ADVERTISEMENT

ಬೆಳೆ ಹಾನಿ ಸರ್ವೆ ತ್ವರಿತವಾಗಿ ಮುಗಿಸಲು ಡಿಸಿ ಸೂಚನೆ

ಸಮೀಕ್ಷೆಯ ಮಾಹಿತಿಯನ್ನು ಗ್ರಾ.ಪಂ ಕಚೇರಿ ಮುಂದೆ ಕಡ್ಡಾಯವಾಗಿ ಅಂಟಿಸಿ: ಡಿಸಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 7:57 IST
Last Updated 12 ಆಗಸ್ಟ್ 2021, 7:57 IST
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ ಇದ್ದರು
ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ ಇದ್ದರು   

ಯಾದಗಿರಿ: ಬೆಳೆ ಹಾನಿ ಸರ್ವೆ ತ್ವರಿತವಾಗಿ ಮುಗಿಸಿ ರೈತರಿಗೆ ಸರ್ಕಾರದ ಸೌಲತ್ತು ಒದಗಿಸಿ. ಬೆಳೆ ಪರಿಹಾರ ಮತ್ತು ಬೆಳೆವಿಮೆ ಪರಿಹಾರ ಪಡೆದಿರುವ ಫಲಾನುಭವಿಗಳು ಮತ್ತು ಹಾನಿಯಾದ ರೈತರ ಬೆಳೆ ಸಮೀಕ್ಷೆ ಮಾಹಿತಿಯ ಹೆಸರಿನ ಪಟ್ಟಿಯನ್ನು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ನೋಟಿಸ್ ಬೋರ್ಡ್‌ಗೆ ಕಡ್ಡಾಯವಾಗಿ ಅಂಟಿಸಿ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಅಧಿಕಾರಿಗಳಿಂದ ಬೆಳೆ ಹಾನಿಯ ಸರ್ವೆ ಕುರಿತು ಮಾಹಿತಿ ಪಡೆದರು.

ಜಿಲ್ಲೆಯ ಸುರಪುರ ತಾಲ್ಲೂಕಿನ 19 ಹಳ್ಳಿಗಳಲ್ಲಿ 543 ಹೆಕ್ಟೇರ್ ಸರ್ವೆ ಮಾಡಿದ್ದು, ಒಟ್ಟು 1,178 ಹೆಕ್ಟೇರ್ ಬೆಳೆ ಹಾನಿ ಎಂದು ಅಂದಾಜಿಸಲಾಗಿದೆ. ಶಹಾಪುರ ತಾಲ್ಲೂಕಿನ ನಾಲ್ಕು ಹಳ್ಳಿಗಳಲ್ಲಿ 499 ಹೆಕ್ಟೇರ್, ಹುಣಸಗಿ ತಾಲ್ಲೂಕಿನಲ್ಲಿ 29.22 ಹೆಕ್ಟೇರ್, ವಡಗೇರಾ ತಾಲ್ಲೂಕಿನಲ್ಲಿ ಒಟ್ಟು 18 ಹಳ್ಳಿಯಲ್ಲಿ 1,076 ಹೆಕ್ಟೇರ್ ಜಮೀನನ್ನು ಸರ್ವೆ ಮಾಡಲಾಗಿದೆ ಎಂದು ತಹಶೀಲ್ದಾರರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ಯಾದಗಿರಿ 35, ಶಹಾಪುರ 29, ಸುರಪುರ 41, ಹುಣಸಗಿ 29, ವಡಗೇರಾ 51 , ಗುರುಮಠಕಲ್ 35 ಮನೆಗಳು ಹಾನಿಯಾಗಿವೆ ಎಂದು ತಹಶೀಲ್ದಾರರು ಮಾಹಿತಿ ನೀಡಿದರು.

ADVERTISEMENT

ಯಾದಗಿರಿ ತಾಲ್ಲೂಕಿನ ಬಸವನಗರ ಹಾಗೂ ಶಹಾಪುರ ತಾಲ್ಲೂಕಿನ ಹೊಸೂರು ಗ್ರಾಮಗಳನ್ನು ಕಂದಾಯ ಗ್ರಮಗಳನ್ನಾಗಿ ಪರಿವರ್ತಿಸಲು ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಿದ ಪ್ರಗತಿ ವಿವರವನ್ನು ಜಿಲ್ಲಾಧಿಕಾರಿ ಅಧಿಕಾರಿಗಳಿಂದ ಮಾಹಿತಿ ಕೇಳಿದರು.

ಯಾದಗಿರಿ ತಾಲ್ಲೂಕಿನಲ್ಲಿ ಒತ್ತುವರಿಯಾದ 230 ಎಕರೆ ಜಮೀನಿನ ಪೈಕಿ ಕಂದಾಯ ಇಲಾಖೆಗೆ ಸೇರಿದ 190 ಎಕರೆ 20 ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿರುವ 128 ಜನರ ವಿರುದ್ಧ ಹಾಗೂ ಸುರಪುರ ತಾಲ್ಲೂಕಿನಲ್ಲಿ ಒತ್ತುವರಿಯಾದ 305 ಎಕರೆ ಪೈಕಿ 125 ಎಕರೆ 19 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ 71 ಜನರ ವಿರುದ್ಧ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯ ಬೆಂಗಳೂರಿನಲ್ಲಿ ದಾವೆ ಹೂಡಲಾಗಿದೆ ಎಂದು ತಹಶೀಲ್ದಾರರು ಮಾಹಿತಿ ನೀಡಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳತಹಶೀಲ್ದಾರರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.