ADVERTISEMENT

ಯಾದಗಿರಿ: ಬಂಜಾರ ಯುವತಿಯರ ಸಂಭ್ರಮದ ದೀಪಾವಳಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 14:35 IST
Last Updated 16 ನವೆಂಬರ್ 2020, 14:35 IST
ಯರಗೋಳ ಸಮೀಪದ ಥಾವರು ನಾಯಕ ತಾಂಡಾದಲ್ಲಿ ದೀಪಾವಳಿ ಹಬ್ಬಕ್ಕೆ ಜ್ಯೋತಿ ಬೆಳಗಿಸುತ್ತಿರುವ ಯುವತಿಯರು
ಯರಗೋಳ ಸಮೀಪದ ಥಾವರು ನಾಯಕ ತಾಂಡಾದಲ್ಲಿ ದೀಪಾವಳಿ ಹಬ್ಬಕ್ಕೆ ಜ್ಯೋತಿ ಬೆಳಗಿಸುತ್ತಿರುವ ಯುವತಿಯರು   

ಯರಗೋಳ (ಯಾದಗಿರಿ ಜಿಲ್ಲೆ): ಸಿಡಿಮದ್ದುಗಳ ಸದ್ದಿನ ಮಧ್ಯೆ ಸಾಂಪ್ರದಾಯಿಕ ಉಡುಪು ಧರಿಸಿ ಹಾಡು, ನೃತ್ಯದೊಂದಿಗೆ ಕಾಡಿನಿಂದ ಕಣಗಲೆ ಹೂ ತಂದು, ಥಾವರು ನಾಯಕ ತಾಂಡಾದ ಯುವತಿಯರು ದೀಪಾವಳಿ ಹಬ್ಬಕ್ಕೆ ಕಳೆ ತಂದರು.

ಯರಗೋಳ ಸುತ್ತಲಿನ ತಾನುನಾಯಕ, ಕೇಮುನಾಯಕ, ವೆಂಕಟೇಶ್ ನಗರ, ಲಿಂಗಸನಳ್ಳಿ, ಅಡಮಡಿ, ಮುದ್ನಾಳ, ಕಂಚಗಾರಳ್ಳಿ ತಾಂಡಾದಲ್ಲಿ ಬಂಜಾರ ಸಮುದಾಯದ ಯುವತಿಯರು ದೀಪಾವಳಿ ವಿಶೇಷವಾಗಿ ಆಚ‍ರಿಸಿದರು.

ಥಾವರು ನಾಯಕ ತಾಂಡಾದ ಯುವತಿಯರು ಒಟ್ಟಾಗಿ ಸಾಂಪ್ರದಾಯಿಕ ಬಣ್ಣದ ಉಡುಪು ತೊಟ್ಟು, ತಾಂಡಾದ ನಾಯಕನ ಮನೆಗೆ ತೆರಳಿ ಹೂ ತರಲು ಬುಟ್ಟಿ ಪಡೆದು, ಮಲ್ಲಿಗೆ ಹೂವಿನಿಂದ ಸಿಂಗರಿಸಿ ಕಾಲಿಗೆ ಗೆಜ್ಜೆಕಟ್ಟಿಕೊಂಡು ತಮಟೆ ಸದ್ದಿಗೆ ಹಾಡುತ್ತ, ನೃತ್ಯ ಮಾಡುತ್ತ ಕಣಗಲೆ ಹೂ ತರಲು ಕಾಡಿಗೆ ತೆರಳಿದರು.

ADVERTISEMENT

ಬೆಟ್ಟದಲ್ಲಿರುವ ಬಂಡೆಮ್ಮ ದೇವಿಗೆ ಕರ್ಪೂರ ಬೆಳಗಿ, ಟೆಂಗಿನ ಕಾಯಿ ಒಡೆದು, ಪೂಜೆ ನೆರವೇರಿಸಿ ಗೆಳತಿಯರೊಂದಿಗೆ ಸಂಭ್ರಮಿಸಿದರು.

ಮಧ್ಯಾಹ್ನದ ಸಮಯ ಮರಳಿ ತಾಂಡಾಕ್ಕೆ ಆಗಮಿಸಿ, ಗೆಳತಿಯರಿಗೆ ಹೂಗಳನ್ನು ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು. ಮನೆಯ ಮುಂದೆ ಸೆಗಣಿಯಿಂದ ಸವರಿದ ಸ್ಥಳದಲ್ಲಿ ಬಣ್ಣದ ಹೂಗಳಿಂದ ಅಲಂಕರಿಸಿ, ಅಂಗೈ ಅಗಲದ ಮಣ್ಣಿನ ಹಣತೆಯಲ್ಲಿ ದೀಪವನ್ನು ಹೊತ್ತಿಸಿ, ದೇವರಿಗೆ ಬೆಳಗಿ ತಮ್ಮ ಪರಿವಾರದವರನ್ನು ಕಾಪಾಡುವಂತೆ ಹರಕೆ ಹೊತ್ತರು.

ಮದುವೆ ನಿಶ್ಚಿಯವಾದ ಯುವತಿಯರು ತಮ್ಮ ತಂದೆ, ತಾಯಿ, ಸಹೋದರರು, ಹಿರಿಯರು ಚೆನ್ನಾಗಿರಲಿ ಮುಂದಿನ ದೀಪಾವಳಿಗೆ ಹರಕೆ ಜ್ಯೋತಿ ಬೆಳಗುವೆ ಎಂದು ಪಾರ್ಥಿಸುತ್ತಾರೆ. ಹಿರಿಯರಿಂದ ಹಣದ ರೂಪದಲ್ಲಿ ಉಡುಗೊರೆಯನ್ನು ಸ್ವೀಕರಿಸಿ ಸಂತಸ ಪಟ್ಟರು.

ಹಳದಿ, ಹಸಿರು, ಗುಲಾಬಿ, ನೀಲಿ ಬಣ್ಣದ ಲಂಗಾ, ದಾವಣಿ ತೊಟ್ಟ ಯುವತಿಯರು ಸೇವಾಲಾಲ್, ಮರೆಮ್ಮ ದೇವಿ ಮಂದಿರದ ಮುಂದೆ ದೀಪಗಳನ್ನು ಬೆಳಗಿಸಿದರು.

‘ರಾತ್ರಿ ಪಟಾಕಿ ಹೊತ್ತಿಸಿ ಸಂತಸ ಪಟ್ಟರು. ಮನೆಯಲ್ಲಿ ಹಬ್ಬಕ್ಕೆ ಸಿಹಿಯಾದ ಹೋಳಿಗೆ ಮಾಡಲಾಗಿತ್ತು’ಎಂದು ಯುವಕ ಅಶೋಕ ಚವ್ಹಾಣ ತಿಳಿಸಿದರು.

‘ದೇಶದಲ್ಲಿ ಹಲವು ಸಮುದಾಯಗಳ ಸಂಸ್ಕೃತಿ ಮರೆಯಾಗುತ್ತಿದ್ದರೆ, ಬಂಜಾರ ಸಮುದಾಯದವರು ರಕ್ಷಣೆ ಮಾಡುತ್ತಿದ್ದಾರೆ’ಎಂದು ಮುದ್ನಾಳ ದೊಡ್ಡ ತಾಂಡಾದ ಯಂಕಪ್ಪ ಹೇಳಿದರು.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಥಾವರು ನಾಯಕ ತಾಂಡದ ನಾಯಕ ರಾಜು ಚವ್ಹಾಣ, ಅಶೋಕ, ರಾಮು, ಪೂಜಾ ಚವ್ಹಾಣ, ಅರುಣಾ, ಗೌರಿ, ಪ್ರೀತಿ ಇದ್ದರು.

_____

ವರದಿ:ತೋಟೇಂದ್ರ ಎಸ್.ಮಾಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.