ADVERTISEMENT

ಸುರಪುರ: ದಲಿತ ಸಂಘಟನೆಗಳ ಪ್ರತಿಭಟನೆ

ಸಂವಿಧಾನ ದಿನ ಬದಲಾಯಿಸಲು ಹೊರಟ ಕೇಂದ್ರ; ಆರೋಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 2:51 IST
Last Updated 27 ನವೆಂಬರ್ 2022, 2:51 IST
ಸುರಪುರದಲ್ಲಿ ಶನಿವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಾ. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ಶನಿವಾರ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಾ. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು   

ಸುರಪುರ: ಸಂವಿಧಾನ ಸಮರ್ಪಣಾ ದಿನವನ್ನು ಕೇಂದ್ರ ಸರ್ಕಾರ ಬದಲಾಯಿಸಲು ಮುಂದಾಗಿದೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ನಗರದ ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಸುಟ್ಟು ಪ್ರತಿಭಟನೆ ನಡೆಸಿದರು.

ಬುದ್ದ ವಿಹಾರದಿಂದ ಮಹಾತ್ಮ ಗಾಂಧಿ ವೃತ್ತದ ಮೂಲಕ ಡಾ.ಬಾಬಾ ಸಾಹೇಬ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಬಾಬಾ ಸಾಹೇಬರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಸಂವಿಧಾನ ಸಮರ್ಪಣಾ ದಿನ ಆಚರಿಸಿದರು.

ದಲಿತರ ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ, ನಾಗಣ್ಣ ಕಲ್ಲದೇವನಳ್ಳಿ ಇತರರು ಮಾತನಾಡಿ, ನ.26ರನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ತರೆಮರೆಯಲ್ಲಿ ಈ ದಿನವನ್ನು ಬ್ರಾಹ್ಮಣ ಶ್ರೇಷ್ಠತೆ ಪ್ರತಿಪಾದಿಸುವ ಚಾತುರ್ವರ್ಣ ಮತ್ತು ಜಾತಿಪದ್ದತಿಯ ವೈಭವೀಕರಣ ದಿನವನ್ನಾಗಿ ಬದಲಾಯಿಸಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ADVERTISEMENT

ಈಚೆಗೆ ಪ್ರಧಾನಿ, ವೇದಗಳಲ್ಲಿಯೂ ಪ್ರಜಾಪ್ರಭುತ್ವದ ತತ್ವಗಳು ಇವೆ ಎಂದು ಹೇಳಿರುವುದು ಪರೋಕ್ಷವಾಗಿ ಚಾತುರ್ವರ್ಣವನ್ನು ಪೋಷಿಸಿದಂತಾಗಿದೆ. ಕೇಂದ್ರ ಸರ್ಕಾರ ಬಹುತ್ವ ಭಾರತವನ್ನು ಬ್ರಾಹ್ಮಣಶಾಯಿ ಆಡಳಿತಕ್ಕೆ ಒಳಪಡಿಸುವ ಸಂಚು ರೂಪಿಸುತ್ತಿದೆ. ಈ ನಡೆಯನ್ನು ಗಮನಿಸಿದರೆ ದೇಶದಲ್ಲಿ ಜಾತಿಪದ್ಧತಿಯನ್ನು ಅನುಷ್ಠಾನಗೊಳಿಸುವ ಮೂಲಕ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲು ಹೊರಟಿದೆ ಎಂದು ದೂರಿದರು.

ಕೆಂದ್ರ ಸರ್ಕಾರ ಕೂಡಲೆ ಇದನ್ನು ಕೈ ಬಿಡುವಂತೆ ಒತ್ತಾಯಿಸಿದರು. ನಿರ್ಲಕ್ಷ ವಹಿಸದಲ್ಲಿ ಒಕ್ಕೂಟ ರಾಜ್ಯದಾದ್ಯಂತ ಉಗ್ರಸ್ವರೂಪದ ಹೋರಾಟ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮಾನಪ್ಪ ಬಿಜಾಸ್ಪೂರ, ಶರಣಪ್ಪ ವಾಗಣಗೇರಿ, ಹಣಮಂತ ಭದ್ರಾವತಿ, ವೀರಭದ್ರ ತಳವಾರಗೇರಿ, ಭೀಮರಾಯ ಸಿಂಧಗೇರಿ, ಮೂರ್ತಿ ಬೊಮ್ಮನಳ್ಳಿ, ಖಾಜಾಹುಸೇನ ಗುಡುಗುಂಟಿ, ಜಟ್ಟೆಪ್ಪ ನಾಗರಾಳ, ಮಹೇಶ ಯಾದಗಿರಿ ಸೇರಿದಂತೆ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು, ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.