ADVERTISEMENT

ಕೆಂಭಾವಿ ಪಟ್ಟಣದ ಅಭಿವೃದ್ಧಿಗೆ ಬದ್ಧ: ಶರಣಬಸಪ್ಪ ದರ್ಶನಾಪುರ

ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 3:43 IST
Last Updated 12 ಜನವರಿ 2021, 3:43 IST
ಕೆಂಭಾವಿ ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು
ಕೆಂಭಾವಿ ಪಟ್ಟಣದಲ್ಲಿ ನಿರ್ಮಿಸಲಾದ ನೂತನ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡವನ್ನು ಸೋಮವಾರ ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು   

ಕೆಂಭಾವಿ: ‘ಪಟ್ಟಣದ ಅಭಿವೃದ್ಧಿಗೆ ಬದ್ಧನಾಗಿದ್ದು, ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ₹6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವ ನಿಟ್ಟಿನಲ್ಲಿ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಸೇವೆ ಸಲ್ಲಿಸಬೇಕು. ನೂತನ ಕಟ್ಟಡದಲ್ಲಿ ಸಕಲ ಸೌಲಭ್ಯಗಳು ಹೊಂದಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ಶಾಸಕನಾದ ಮೇಲೆ ಕೆಂಭಾವಿಗೆ ಶುದ್ಧ ಕುಡಿಯುವ ನೀರಿಗಾಗಿ ₹10 ಕೋಟಿ, ಶಾಶ್ವತ ಕುಡಿಯುವ ನೀರಿಗಾಗಿ 40 ಎಕರೆ ಸರ್ಕಾರಿ ಜಮೀನು ಮಂಜೂರು, ಪ್ರೌಢಶಾಲೆ ಕಟ್ಟಡಕ್ಕೆ ₹1.7 ಕೋಟಿ ಅನುದಾನ, ಉರ್ದು ಶಾಲೆ ನೂತನ ಕಟ್ಟಡ, ಜೂನಿಯರ್ ಕಾಲೇಜಿಗೆ ಕೋಣೆಗಳ ಮಂಜೂರಾತಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಮಾತನಾಡಿ, ‘ನೂತನ ಸಮುದಾಯ ಆರೋಗ್ಯ ಕೇಂದ್ರ ಉತ್ತಮ ಕಟ್ಟಡ ನಿರ್ಮಾಣವಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದದ್ದು ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಪ್ಪ ನಾಯಕ ಪ್ರಾಸ್ತವಿಕ ಮಾತನಾಡಿ, ‘ವೈದ್ಯರು ಮತ್ತು ಸಿಬ್ಬಂದಿ ಆಸ್ಪತ್ರೆಗೆ ಬಂದ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಚಿಕಿತ್ಸೆನೀಡಬೇಕು. ಪ್ರತಿ ಶನಿವಾರ ಸಂತಾನಹರಣ ಚಿಕಿತ್ಸೆ ಪ್ರಾರಂಭವಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ನಗನೂರ ದಾಸೋಹ ಮಠದ ಪೂಜ್ಯ ಶರಣಪ್ಪ ಶರಣರು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಮಾಸಮ್ಮ ಹಲಗಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್‌ಪಾಟೀಲ, ವಾಮನರಾವ ದೇಶಪಾಂಡೆ, ಬಸನಗೌಡ ಹೊಸಮನಿ ಯಾಳಗಿ, ಶಿವಮಾಂತ ಚಂದಾಪುರ, ಕಾಜಾ ಪಟೇಲ ಕಾಚೂರ, ಮುದಿಗೌಡ ಮಾಲಿಪಾಟೀಲ, ವಿಕಾಸ ಸೊನ್ನದ, ರಾಘವೇಂದ್ರ ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಪಿಎಸ್‍ಐ ಸುದರ್ಶನರೆಡ್ಡಿ, ಗುತ್ತೆದಾರ ಅನಿಲ ಪ್ರಸಾದ ಪಾಂಡೆ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಮತ್ತು ಗ್ರಾಮಸ್ಥರು ಇದ್ದರು.

ರೇವಣಸಿದ್ದಪ್ಪ ಮುದಿಗೌಡ್ರ ನಿರೂಪಿಸಿದರು. ಡಾ.ಸಿದ್ದು ನ್ಯಾಮಗೊಂಡ ಸ್ವಾಗತಿಸಿದರು. ಮಹ್ಮದ ಇಲಿಯಾಸ್ ವಂದಿಸಿದರು.

***
ನಗನೂರ ಗ್ರಾಮದಲ್ಲಿರುವ ಹಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಶೀಘ್ರದಲ್ಲಿ ನಿರ್ಮಿಸಲಾಗುವುದು.
-ಶರಣಬಸಪ್ಪ ದರ್ಶನಾಪುರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.