ADVERTISEMENT

‘ಲಸಿಕಾಕರಣ ಅಭಿಯಾನ ಕೈಗೊಳ್ಳಿ’

ಕೋವಿಡ್‌ 3ನೇ ಅಲೆ ಎದುರಿಸಲು ಕಾರ್ಯಪ್ರವೃತರಾಗಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 4:43 IST
Last Updated 24 ಜುಲೈ 2021, 4:43 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ವೈದ್ಯಾಧಿಕಾರಿಗಳೊಂದಿಗೆ  ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ವೈದ್ಯಾಧಿಕಾರಿಗಳೊಂದಿಗೆ  ಮಾತನಾಡಿದರು   

ಯಾದಗಿರಿ: ಪ್ರತಿ ತಾಲ್ಲೂಕಿನ ಹಳ್ಳಿಗಳಲ್ಲಿ ಲಸಿಕಾಕರಣ ಅಭಿಯಾನ ಕೈಗೊಂಡು 18 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ಮೊದಲನೇ ಡೋಸ್ ಮತ್ತು 2ನೇ ಡೋಸ್ ಲಸಿಕಾಕರಣಕ್ಕೆ ಜಾಗೃತಿ ಮೂಡಿಸಿ ಮೂರನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಹೇಳಿದರು.

ಕೋವಿಡ್ ಮೂರನೇ ಅಲೆ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವೈದ್ಯಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಲಸಿಕಾಕರಣದ ನಂತರ ಕಡ್ಡಾಯವಾಗಿ ಡಾಟಾ ಎಂಟ್ರಿ ಮಾಡಬೇಕು. ಡಾಟಾ ಎಂಟ್ರಿ ಮಾಡದೇ ನಿರ್ಲಕ್ಷ್ಯ ವಹಿಸುವ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಾಗಿ ಸೂಚಿಸಿದರು.

ADVERTISEMENT

ಕಾಲೇಜುಗಳು ಪ್ರಾರಂಭವಾಗುತ್ತಿರುವುದರಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ 2ನೇ ಡೋಸ್ ಲಸಿಕೆ ನೀಡಿ, ಪ್ರತಿಶತ ನೂರರಷ್ಟು ಫಲಿತಾಂಶ ಸಾಧಿಸಲು ಸೂಚಿಸಿದರು.

ಕೋವಿಡ್ ಮೂರನೇ ಅಲೆಯು ಮಕ್ಕಳ ಆರೋಗ್ಯಕ್ಕೆ ಹಾನಿ ಮಾಡುವ ಸಾಧ್ಯತೆ ಇರುವುದರಿಂದ ಆಸ್ಪತ್ರೆಗಳಲ್ಲೇ ಸುಸಜ್ಜಿತವಾಗಿ ಅಗತ್ಯ ಚಿಕಿತ್ಸೆ ನೀಡಲು ಮಕ್ಕಳ ತೀವ್ರ ನಿಗಾಘಟಕ ನಿರ್ಮಿಸಲು ಯೋಜಿಸಲಾಗಿದೆ. ಆದ್ದರಿಂದ ಸಿಎಸ್‌ಆರ್ ಫಂಡ್ ಮುಖಾಂತರ ಘಟಕಕ್ಕೆ ವೈದ್ಯಕೀಯ ಉಪಕರಣಗಳನ್ನು ಪಡೆಯುವ ಕುರಿತು ಚರ್ಚಿಸಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ, ಆರ್‌ಸಿಎಚ್‌ಒ ಡಾ.ಲಕ್ಷ್ಮಿಕಾಂತ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಂಜೀವಕುಮಾರ ರಾಯಚೂರಕರ, ಕಾರ್ಯಕ್ರಮ ಅಧಿಕಾರಿ ಡಾ. ಭಗವಂತ ಅನ್ವರ, ಸುರಪುರ ತಾಲ್ಲೂಕು ವೈದ್ಯಾಧಿಕಾರಿ ಆರ್.ವಿ ನಾಯಕ, ಶಹಾಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ, ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.