಗಳು ಸಲಹೆ ನೀಡುವುದು ಪ್ರಾತ್ಯಕ್ಷತೆ ತೋರಿಸುವುದರಿಂದಾಗಿ ಅತಿಯಾದ ರಾಸಾಯನಿಕ ಬಳಕೆ ಕಡಿಮೆ ಮಾಡಬಹುದಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ ನುಡಿದರು.

‘ಭತ್ತ ಶೇಂಗಾ ಹತ್ತಿ ಮತ್ತು ಮೆಣಿಸಿನಕಾಯಿ ಬೆಳೆಗೆ ರೋಗಗಳು ಬಂದಾಗ ಆಯಾ ಭಾಗದಲ್ಲಿರುವ ಕೀಟನಾಶಕ ಮತ್ತು ರಸಗೊಬ್ಬರ ವ್ಯಾಪಾರಿಗಳನ್ನು ಭೇಟಿ ಮಾಡಿ ಅವರು ನೀಡಿದ ಕೀಟನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ. ಆದರೆ ಕೃಷಿ ವಿಸ್ತರಣಾ ಘಟಕ ಆರಂಭಿಸಿದಲ್ಲಿ ರೈತರಿಗೆ ಸೂಕ್ತ ಸಲಹೆ ಮಾರ್ಗದರ್ಶನ ಮಾಡಲು ಹೆಚ್ಚು ಅನುಕೂಲವಾಗಲಿದೆ. ಅನಗತ್ಯ ಖರ್ಚಿಗೂ ಕಡಿವಾಣ ಬೀಳಲಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಮಲ್ಲನಗೌಡ ನಗನೂರು ಅನಿಸಿಕೆ.

‘ಇಲ್ಲಿರುವ ಅಧಿಕಾರಿಗಳು ಆಯಾ ಕಾಲಘಟ್ಟದಲ್ಲಿ ಬರುವ ರೋಗ ಬಾಧೆಗಳು ಮತ್ತು ಅವುಗಳ ಹತೋಟಿಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ ಸೌಲಭ್ಯ ಇಲ್ಲದಿದ್ದರಿಂದಾಗಿ ಪ್ರತಿ ಹಂಗಾಮಿನಲ್ಲಿಯೂ ರೈತರು ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ರೈತರಾದ ರಂಗಪ್ಪ ಡಂಗಿ ಹಾಗೂ ತಿಪ್ಪಣ್ಣ ಕಾರನೂರು ಹೇಳುತ್ತಾರೆ.

ಸುರಪುರ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುತ್ತಿದ್ದು ಈ ಕುರಿತು ಮುಖ್ಯಮಂತ್ರಿ ಹಾಗೂ ಸಚಿವರೊಂದಿಗೆ ಮಾತನಾಡುತ್ತೇನೆ
-ರಾಜಾ ವೇಣುಗೋಪಾಲನಾಯಕ, ಶಾಸಕ
ಹುಣಸಗಿ ತಾಲ್ಲೂಕಿನಲ್ಲಿ ಕೃಷಿ ಎಂಜಿನಿಯರಿಂಗ್ ಕಾಲೇಜು ಆರಂಭಿಸುವ ಕುರಿತಂತೆ ಮನವಿ ಸಲ್ಲಿಸಲಾಗಿದ್ದು ಶಾಸಕರೊಂದಿಗೆ ಚರ್ಚಿಸಿ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡುವೆ
-ಚಂದ್ರಶೇಖರ್‌ ದಂಡಿನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.