ಕೆಂಭಾವಿ: ಕೆಲ ದಿನಗಳಿಂದ ಪಟ್ಟಣ ಸೇರಿದಂತೆ ವಲಯದ ಹಲವೆಡೆ ಮಳೆಯಾಗಿದೆ. ಆದರೆ ಇನ್ನು ಕೆಲವೆಡೆ ಮಳೆಯ ಅಭಾವವಿದ್ದು, ಮೋಡ ಕವಿದ ವಾತಾವರಣವಿದೆ. ಸತತ ಮೋಡ ಕವಿದ ವಾತಾವರಣದಿಂದ ಹತ್ತಿ ಬೆಳೆಗೆಳು ರೋಗಗಳಿಗೆ ತುತ್ತಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಮಳೆಗಾಲ ಆರಂಭವಾಗಿ ಎರಡು ತಿಂಗಳು ಗತಿಸಿದರೂ ಈವರೆಗೆ ವಾಡಿಕೆಗೆ ಅನುಗುಣವಾದ ಮಳೆ ಸುರಿದಿಲ್ಲ. ಒಂದು ವಾರದಿಂದ ವಾತಾವರಣದಲ್ಲಿ ಬದಲಾವಣೆ ಆಗಿದ್ದು, ಕೇವಲ ಮೋಡ ಮತ್ತು ಗಾಳಿ ಬೀಸುತ್ತಿರುವುದರಿಂದ ಹತ್ತಿ ಮತ್ತು ತೊಗರಿ ಬೆಳೆಗಳಿಗೆ ರೋಗ ಅಂಟಿಕೊಂಡಿದೆ. ಈ ಬಾರಿ ವಲಯದಲ್ಲಿ ಸರಾಸರಿ ಪ್ರಮಾಣದಲ್ಲಿ ಹತ್ತಿ ಬೆಳೆ ಹೆಚ್ಚು ಬಿತ್ತನೆ ಮಡಲಾಗಿದೆ. ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತ್ತಿ ಬೆಳೆಗೆ ನುಸಿರೋಗ ತಗುಲಿದೆ. ಈಗಾಗಲೇ ರೈತರು ಮೂರನೇ ಬಾರಿಗೆ ಕೀಟನಾಶಕ ಸಿಂಪಡಣೆ ಮಾಡಿದ್ದು, ಬೆಳೆ ಕೈಗೆ ಬರುವಷ್ಟರಲ್ಲಿ ಕೀಟನಾಶಕ ಸಿಂಪಡಣೆಯೇ 10ಕ್ಕೂ ಹೆಚ್ಚು ಬಾರಿ ಆಗುವ ಸಾಧ್ಯತೆ ರೈತರನ್ನು ಆತಂಕಕ್ಕೀಡುಮಾಡಿದೆ.
ಕೀಟನಾಶಕ ಸಿಂಪಡಣೆ ಅವಧಿ ಜಾಸ್ತಿಯಾದಂತೆ ರೈತರಿಗೆ ಖರ್ಚಿನ ಹೊರೆಯೂ ಅಧಿಕವಾಗುತ್ತದೆ. ಇದನ್ನು ತಪ್ಪಿಸಲು ರೈತರು ಮೇಲಿಂದ ಮೇಲೆ ಹೊಲದಲ್ಲಿ ಗಳೆ ಹೊಡೆಯುವುದು, ಕೈಗಳಿಂದ ಹತ್ತಿ ಗಿಡಗಳನ್ನು ಜಾಡಿಸುವುದು ಸೇರಿದಂತೆ ಹಲವು ಬಗೆಯ ಕೃತಕ ಮತ್ತು ತಾತ್ಕಾಲಿಕ ಮಾರ್ಗೋಪಾಯಗಳ ಮೊರೆ ಹೋಗಿದ್ದಾರೆ. ಒಟ್ಟಾರೆ ಈ ಬಾರಿ ಮಳೆ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣದಿಂದ ಬೆಳೆಗಳೆ ಸಂಕಷ್ಟ ಎದುರಾಗಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ವಾತಾವರಣದಲ್ಲಿ ಅನೇಕ ಬದಲಾವಣೆಗಳಾಗುತ್ತಿವೆ. ಅದರಿಂದ ಬೆಳೆಗಳಿಗೆ ರೋಗಗಳು ತಗುಲುವ ಸಾಧ್ಯತೆ ಹೆಚ್ಚಿದೆ. ಹತ್ತಿ ಬೆಳೆಗೆ ರೋಗ ತಡೆಗಟ್ಟಲು ಅಸೀಮೆಟಾಫಿಡ್ ಅಥವಾ ಥಯಾಮಕ್ಷಾಮ್ ಅನ್ನು 0.5 ಗ್ರಾಂ ನಂತೆ ಪ್ರತಿ ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು. ಹತ್ತಿ ಹೊಲದಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು ಎಂದು ಕೃಷಿ ಅಧಿಕಾರಿ ಶ್ರೀಧರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.