ADVERTISEMENT

ಅನ್ನದಾತರ ಕೈ ಹಿಡಿಯದ ಬೆಳೆ ವಿಮೆ

ಪರಿಹಾರದ ಹಣ ಬಾರದಿರುವುದಕ್ಕೆ ಆಕ್ರೋಶ; ಬೆಳೆ ವಿಮೆ ಮಾಡಿಸಲು ನಿರಾಸಕ್ತಿ

ಬಿ.ಜಿ.ಪ್ರವೀಣಕುಮಾರ
Published 13 ಸೆಪ್ಟೆಂಬರ್ 2020, 19:30 IST
Last Updated 13 ಸೆಪ್ಟೆಂಬರ್ 2020, 19:30 IST
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಹಾನಿಯಾದ ಜಮೀನನ್ನು ಪರಿಶೀಲಿಸಿದ ಕೃಷಿ ಇಲಾಖೆ ಅಧಿಕಾರಿಗಳು(ಸಂಗ್ರಹ ಚಿತ್ರ)
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನಲ್ಲಿ ಹಾನಿಯಾದ ಜಮೀನನ್ನು ಪರಿಶೀಲಿಸಿದ ಕೃಷಿ ಇಲಾಖೆ ಅಧಿಕಾರಿಗಳು(ಸಂಗ್ರಹ ಚಿತ್ರ)   

ಯಾದಗಿರಿ: ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ರೈತರ ಕೈಹಿಡಿಯಲು ಸರ್ಕಾರವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ, ಜಿಲ್ಲೆಯ ಬಹುತೇಕ ರೈತರಿಗೆ ಇದು ತಲುಪಿಲ್ಲ.

2019ರಲ್ಲಿಮುಂಗಾರು ಅವಧಿಗೆ 17,031 ಜನ ರೈತರು 24,495 ಹೆಕ್ಟೇರ್‌ಗೆ ಬೆಳೆ ವಿಮೆ ಮಾಡಿಸಿದ್ದಾರೆ. ಇದರಲ್ಲಿ 1,193 ಜನ ಬ್ಯಾಂಕ್‌ನಿಂದ ಸಾಲ ಪಡೆದವರು, 5,938 ಜನ ಸಾಲ ಪಡೆಯದವರು ಸೇರಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ‌2716 ಹೆಕ್ಟೇರ್‌ನಲ್ಲಿ 1,003 ರೈತರು ವಿಮೆಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. 812 ಜನ ಸಾಲ ಪಡೆದವರು, 191 ರೈತರು ಸಾಲ ಪಡೆಯದವರು ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಯಾರಿಗೂ ಪರಿಹಾರ ಸಿಕ್ಕಿಲ್ಲ.

ಭತ್ತಕ್ಕೆ 809 ಜನ ರೈತರು, ಜೋಳಕ್ಕೆ 114, 68 ಜನ ಕಡಲೆಗೆ, 9 ರೈತರು ಗೋಧಿ, ಕುಸುಬೆ ಬೆಳೆಗೆ 3 ಜನ ಬೆಳೆ ವಿಮೆ ಮಾಡಿಸಿದ್ದಾರೆ. ಮುಂಗಾರು ಹಂಗಾಮಿಗೆ ಯುನಿವರ್ಸಲ್‌ ಸೊಂಪೊ ಜನರಲ್‌ ಇನ್ಶುರೆನ್ಸ್‌ ಕಂಪನಿ ಆಯ್ಕೆಯಾಗಿದೆ.

ADVERTISEMENT

ಹತ್ತಿ, ಇರುಳ್ಳಿ ಬೆಳೆಗೆ ಶೇ 5ರಷ್ಟು, ಇನ್ನುಳಿದ ಬೆಳೆಗಳಿಗೆ ಶೇ 2ರಷ್ಟು ಪ್ರತಿ ಹೆಕ್ಟೇರ್‌ಗೆ ಬೆಳೆ ವಿಮೆ ಕಂತು ರೈತರು ಪಾವತಿಸಿದ್ದಾರೆ.

‘ಮುಂಗಾರಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರ ಲೆಕ್ಕಾಚಾರ ಹಾಕಲಾಗುವುದು. ಹಿಂಗಾರಿನ ಬೆಳೆ ವಿಮೆ ನೋಂದಣಿ 2019ರ ಫೆಬ್ರುವರಿ29ಕ್ಕೆ ಮುಕ್ತಾಯವಾಗಿದೆ’ ಎಂದುಕೃಷಿ ಇಲಾಖೆಅಧಿಕಾರಿಗಳು ತಿಳಿಸಿದ್ದಾರೆ.

2020–21ನೇ ಸಾಲಿನಲ್ಲಿ 8,374 ರೈತರು 13,883 ಹೆಕ್ಟೇರ್‌ಗೆ ಬೆಳೆ ವಿಮೆ ಮಾಡಿಸಿದ್ದಾರೆ. ಇದರಲ್ಲಿ 7,692 ರೈತರು ಬೆಳೆಗಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದಾರೆ. 682 ರೈತರು ಸಾಲ ಪಡೆದಿಲ್ಲ.

ತೊಗರಿ ಬೆಳೆಗೆ ಹೆಚ್ಚು ವಿಮೆ: 2020ರ ಸಾಲಿನಲ್ಲಿಜಿಲ್ಲೆಯಲ್ಲಿ ತೊಗರಿ ಬೆಳೆಗೆ ಹೆಚ್ಚಿನ ವಿಮೆ ಮಾಡಿಸಿದ್ದಾರೆ. ತೊಗರಿ ಬೆಳೆಗೆ 3,779, ಹತ್ತಿಗೆ 2,324, ಭತ್ತಕ್ಕೆ 2,029 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಇನ್ನುಳಿದಂತೆ ಹೆಸರು ಬೆಳೆಗೆ 136, ಶೇಂಗಾ 56, ಸೂರ್ಯಕಾಂತಿ 11, ಜೋಳ 6, ಉದ್ದು ಬೆಳೆಗೆ 3 ರೈತರು ಮುಂಗಾರು ಅವಧಿಯಲ್ಲಿ ಬೆಳೆ ವಿಮೆ ಮಾಡಿದ್ದಾರೆ.

‘ಬೆಳೆ ವಿಮೆ ಎನ್ನುವುದು ಬ್ಲೇಡ್‌ ಕಂಪನಿ ಇದ್ದಂತೆ. ರೈತರಿಗೆ ಉಪಯೋಗವಾಗುವಂತೆ ಅವರು ವಿಮೆ ಮಾಡಿಸುವುದಿಲ್ಲ. ಅಲ್ಲದೆ ವಿಮಾದಾರರು ಜಿಲ್ಲೆಯವರಾಗಿರದೆ ದೂರದ ಬೆಂಗಳೂರು ಇನ್ನಿತರ ಮಹಾನಗರಳಲ್ಲಿ ಇರುತ್ತಾರೆ. ರೈತರ ಸಂಪರ್ಕಕ್ಕೆ ಸಿಗುವುದಿಲ್ಲ.ರೈತರು ತಮಗೆ ಬೇಕಾದ ಬೆಳೆಗೆ ವಿಮೆ ಮಾಡಿಸುವಂತೆ ಯೋಜನೆ ಇರಬೇಕು. ಆದರೆ, ವಿಮೆದಾರರಿಗೆ ತಕ್ಕಂತೆ ಬೆಳೆ ವಿಮೆ ನಿಗದಿ ಮಾಡುತ್ತಾರೆ’ ಎನ್ನುತ್ತಾರೆರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿಮಲ್ಲಿಕಾರ್ಜುನ ಸತ್ಯಂಪೇಟೆ.

‘ರೈತರಿಗೆ ಬೆಳೆ ವಿಮೆ ಮಾಡಿಸುವುದು ಮಾತ್ರ ನಮ್ಮ ಕೆಲಸ. ವಿಮಾ ಕಂಪನಿಯವರೇರೈತರಿಗೆ ಪರಿಹಾರ ಧನ ನೀಡುತ್ತಾರೆ’ ಎಂದು ಜಂಟಿ ಕೃಷಿ ನಿರ್ದೇಶಕಿದೇವಿಕಾ ಆರ್. ಮಾಹಿತಿ ನೀಡುತ್ತಾರೆ.

‘2018–19ನೇ ಸಾಲಿನಲ್ಲಿ ಮುಂಗಾರು ಅವಧಿಯಲ್ಲಿ ಬರ ಆವರಿಸಿತ್ತು. ಆ ವೇಳೆ ಜಿಲ್ಲೆಯ 12 ಸಾವಿರ ರೈತರಿಗೆ ₹14 ಕೋಟಿ ಬೆಳೆ ವಿಮೆ ಬಂದಿತ್ತು’ ಎನ್ನುತ್ತಾರೆ ಅವರು.

ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಂಡ ರೈತರಿಗೂ ಈಗ ಬೆಳೆ ವಿಮೆ ಮಾಡಿಸುವುದು ಕಡ್ಡಾಯವಲ್ಲ. ಹೀಗಾಗಿ ಬೆಳೆ ವಿಮೆ ಮಾಡಿಸುವ ರೈತರ ಸಂಖ್ಯೆ, ವಿಸ್ತೀರ್ಣ ಕಡಿಮೆಯಾಗಿದೆ

ದೇವಿಕಾ ಆರ್., ಜಂಟಿ ಕೃಷಿ ನಿರ್ದೇಶಕಿ

***

ಬೆಳೆ ವಿಮೆ ಎನ್ನುವುದು ರೈತರಿಗೆ ಮೋಸ ಮಾಡುವ ಕಂಪನಿಯಾಗಿದೆ. ಸರ್ಕಾರ ಪರೋಕ್ಷವಾಗಿ ಖಾಸಗಿಯವರಿಗೆ ಕೊಟ್ಟು ರೈತರಿಗೆ ದ್ರೋಹ ಮಾಡುತ್ತಿದೆ

ಮಲ್ಲಿಕಾರ್ಜುನ ಸತ್ಯಂಪೇಟೆ ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.