ADVERTISEMENT

ಬೆಳೆಸಾಲ ಯೋಜನೆಯ ಯಶಸ್ವಿಗೆ ಶ್ರಮಿಸಿ

ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 15:22 IST
Last Updated 17 ಡಿಸೆಂಬರ್ 2018, 15:22 IST
ಯಾದಗಿರಿಯ ಎಸ್‌ಬಿಐ ಬ್ಯಾಂಕಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಗೋಪಾಲ್‌ ಅವರೊಂದಿಗೆ ಸಮಾಲೋಚಿಸಿದರು
ಯಾದಗಿರಿಯ ಎಸ್‌ಬಿಐ ಬ್ಯಾಂಕಿಗೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಗೋಪಾಲ್‌ ಅವರೊಂದಿಗೆ ಸಮಾಲೋಚಿಸಿದರು   

ಯಾದಗಿರಿ: ‘ಬೆಳೆಸಾಲ ಮನ್ನಾ ಯೋಜನೆಗೆ ಸಂಬಂಧಿಸಿದಂತೆ ಬ್ಯಾಂಕ್‌ ಅಧಿಕಾರಿಗಳು ರೈತರಿಂದ ಸೂಕ್ತ ದಾಖಲಾತಿಗಳನ್ನು ಸಂಗ್ರಹಿಸಬೇಕು. ಅನಗತ್ಯ ಕಾಯಿಸದೆ ಅವರಿಗೆ ಟೋಕನ್ ನೀಡುವ ಮೂಲಕ ಸಮಯ ನಿಗದಿಪಡಿಸಿಕೊಡಬೇಕು. ಬ್ಯಾಂಕಿಗೆ ಬಂದ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಬೆಳೆಸಾಲ ಯೋಜನೆ ನೋಂದಣಿ ಆರಂಭಗೊಂಡ ಹಿನ್ನೆಲೆಯಲ್ಲಿ ಅವರು ನಗರದಲ್ಲಿ ಸೋಮವಾರ ಯಾದಗಿರಿ ನಗರದ ಎಸ್‌ಬಿಐ (ಎಡಿಬಿ), ಪಿಕೆಜಿಬಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

‘ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡುವ ಸಲುವಾಗಿ ಸರ್ಕಾರ ಒಂದು ತಂತ್ರಾಂಶವನ್ನು ತಂದಿದ್ದು, ಜಿಲ್ಲೆಯಲ್ಲಿ ಜಾರಿ ಮಾಡಲು ಕೆಲ ನಿರ್ದೇಶನಗಳನ್ನು ನೀಡಿದೆ. ಅದಕ್ಕಾಗಿ ಜಿಲ್ಲೆಯ ಎಲ್ಲಾ ರೈತರು ನೀಡಿರುವ ಸೂಚನೆಗಳನ್ನು ಪಾಲಿಸಿ ಬೆಳೆ ಸಾಲ ಮನ್ನಾ ಯೋಜನೆಯನ್ನು ಯಶಸ್ವಿಗೊಳಿಸಬೇಕು’ ಎಂದು ಅವರು ಹೇಳಿದರು.

ADVERTISEMENT

‘ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಸರ್ವೇ ನಂಬರ್‌ನ ಮಾಹಿತಿ ತಪ್ಪದೇ ಸಲ್ಲಿಸಬೇಕು. ಪಹಣಿ ಪತ್ರಿಕೆ ಸಲ್ಲಿಸುವ ಅವಶ್ಯ ಇರುವುದಿಲ್ಲ. ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ತದ ನಂತರದ ರೈತರಿಗೆ ಕ್ರಮ ಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ, ಟೋಕನ್‌ಗಳನ್ನು ನೀಡಲಾಗುವುದು. ಟೋಕನ್‌ನಲ್ಲಿ ನೀಡಿದ ದಿನಾಂಕಗಳಂದು ರೈತರು ಬ್ಯಾಂಕ್ ಶಾಖೆಗೆ ತೆರಳಿ ರೈತರ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಮತ್ತು ಭೂಮಿಯ ಸರ್ವೆ ನಂಬರ್ ವಿವರಗಳನ್ನು ಒದಗಿಸಬೇಕು’ ಎಂದು ತಿಳಿಸಿದರು.

‘ಅರ್ಹರಿರುವ ಎಲ್ಲಾ ರೈತರಿಗೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ನೀಡಲಾಗಿದೆ. ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೇ ಶಾಂತ ರೀತಿಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಬೇಕು’ ಎಂದರು.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್‌ನ್ನು ಕೂಡ ನೀಡಲಾಗಿದೆ. ರೈತರಿಗೆ ಯಾವುದಾದರೂ ಗೊಂದಲ, ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ 08473-253703 ಸಂಖ್ಯೆಯನ್ನು ಸಂಪರ್ಕಿಸಿ, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಗೋಪಾಲ. ‘ಜಿಲ್ಲೆಯಲ್ಲಿ ಒಟ್ಟು 93,563 ರೈತರು ಅಂದಾಜು ಒಟ್ಟು ₹770 ಕೋಟಿಯಷ್ಟು ಬೆಳೆಸಾಲ ಪಡೆದಿದ್ದಾರೆ. ಇದು ಕೇವಲ ರಾಷ್ಟ್ರೀಕೃತ ಬ್ಯಾಂಕುಗಳ ಮಾಹಿತಿ. ಸರ್ಕಾರದ ಮೊದಲಿಗೆ ಸಹಕಾರ ಬ್ಯಾಂಕುಗಳಲ್ಲಿ ಇರುವ ರೈತರ ಸಾಲಮನ್ನಾಕ್ಕೆ ಆದೇಶಿಸಿದೆ. ಸಹಕಾರ ಬ್ಯಾಂಕಿನಲ್ಲಿ ರೈತರ ಸಾಲ ಇದ್ದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲೂ ಕೃಷಿ ಸಾಲ ಪಡೆದಿದ್ದರೆ ಮೊದಲು ಸಹಕಾರ ಬ್ಯಾಂಕಿನಲ್ಲಿ ಇರುವ ಸಾಲ ಮನ್ನಾ ಆಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.