ADVERTISEMENT

ಕೆಂಭಾವಿ: ಅಕಾಲಿಕ ಮಳೆಗೆ ನೆಲಕಚ್ಚಿದ ಭತ್ತ

ಕೆಂಭಾವಿ ವಲಯದಲ್ಲಿ 300 ಎಕರೆ ಬೆಳೆ ಹಾನಿ; ಪ್ರಾಥಮಿಕ ಹಂತದ ಸಮೀಕ್ಷೆ ವರದಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:16 IST
Last Updated 27 ಏಪ್ರಿಲ್ 2022, 4:16 IST
ಕೆಂಭಾವಿ ವಲಯದಲ್ಲಿ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಹಾನಿಗೀಡಾದ ಭತ್ತದ ಜಮೀನುಗಳಿಗೆ ಮಂಗಳವಾರ ಗ್ರಾಮ ಲೇಖಪಾಲಕ ಬಸವರಾಜ ಬೋರಗಿ ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ವಾದಿರಾಜ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಕೆಂಭಾವಿ ವಲಯದಲ್ಲಿ ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ಹಾನಿಗೀಡಾದ ಭತ್ತದ ಜಮೀನುಗಳಿಗೆ ಮಂಗಳವಾರ ಗ್ರಾಮ ಲೇಖಪಾಲಕ ಬಸವರಾಜ ಬೋರಗಿ ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ವಾದಿರಾಜ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಕೆಂಭಾವಿ:ಸೋಮವಾರ ರಾತ್ರಿ ಸುರಿದ ಅಕಾಲಿಕ ಮಳೆಯಿಂದ ವಲಯದ ಹಲವೆಡೆ ಭತ್ತ ನೆಲಕಚ್ಚಿದ್ದು, ರೈತರು ಕಂಗಾಲಾಗಿದ್ದಾರೆ. ರಾತ್ರಿ 10ರ ಸುಮಾರಿಗೆ ಭಾರಿ ಗಾಳಿ ಜತೆ ಪ್ರಾರಂಭವಾದ ಮಳೆ ರಭಸವಾಗಿ ಸುರಿಯಿತು.

ಇದರಿಂದ ಕಟಾವು ಹಂತಕ್ಕೆ ಬಂದ ಬತ್ತ ನೆಲಕಚ್ಚಿ ಹಾಳಾದರೆ, ಇತ್ತ ರಾಶಿ ಮಾಡಿ ಒಟ್ಟುಗೂಡಿಸಿದ್ದ ಭತ್ತದ ಬೆಳೆಗಳಿಗೆ ನೀರು ನುಗ್ಗಿದ್ದರಿಂದ ರೈತರು ಹೈರಾಣಾಗಿದ್ದಾರೆ. ಈಗಾಗಲೆ ವಲಯದಲ್ಲಿ ಶೇ 80ರಷ್ಟು ಭತ್ತದ ರಾಶಿ ಮಾಡಿದ್ದು ಇನ್ನುಳಿದ ಬೆಳೆ ರಾಶಿ ಮಾಡಲು ರೈತರು ಧಾಂಗುಡಿ ಇಟ್ಟಿದ್ದರೂ ಈ ಅಕಾಲಿಕ ಮಳೆ ಸಂಪೂರ್ಣ ಭತ್ತದ ಗದ್ದೆಯನ್ನು ಹಾಳು ಮಾಡಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ರೈತರು ಇದ್ದಾರೆ.

ಕೆಂಭಾವಿ, ಕೂಡಲಗಿ, ಬೈಚಬಾಳ, ಮುದನೂರ, ಮಾಲಗತ್ತಿ, ಜೈನಾಪುರ, ಪರಸನಹಳ್ಳಿ, ಕಿರದಳ್ಳಿ, ಯಡಿಯಾಪೂರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಭತ್ತದ ಬೆಳೆಗಳು ಕಟಾವಾಗದೆ ಅಕಾಲಿಕ ಮಳೆಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಅಧಿಕಾರಿಗಳ ಭೇಟಿ: ಅಕಾಲಿಕ ಮಳೆಗೆ ಹಾಳಾದ ಜಮೀನುಗಳಿಗೆಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದರು.

ಪ್ರಾಥಮಿಕ ಹಂತದ ಸಮೀಕ್ಷೆ ಪ್ರಕಾರ ವಲಯದಲ್ಲಿ ಸುಮಾರು 300ಕ್ಕೂ ಹೆಚ್ಚು ಎಕರೆ ಕೃಷಿ ಜಮೀನಿನ ಭತ್ತ ಹಾಳಾಗಿದೆ. ಉಳಿದ ಹಾನಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಹಾನಿಯ ಅಂದಾಜು ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಗ್ರಾಮ ಲೇಖಪಾಲಕ ಬಸವರಾಜ ಬೋರಗಿ ಹಾಗೂ ಕೃಷಿ ಇಲಾಖೆಯ ತಾಂತ್ರಿಕ ಸಹಾಯಕ ವಾದಿರಾಜ ಕುಲಕರ್ಣಿ ಹೇಳಿದರು.

ಬೆಳೆ ಹಾನಿ ಕುರಿತು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಬಿಜೆಪಿ ಸರ್ಕಾರ ಪರ್ಸೈಂಟೈಸ್‍ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೇವಲ ಬೆಂಗಳೂರಿಗೆ ಸೀಮಿತವಾಗಿರುವ ಸರ್ಕಾರದ ಆಡಳಿತ ಗ್ರಾಮೀಣ ಪ್ರದೇಶದ ರೈತರ ಗೋಳನ್ನು ಕೇಳದೆ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಜಿಲ್ಲೆಯಲ್ಲಿ ಈಗಾಗಲೆ ಮೂರು ಬಾರಿ ಅಕಾಲಿಕ ಮಳೆ ಸುರಿದು ರೈತರ ಬೆಳೆಗಳು ಹಾಳಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಡಳಿತವಾಗಲಿ ಸ್ಪಂದನೆ ಮಾಡದೆ ಇರುವುದನ್ನು ನೋಡಿದರೆ ಇದು ರೈತ ವಿರೋಧಿ ಸರ್ಕಾರ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

*
ಅಕಾಲಿಕ ಮಳೆಯಿಂದ ಯಾದಗಿರಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಖುದ್ದು ಮುಖ್ಯಮಂತ್ರಿಗಳು ವಿಶೇಷ ಗಮನ ಹರಿಸಿ ಹಾಳಾದ ಬೆಳೆಗಳ ಸಮೀಕ್ಷೆ ನಡೆಸಿ ರೈತರಿಗೆ ನ್ಯಾಯ ಒದಗಿಸಬೇಕು.
- ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.