ADVERTISEMENT

ಪರಿಶಿಷ್ಟರ ಅನುದಾನ ದುರ್ಬಳಕೆ

ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಆರೋಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 8:23 IST
Last Updated 1 ಸೆಪ್ಟೆಂಬರ್ 2020, 8:23 IST
ಸುರಪುರದ ನಗರಸಭೆ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ದಲಿತ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು
ಸುರಪುರದ ನಗರಸಭೆ ಎದುರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ದಲಿತ ಸಮಿತಿ ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು   

ಸುರಪುರ: ವಿವಿಧ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟ ಅನುದಾನ ದುರ್ಬಳಕೆಯಾಗಿದ್ದು, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮತ್ತು ನಗರಸಭೆ ಎಇಇ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ನಗರಸಭೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಶಿವಲಿಂಗಪ್ಪ ಚಲುವಾದಿ ಮಾತನಾಡಿ, ‘2018-19ನೇ ಸಾಲಿನ ನಗರೋತ್ಥಾನ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಅನುದಾನದಲ್ಲಿ ಯಾವುದೇ ಕಾಮಗಾರಿ ನಿರ್ವಹಿಸಿಲ್ಲ. ಹಸನಾಪುರದ ಸಾಮಾನ್ಯ ವರ್ಗದ ವಾರ್ಡ್‍ನಲಿ ಸಿಸಿ ರಸ್ತೆ ನಿರ್ಮಾಣ ಮಾಡಿ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ನಗರಸಭೆ ಎಇಇ ಎಲ್ಲಿಯೂ ಕಾಮಗಾರಿ ನಿರ್ವಹಿಸದೆ ಅನುದಾನ ಎತ್ತಿ ಹಾಕಿದ್ದಾರೆ. ಇದಕ್ಕೆ ನಗರ ಯೋಜನಾ ನಿರ್ದೇಶಕರು ಸಂಪೂರ್ಣ ಸಹಕಾರ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಯೋಜನೆ ಅಡಿ ₹10 ಲಕ್ಷ ಮೀಸಲಿಡಲಾಗಿತ್ತು. ಪರಿಶಿಷ್ಟ ವರ್ಗದ ಕೆಲ ವಾರ್ಡ್‍ಗಳಲ್ಲಿ ಕನಿಷ್ಟ 3– 4 ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿತ್ತು. ಆದರೆ ಎಲಿಯೂ ಕಾಮಗಾರಿ ಮಾಡಿಲ್ಲ. 2014-15ರಿಂದ ಇಲ್ಲಿಯವರೆಗೆ ಪರಿಶಿಷ್ಟರ ವಾರ್ಡ್‍ನಲ್ಲಿ ಒಂದೇ ಒಂದು ಕಾಮಗಾರಿ ಮಾಡಿಲ್ಲ. ಈ ಕುರಿತು ಸೂಕ್ತ ತನಿಖೆ ಮಾಡಿಸಿ ತಪಿತಸ್ಥರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘5 ವರ್ಷ ಮೇಲ್ಪಟ್ಟು ನಗರಸಭೆಯಲ್ಲಿ ಬೀಡು ಬಿಟ್ಟಿರುವ ಸಿಬ್ಬಂದಿಯನ್ನು ವರ್ಗ ಮಾಡಬೇಕು. ಬಯೊಮೆಟ್ರಿಕ್ ಅಳವಡಿಸಬೇಕು. ಕುಡಿಯುವ ನೀರಿನ ಸಮಸ್ಯೆ ಸರಿದೂಗಿಸಬೇಕು. ರಂಗಂಪೇಟೆಯ ಅಂಬೇಡ್ಕರ್ ವೃತ್ತದ ಬಳಿ ಸೇಪ್ಟಿಕ್ ಟ್ಯಾಂಕ್ ಖಾಲಿ ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದರು. ನಂತರ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭೀಮಣ್ಣ ನಾಟೇಕಾರ್, ಹಣಮಂತ ರೋಜಾ, ಯಲ್ಲಾಲಿಂಗ ಹೊಸಮನಿ, ಸಾಯಿಬಣ್ಣ ಸದಬ, ಖಾಜಾ ಅಜ್ಮೀರ, ಎಂ. ಪಟೇಲ, ರಮೇಶ ನಂಬಾ, ಚೌಡಪ್ಪ ಗದ್ದೆಪ್ಪ, ಭೀಮರಾಯ ಮ್ಯಾಗೇರಿ, ಹಣಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.