ADVERTISEMENT

ದಲಿತರು, ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತು: ಲೇಖಕಿ ಜಯದೇವಿ ಗಾಯಕವಾಡ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 8:17 IST
Last Updated 27 ಜನವರಿ 2026, 8:17 IST
ಯಾದಗಿರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನವನ್ನು ಬಿಡುಗಡೆ ಮಾಡಿದರು
ಯಾದಗಿರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನವನ್ನು ಬಿಡುಗಡೆ ಮಾಡಿದರು   

ಯಾದಗಿರಿ: ‘ಸಾವಿರಾರು ವರ್ಷಗಳ ಹಿಂದೆ ಶಿಕ್ಷಣ ಇರದ ದಲಿತರು ಹಾಗೂ ಮಹಿಳೆಯರಿಗೆ ಅಕ್ಷರ ಲೋಕವೇ ಸ್ವತ್ತಾಗಬೇಕು. ಅಕ್ಷರವೇ ಜೀವನ ಸಂಗಾತಿಯಾಗಬೇಕು’ ಎಂದು ಲೇಖಕಿ ಜಯದೇವಿ ಗಾಯಕವಾಡ ಹೇಳಿದರು.

‘ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಜಿಲ್ಲಾ ಘಟಕದ ವತಿಯಿಂದ ಮರಿಯಪ್ಪ ನಾಟೇಕರ್ ಅವರು ಬರೆದ ‘ಕಾಗೆ ಬಣ್ಣದ ಕವಿತೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಲಿತ ಮತ್ತು ಬಂಡಾಯ ಸಾಹಿತ್ಯಕ್ಕೆ ತನ್ನದೆಯಾದ ಪರಂಪರೆಯಿದೆ. ಸಿದ್ದಲಿಂಗಯ್ಯ, ದೇವನೂರು ಮಹಾದೇವ, ಚೆನ್ನಣ್ಣ ವಾಲೀಕಾರ, ಜಂಬಣ್ಣ ಅಮರಚಿಂತ, ಅರವಿಂದ ಮಾಲಗತ್ತಿ ಸೇರಿ ಹಲವರ ವರೆಗೆ ಮುಂದುವರೆದದ್ದು ಕಾಣುತ್ತೇವೆ. ಕಾಗೆ ನಿರ್ಲಕ್ಷ್ಯಕ್ಕೆ ಒಳಗಾದ, ಅಪಶಕುನದ ಸಂಕೇತದ ಪಕ್ಷಿ. ಕವನ ಸಂಕಲನಕ್ಕೆ ಕಾಗೆ ಹೆಸರು ಇರಿಸಿ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯದ ಧ್ವನಿಯಾಗಿ ಪ್ರತಿನಿಧಿಸುತ್ತದೆ’ ಎಂದರು.

ADVERTISEMENT

‘ಬರಹಗಾರನಿಗೆ ಸಂವೇದನೆ ಇರದೆ ಇದ್ದರೆ ಆತ ಕವಿಯಾಗಲಾರ. ಇದರಲ್ಲಿ ಬಡವರ ಪರವಾದ ಧ್ವನಿ ಇದೆ. ಶೋಷಣೆ, ಸಂಕಟ, ನೋವುಗಳ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಶಬ್ದಗಳ ಸಂಪತ್ತಿನಿಂದ ಕೂಡಿರುವ ಸರಳವಾದ ಭಾಷೆ ಇದ್ದು, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪುಸ್ತಕದಲ್ಲಿನ ‘ಸರಸ್ವತಿ ನೀನೊಮ್ಮೆ ನನಗೂ ಹೆಂಡತಿಯಾಗು’ ಎಂಬ ಕವನವು ನಮ್ಮೆಲ್ಲರನ್ನು ಒಂದು ಹಂತಕ್ಕೆ ಕರೆದುಕೊಂಡು ಹೋಗುವಂತೆ ಇದೆ’ ಎಂದು ಹೇಳಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ, ‘ಪುಸ್ತಕದಲ್ಲಿನ ಕವನಗಳು ಬಹಳ ಸರಳವಾಗಿದ್ದು, ಎಲ್ಲರಿಗೂ ಅರ್ಥವಾಗುತ್ತವೆ. ಮರಿಯಪ್ಪ ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ. ಸರ್ಕಾರದಿಂದ ಅವರಿಗೆ ಅಗತ್ಯ ನೆರವು ನೀಡಲು ಪ್ರಯತ್ನಿಸುತ್ತೇನೆ’ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಓದುವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಈ ಹಿಂದಿನ ಕಾಲದಲ್ಲಿ ಸಮಯ ಕಳೆಯಲು ಪುಸ್ತಕಗಳೇ ಆಧಾರವಾಗಿದ್ದವು. ಈಗ, ಎಲ್ಲರ ಕೈಯಲ್ಲಿ ಮೊಬೈಲ್‌ ಬಂದಿದ್ದು, ಒಬ್ಬರ ಮುಖ ಇನ್ನೊಬ್ಬರು ನೋಡದಷ್ಟು ಮೊಬೈಲ್‌ನಲ್ಲಿ ಮುಳುಗಿದ್ದಾರೆ’ ಎಂದರು.

ಗುರುಮಠಕಲ್ ಖಾಸಾಮಠದ ಗುರು ಮುರುಘರಾಜೇಂದ್ರ ಸ್ವಾಮೀಜಿ,  ಕಸಾಪ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಲೇಖಕ ಮರಿಯಪ್ಪ ನಾಟೇಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ  ಬಸವರಾಜ ವಿಭೂತಿಹಳ್ಳಿ ಮುಖಂಡರಾದ ರಾಚನಗೌಡ ಮುದ್ನಾಳ, ಮಹೇಶರೆಡ್ಡಿ ಮುದ್ನಾಳ, ದೇವರಾಜ ನಾಯಕ್ ಸಿದ್ದಣ್ಣಗೌಡ ಕಾಡಂನೋರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪುಸ್ತಕ ಪರಿಚಯ ಕೃತಿ: ಕಾಗೆ ಬಣ್ಣದ ಕವಿತೆ ಲೇಖಕ: ಮರಿಯಪ್ಪ ನಾಟೇಕರ್  ಪ್ರಕಾಶನ: ಅಭಿಜಿತ್ ಪ್ರಕಾಶನ ಪುಟ: 76 ಬೆಲೆ: ₹100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.