ADVERTISEMENT

ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಹೋರಾಟ: ಕಾಂಗ್ರೆಸ್‌ ಎಚ್ಚರಿಕೆ

ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:14 IST
Last Updated 7 ಜುಲೈ 2020, 15:14 IST
ಗುರುಮಠಕಲ್ ಪಟ್ಟಣದ ನಾಡ ಕಚೇರಿಯಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪತಹಶೀಲ್ದಾರ್ ಎಜಾಜ್ ಉಲ್ ಹಕ್ ಅವರಿಗೆ ಮನವಿ ಪತ್ರ ನೀಡಲಾಯಿತು
ಗುರುಮಠಕಲ್ ಪಟ್ಟಣದ ನಾಡ ಕಚೇರಿಯಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಪತಹಶೀಲ್ದಾರ್ ಎಜಾಜ್ ಉಲ್ ಹಕ್ ಅವರಿಗೆ ಮನವಿ ಪತ್ರ ನೀಡಲಾಯಿತು   

ಗುರುಮಠಕಲ್: ಡಾ.ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದ ಸರ್ಕಾರದ ಅವಧಿಯಲ್ಲಿ ತೈಲ ಬೆಲೆಯನ್ನು ನಿಯಂತ್ರಿಸುವ ಮೂಲಕ ಬಡ ಸಾಮಾನ್ಯರ ಬದುಕು ದುಸ್ತರವಾಗದಂತೆ ಕಾಳಜಿ ವಹಿಸಲಾಗಿತ್ತು. ಆದರೆ, ಈಗ ಅಚ್ಛೆ ದಿನ್ ಹೆಸರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರದಲ್ಲಿ ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಬೆಲೆ ಏರಿಕೆ ನಿಯಂತ್ರಿಸದಿದ್ದರೆ ಕಾಂಗ್ರೆಸ್ ದೇಶದೆಲ್ಲೆಡೆ ಹೊರಾಟ ಮಾಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಚಪೆಟ್ಲಾ ಎಚ್ಚರಿಕೆ ನೀಡಿದರು.

ಮಂಗಳವಾರ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ವಿರೋಧಿಸಿ ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಎಲ್.ಪಿ.ಜಿ ದರ ಏರಿಕೆಯಿಂದಾಗಿ ಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಜನರ ಮೇಲೆ ತೆರಿಗೆಯ ಭಾರವನ್ನು ಹಾಕಿದ್ದೀರಿ. ಕೊರೊನಾ ಹೆಸರಲ್ಲಿ ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದು ನಿಯಂತ್ರಣ ಮಾತ್ರ ಸಾಧ್ಯವಾಗದೆ ಕೈಚೆಲ್ಲಿ ಕುಳಿತಿದ್ದೀರಿ. ನಿಮಗೆ ಸರ್ಕಾರವನ್ನು ನಡೆಸಲು, ಪರಿಸ್ಥಿತಿಯನ್ನು ಎದುರಿಸಲು ಹಾಗೂ ಸೋಂಕು ತಡೆಗಟ್ಟಲು ಸಾಧ್ಯವಾಗದಿದ್ದರೆ ಸರ್ಕಾರವನ್ನು ಕೂಡಲೇ ವಿಸರ್ಜಿಸಿ ಎಂದರು.

ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿ ಉಪ ತಹಶೀಲ್ದಾರ್ ಎಜಾಜ್ ಉಲ್ ಹಕ್ ಅವರಿಗೆ ಮನವಿ ಪತ್ರ ನೀಡಿದರು.

ADVERTISEMENT

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಮಹಿಪಾಲರೆಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಜಿ.ಪಂ.ಮಾಜಿ ಅಧ್ಯಕ್ಷ ಬಸವರೆಡ್ಡಿ ಗೌಡ ಅನಪೂರ, ರಘುನಾಥರೆಡ್ಡಿ ನಜರಾಪೂರ, ಪುರಸಭೆ ಮಾಜಿ ಅಧ್ಯಕ್ಷ ರವೀಂದ್ರರೆಡ್ಡಿ ಸೇರಿದಂತೆ ಕಾಂಗ್ರೆಸ್ ಪದಾಧಿಕಾರಿಗಳು, ಪುರಸಭೆ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.