ಯಾದಗಿರಿ: ‘ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ಒಣ ಬೇಸಾಯದ ಪ್ರತಿ ಎಕರೆ ಬೆಳೆಗಳಿಗೆ ಪ್ರತಿ ₹ 25 ಸಾವಿರದಂತೆ 10 ಎಕರೆವರೆಗೆ ಮತ್ತು ವಾಣಿಜ್ಯ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಪ್ರತಿ ಎಕರೆಗೆ ₹ 50 ಸಾವಿರದಂತೆ 5 ಎಕರೆವರೆಗೆ ಪರಿಹಾರ ನೀಡಬೇಕು’ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.
‘ಮಳೆಯಿಂದಾಗಿ ಎರಡೂವರೆ ತಿಂಗಳಿಂದ ಬೆಳೆಗಳಿಗೆ ಹಾನಿಯಾಗುತ್ತಿದ್ದರು ಸರ್ಕಾರದ ಗಮನಕ್ಕೆ ಬರಲಿಲ್ಲ. ಸರ್ಕಾರಿ ಕಚೇರಿಗಳು ಹಾಗೂ ಬೀದಿಗಳಲ್ಲಿ ಸರ್ಕಾರಕ್ಕೆ ಜನರು ಮಂಗಳಾರತಿ ಮಾಡಲು ಶುರುಮಾಡಿದ ಮೇಲೆ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳು ತೋರಿಕೆಗೆ ಬೆಳೆ ಹಾನಿ ಸಮೀಕ್ಷೆ ಮಾಡಿದರು. ಪರಿಹಾರದ ಧನವೂ ಘೋಷಿಸಿದ್ದರು. ಆದರೆ, ಎಷ್ಟು ಎಕರೆಗೆ ಕೊಡುತ್ತೇವೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಳೆದ ವರ್ಷ ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡಿರುವ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈಗ ಮತ್ತೆ ಅತಿವೃಷ್ಟಿ ಹಾಗೂ ನೆರೆಗೆ ಸಿಲುಕಿದ್ದಾರೆ. ಆರ್ಥಿಕ ಹೊರೆಯನ್ನು ತಾಳಲಾರದೆ ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಸಚಿವರು ರೈತರಿಗೆ ಪರಿಹಾರ ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೂ ಪರಿಹಾರ ಕೊಟ್ಟಿಲ್ಲ’ ಎಂದರು.
‘ಹೆಸರಿಗೆ ಮಾತ್ರವೇ ಬಸವ ಸಂಸ್ಕೃತಿ ಅಭಿಯಾನ ನಡೆಸಿದ್ದು, ಅಖಂಡವಾದ ವೀರಶೈವ ಧರ್ಮಕ್ಕೆ ಕತ್ತರಿ ಹಾಕುವಂತಹ ಕೆಲಸ ಮಾಡಲಾಗಿದೆ. ಕೆಲವು ಮಠಾಧೀಶರು ಸಿಎಂ ಸಿದ್ದರಾಮಯ್ಯ ಅವರಿಗೆ ಕಿವಿ ತುಂಬಿ ಲಿಂಗಾಯತ ಧರ್ಮ ಪ್ರತ್ಯೇಕ ಧರ್ಮ ಮಾನ್ಯತೆಗೆ ಮನವಿ ಮಾಡಿದ್ದು, ಇದನ್ನು ಅಖಂಡ ಹಿಂದೂ ಸಮಾಜ ಒಪ್ಪಿವುದಿಲ್ಲ’ ಎಂದರು.
‘ಮುಂಬರುವ ಸ್ಥಳೀಯ ಸಂಸ್ಥೆಗಳಿಂದ ಲೋಕಸಭೆ ಚುನಾವಣೆಗಳಲ್ಲಿ ಶಿವಸೇನೆಯ ಅಭ್ಯರ್ಥಿಗಳು ರಾಜ್ಯದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವರು. ಮುಂದಿನ ತಿಂಗಳು ಕಲಬುರಗಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಭೇಟಿ ನೀಡಿಲಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿವಸೇನಾ ಪಕ್ಷ ಬಲಗೊಳಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಡರಾದ ವಿಜಯ ಪಾಟೀಲ, ಪ್ರಶಾಂತ ನಾಯಕ, ಸಂದೀಪ ನಾಯಕ್, ಬಸನಗೌಡ, ನಿತ್ಯಾನಂದ ಸ್ವಾಮಿ, ಚನ್ನಪ್ಪಗೌಡ ಉಪಸ್ಥಿತರಿದ್ದರು.
ಹಿಂದೂ ಧರ್ಮದ ಅವಿಭಾಜ್ಯ ಅಂಗವಾದ ವೀರಶೈವ ಲಿಂಗಾಯತ ಧರ್ಮವನ್ನು ತುಂಡರಿಸಿ ಸಮಾಜವನ್ನು ವಿಭಜನೆ ಮಾಡಬಾರದುಸಿದ್ದಲಿಂಗ ಸ್ವಾಮೀಜಿ ಶಿವಸೇನಾ ರಾಜ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.