ADVERTISEMENT

ಯಾದಗಿರಿ: 437 ಮಂದಿಗೆ ಕೋವಿಡ್‌ ಪರಿಹಾರ

ಕೋವಿಡ್‌ನಿಂದ ಮೃತಪಟ್ಟವರಿಗೆ ಸರ್ಕಾರದಿಂದ ಆರ್ಥಿಕ ನೆರವು

ಬಿ.ಜಿ.ಪ್ರವೀಣಕುಮಾರ
Published 20 ಜುಲೈ 2022, 19:30 IST
Last Updated 20 ಜುಲೈ 2022, 19:30 IST
ಕೋವಿಡ್‌ ಪರಿಹಾರ ನೀಡುವಂತೆ ಮೃತ ಜಯಮ್ಮಳ ಕುಟುಂಬಸ್ಥರು ಸುರಪುರ ತಾಲ್ಲೂಕಿನ ಕೆಂಭಾವಿಯ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿರುವುದು
ಕೋವಿಡ್‌ ಪರಿಹಾರ ನೀಡುವಂತೆ ಮೃತ ಜಯಮ್ಮಳ ಕುಟುಂಬಸ್ಥರು ಸುರಪುರ ತಾಲ್ಲೂಕಿನ ಕೆಂಭಾವಿಯ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಈಚೆಗೆ ಮನವಿ ಸಲ್ಲಿಸಿರುವುದು   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್-19 ನಿಂದ ಮೃತಪಟ್ಟ 437 ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ.

ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೋವಿಡ್‌ನಿಂದ ಮೃತಪಟ್ಟ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಕ್ಕೆ ₹1 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ನಂತರ ಕೇಂದ್ರ ಸರ್ಕಾರದಿಂದ ₹50 ಸಾವಿರ ಮಂಜೂರು ಮಾಡಲಾಗಿತ್ತು. ಒಟ್ಟು ₹1.50 ಲಕ್ಷ ಪರಿಹಾರ ಕೆಲವು ದಿನ ವಿತರಿಸಲಾಗಿತ್ತು. ಈಗ ಕೇವಲ ₹50 ಸಾವಿರ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಆರೋಗ್ಯ ಇಲಾಖೆಯ ಮಾಹಿತಿಯಂತೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೊದಲ ಅಲೆಯಲ್ಲಿ 61, ಎರಡನೇ ಅಲೆಯಲ್ಲಿ 146 ಜನರು ಮೃತಪಟ್ಟಿದ್ದಾರೆ. ಮೂರನೇ ಅಲೆಯಲ್ಲಿ 5 ಜನರು ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 46 ಪುರುಷರು, 15 ಮಹಿಳೆಯರು ಸಾವನ್ನಪ್ಪಿದ್ದರೆ, ಎರಡನೇ ಅಲೆಯಲ್ಲಿ 93 ಪುರುಷರು, 53 ಮಹಿಳೆಯರು ಕೋವಿಡ್‌ನಿಂದ ಮೃತರಾಗಿದ್ದಾರೆ.

ADVERTISEMENT

ಮೊದಲ ಅಲೆಯಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 17, ಶಹಾ‍ಪುರ ತಾಲ್ಲೂಕಿನಲ್ಲಿ 31, ಸುರಪುರ ತಾಲ್ಲೂಕಿನಲ್ಲಿ 13 ಸೇರಿದಂತೆ ಒಟ್ಟಾರೆ 61 ಜನ ಸಾವನಪ್ಪಿದ್ದಾರೆ. ಎರಡನೇ ಅಲೆಯಲ್ಲಿ ಯಾದಗಿರಿ ತಾಲ್ಲೂಕಿನಲ್ಲಿ 67, ಶಹಾಪುರ ತಾಲ್ಲೂಕಿನಲ್ಲಿ 48, ಸುರಪುರ ತಾಲ್ಲೂಕಿನಲ್ಲಿ31 ಸೇರಿದಂತೆ 146 ಜನ ಮೃತಪಟ್ಟಿದ್ದಾರೆ.


ಎರಡು ತಾಲ್ಲೂಕುಗಳಲ್ಲಿ ಹೆಚ್ಚು ಸಾವು: ಜಿಲ್ಲೆಯಲ್ಲಿ ಶಹಾಪುರ, ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು ಸಾವು ಕೋವಿಡ್‌ನಿಂದ ಆಗಿದೆ. ಶಹಾಪುರ ತಾಲ್ಲೂಕಿನಲ್ಲಿ 121, ಯಾದಗಿರಿ ತಾಲ್ಲೂಕಿನಲ್ಲಿ 111 ಮಂದಿ ಸಾವನ್ನಪ್ಪಿದ್ದಾರೆ.

ಜುಲೈ 13ರ ಮಾಹಿತಿಯಂತೆ ಜಿಲ್ಲೆಯಲ್ಲಿ 29,969 ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದರೆ, 29,757 ಗುಣಮುಖವಾದ ಪ್ರಕರಣಗಳಿವೆ.

ಕೆಲವರಿಗೆ ದೊರಕದ ಪರಿಹಾರ: ಆರೋಗ್ಯ ಇಲಾಖೆಯ ಅಧಿಕಾರಿಗಳ ಎಡವಟ್ಟುನಿಂದ ಕೋವಿಡ್ ಪರಿಹಾರ ಜಿಲ್ಲೆಯಲ್ಲಿ ಕೆಲವರಿಗೆ ಸಿಕ್ಕಿಲ್ಲ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ ತಾಂತ್ರಿಕ ಕಾರಣದಿಂದ (ಡಾಟಾ ನಾಟ್ ಫೌಂಡ್) ಕಗ್ಗಂಟಾಗಿ ಪರಿಣಮಿಸಿದೆ. ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಸುಮಾರು 5 ಕುಟುಂಬಗಳಿಗೆ ಇನ್ನು ಪರಿಹಾರದ ಮೊತ್ತ ದೊರೆತಿಲ್ಲ ಎಂದು ಮೃತರ ಕುಟುಂಬದವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.