ADVERTISEMENT

ಇಡಿ ವಿರುದ್ಧ ಕಾಂಗ್ರೆಸ್‌ ಬೃಹತ್ ಪ್ರತಿಭಟನೆ

ರಾಹುಲ್‌ ಗಾಂಧಿ ವಿಚಾರಣೆಗೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ, ಬಿಜೆಪಿಗೆ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 16:36 IST
Last Updated 17 ಜೂನ್ 2022, 16:36 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಸಂವಿಧಾನಿಕ ಸಾಂಸ್ಥಿಕ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಇಡಿ)ವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೈಕ್‌ ರ್‍ಯಾಲಿ ಮೂಲಕ ಆಗಮಿಸಿದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕಳೆದ ಮೂರು ದಿನಗಳಿಂದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರನ್ನು ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯ ವಿಷಯವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಮೂಲಕ ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ADVERTISEMENT

ಈ ವೇಳೆ ಮಾತನಾಡಿದ ವಿಧಾನ ಪರಿಷತ್‌ ಮಾಜಿ ಸದಸ್ಯ ಚನ್ನಾರೆಡ್ಡಿ ಪಾಟೀಲ, ‘ಬಿಜೆಪಿ ಸರ್ಕಾರದ ದ್ವೇಷದ ರಾಜಕರಣ ಮಾಡುತ್ತಿದೆ. ಕಾಂಗ್ರೆಸ್‌ ಮುಖಂಡರನ್ನು ಗುರಿಯಾಗಿಸಿ ಸ್ವಾಯತ್ವ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್ ನಾಯಕರ ವರ್ಚಸ್ಸು ಕುಗ್ಗಿಸುವ ಹುನ್ನಾರದಿಂದ ರಾಜಕೀಯ ಪ್ರೇರಿತ ತನಿಖೆಗಳನ್ನು ನಡೆಸಲಾಗುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ಸಿಬಿಐ ಮೂಲಕ ವಿರೋಧ ಪಕ್ಷದ ನಾಯಕರ ಮೇಲೆ ದಾಳಿಗಳನ್ನು ನಡೆಸಿ, ತನಿಖೆ ಹೆಸರಿನಲ್ಲಿ ಅವರ ವರ್ಚಸ್ಸು ಕುಂದುವಂತೆ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ಕೃತ್ಯ’ ಎಂದು ಖಂಡಿಸಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಗೌಡ ಹುಲಕಲ್‌ ಮಾತನಾಡಿ, ‘ಬಿಜೆಪಿ ಸರ್ಕಾರ ನಮ್ಮ ನಾಯಕರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿದೆ. ಜನರಲ್ಲಿ ದ್ವೇಷವನ್ನು ಬಿತ್ತಿ ಕೋಮುವಾದವನ್ನು ಹೆಚ್ಚಳ ಮಾಡುತ್ತಿದೆ’ ಎಂದು
ಆರೋಪಿಸಿದರು.

ಮುಖಂಡರಾದ ವಸಂತಕುಮಾರ, ಮರೆಪ್ಪ ಬಿಳ್ಹಾರ ಮಾತನಾಡಿ, ‘ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಪಕ್ಷವನ್ನು ತುಳಿಯಲು ಹಾತೊರೆಯುತ್ತಿದೆ. ಇದಕ್ಕೆ ಕಾಂಗ್ರೆಸ್‌ ಸೊಪ್ಪು ಹಾಕುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿದಿರು.
ನಂತರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಶರಣಪ್ಪ ಮಟ್ಟೂರ, ಶ್ರೀನಿವಾಸರೆಡ್ಡಿ ಕಂದಕೂರ, ಎ.ಸಿ.ಕಾಡ್ಲೂರ್, ಡಾ.ಭೀಮಣ್ಣ ಮೇಟಿ, ಡಾ.ಶರಣಬಸವಪ್ಪ ಕಾಮರೆಡ್ಡಿ, ಸುದರ್ಶನ ನಾಯಕ, ಮಾಣಿಕರೆಡ್ಡಿ ಕುರಕುಂದಿ, ರಾಘವೇದ್ರ ಮಾನಸಗಲ್‌, ಸ್ಯಾಂಸನ್‌ ಮಾಳಿಕೇರಿ, ಶ್ರೇಣಿಕುಮಾರ ದೋಖಾ, ಸೋಮಶೇಖರ ಮಸ್ಕನಹಳ್ಳಿ, ಚನ್ನಕೇಶವಗೌಡ ಬಾಣತಿಹಾಳ, ಸಂಜಯಕುಮಾರ ಕೌಲಿ, ಮಂಜುಳಾ ಗೂಳಿ, ಹಣಮಂತರಾಯ ತೇಕರಾಳ, ಹೊನ್ನೇಶ ದೊಡ್ಡಮನಿ ಸೇರಿದಂತೆ ಕಾರ್ಯಕರ್ತರುಇದ್ದರು.

***

ಗೊಂದಲದ ವಾತಾವರಣ ಸೃಷ್ಟಿ

ಪ್ರತಿಭಟನೆಗೆ ಮಾಡಲು ಆಗಮಿಸಿದ ಕಾಂಗ್ರೆಸ್‌ ಮುಖಂಡರನ್ನು ಪೊಲೀಸರು ಗೇಟಿನ ಬಳಿ ತಡೆದಾಗ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಕಚೇರಿಗೆ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದಾಗ ಮುಖಂಡರು ಗರಂ ಆಗಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗೂಂಡಾ ವರ್ತನೆ ಮಾಡಲು ಬಂದಿಲ್ಲ. ಪ್ರತಿಭಟನೆ ನಮ್ಮ ಸಂವಿಧಾನಿಕ ಹಕ್ಕು. ಇದಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ನಂತರ ಅಧಿಕಾರಿಗಳು ಮನವೊಲಿಸಿ ಗೇಟು ತೆಗೆದರು ನಂತರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.