ADVERTISEMENT

ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಸಂಸದ ಅಮರೇಶ್ವರ ನಾಯಕ

ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 3:29 IST
Last Updated 17 ಜುಲೈ 2021, 3:29 IST
ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಅಮರೇಶ್ವರ ನಾಯಕ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ವೆಂಕಟರೆಡ್ಡಿ ಮುದ್ನಾಳ ಇದ್ದರು
ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಅಮರೇಶ್ವರ ನಾಯಕ, ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ, ವೆಂಕಟರೆಡ್ಡಿ ಮುದ್ನಾಳ ಇದ್ದರು   

ಯಾದಗಿರಿ: ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣಾ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಸಭೆ ಆರಂಭವಾಗುತ್ತಲೇ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಆರಂಭಿಸಿದ ರಾಯಚೂರು ಸಂಸದ ಅಮರೇಶ್ವರ ನಾಯಕ ಅವರು, ಅಧಿಕಾರಿಗಳು ಕೃಷಿ ಇಲಾಖೆಯ ಯೋಜನೆಗಳನ್ನು ಜನರಿಗೆ ಸರಿಯಾಗಿ ತಲುಪಿಸಬೇಕು ಎಂದು ಸೂಚಿಸಿದರು.

ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಒಂದು ವರ್ಷ ಕಳೆದರೂ ಯಾವುದೇ ಪರಿಹಾರ ನೀಡದ ಕುರಿತು ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾ‍ಪುರ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

ADVERTISEMENT

‘ನಮ್ಮ ಮತಕ್ಷೇತ್ರದ ಹೆಗ್ಗಣದೊಡ್ಡಿ, ಗೌಡಗೇರಾ ರೈತರ ಕುಟುಂಬಗಳಿಗೆ ಇನ್ನೂ ಪರಿಹಾರ ಬಂದಿಲ್ಲ. ನಿಮ್ಮ ಮನೆಯಿಂದಲೇ ಕೊಡ್ತಿರಾ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ‘ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಇದೆ. ನಮಗೆ ಹೇಳಿ ಹೇಳಿ ಸಾಕಾಗಿದೆ. ಪರಿಹಾರ ಕೊಡಲು ಆಗುವುದಿಲ್ಲ ಎಂದು ಹೇಳಿ ಪತ್ರ ಆದರೂ ಬರೆಯಿರಿ’ ಎಂದರು.

‘ಪ್ರಧಾನಮಂತ್ರಿ ಆವಾಸ್‌ ಯೋಜನೆಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಇಲ್ಲಿಯವರೆಗೆ ಪರಿಹಾರ ಬಂದಿಲ್ಲ. ಮನೆಗಳು ಅರ್ಧಕ್ಕೆ ನಿಂತಿವೆ. ಹಣ ಬರುತ್ತದೆ ಎಂದು ಸಾಲ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರದಿಂದ ಮಾತ್ರ ಪರಿಹಾರ ಬಾರದೆ ಜನತೆ ಕಂಗಾಲಾಗಿದ್ದಾರೆ’ ಎಂದು ತಿಳಿಸಿದರು.

‘ರೈತರ ಆತ್ಮಹತ್ಯೆಗೆ ಸಂಬಂಧಿಸಿದ ತಹಶೀಲ್ದಾರ್ ಅವರನ್ನೇ ಜವಾಬ್ದಾರಿ ಮಾಡಿ. ಹಣ ಮುಟ್ಟಿಸುವ ಕೆಲಸ ಮಾಡಿ. ಆಗ ಮಾತ್ರ ರೈತರಿಗೆ ಪರಿಹಾರ ಸಿಗುತ್ತದೆ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಜಲಜೀವನ ಮಿಷನ್‌ ಯೋಜನೆ ಬಗ್ಗೆ ಪರಿಶೀಲನೆ ಆರಂಭಿಸಿದ ಜನಪ್ರತಿನಿಧಿಗಳು ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಪರಿಹಾರ ತಲುಪಿಸಲು ಎಷ್ಟು ವರ್ಷ ಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದು, ಪರಿಹಾರ ಒದಗಿಸುವ ಅಂದಾಜು ಸಮಯ ಹೇಳಿ ಎಂದು ಪಟ್ಟು ಹಿಡಿದರು.

ಆರ್‌ಡಬ್ಲ್ಯೂಒ ಸತೀಶ ಅವರು ಮಾತನಾಡಿ, ಜಲ ಜೀವನ್‌ ಮಿಷನ್‌ ಯೋಜನೆಯಡಿ 131 ಡಿಪಿಆರ್‌ ಸಿದ್ದಪಡಿಸಿದ್ದು, ಇದರಲ್ಲಿ 10 ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸಂಸದ ರಾಜಾ ಅಮೇಶ್ವರ ನಾಯಕ, ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಒಂದೊಂದು ಗ್ರಾಮಕ್ಕೆ ಒಂದೊಂದು ರೀತಿಯಲ್ಲಿ ಹಣ ನಿಗದಿ ಪಡಿಸಲಾಗಿದೆ. ಇದರ ಔಚಿತ್ಯವೇನು ಎಂದು ಪ್ರಶ್ನಿಸಿದರು.

ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿದ್ದು, ಮೂರು ವರ್ಷಗಳಿಂದ ದುರಸ್ತಿಯೇ ಆಗಿಲ್ಲ. ಜನರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಮುಂದಿನ ಬಾರಿ ಮಾಡುತ್ತೇವೇ ಎನ್ನುತ್ತೀರಿ. ಇದರಲ್ಲೇ ಕಾಲ ತಳ್ಳುತ್ತೀರಿ ಎಂದು ಶಾಸಕ ದರ್ಶನಾಪುರ ಅಧಿಕಾರಿಗಳ ವಿರುದ್ಧ ಗರಂ ಆದರು.

ಸಂಸದರು ಮಾತನಾಡಿ, ಈಗಾಗಲೇ ಬಹುಗ್ರಾಮ ಯೋಜನೆ ನೀರಿನ ಮೂಲ ಇಲ್ಲದೇ ವಿಫಲವಾಗಿದೆ. ಹೀಗಾಗಿ ಜಲಧಾರೆ ಯೋಜನೆಗೆ ನದಿಯೇ ಮೂಲವಾಗಿದ್ದು, ಇದನ್ನು ಬಳಸಿಕೊಂಡು ಜಿಲ್ಲೆಗೆ ಬೇಕಾದ ಪ್ರಸ್ತಾವನೆ ಸಲ್ಲಿಸಿ ಎಂದು ಸೂಚನೆ ನೀಡಿದರು.

ಜಲಧಾರೆ ಯೋಜನೆಯಡಿಯಲ್ಲಿ ಎಲ್ಲರಿಗೂ ವರ್ಷದ 12 ತಿಂಗಳು ನೀರು ಸಿಗುವಂತಾಗಬೇಕು. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ನಾಯಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಯಾದಗಿರಿ ಮತ್ತು ರಾಯಚೂರು ಜಿಲ್ಲೆಯಲ್ಲಿ 75 ಸಾವಿರ ಕಾರ್ಮಿಕರಿಗೆ ಕಿಟ್‍ಗಳನ್ನು ವಿತರಿಸಿದ್ದು, ಅದರಲ್ಲಿ 30 ಸಾವಿರ ಕಿಟ್‍ಗಳನ್ನು ಕಾರ್ಮಿಕರಿಗೆ ವ್ಯವಸ್ಥಿತವಾಗಿ ತಲುಪಿಸಲಾಗಿದೆ. ಹೆಚ್ಚಿನ ಕಿಟ್‍ಗಳಿಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಮಾಡಲಾಗಿದೆ ಎಂದರು.

‌ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಮಾತನಾಡಿ, ಪರಿಹಾರ ನೀಡಲು ಯಾವುದೇ ವಿಳಂಬ ಮಾಡುವುದಿಲ್ಲ ಎಂದು ಸಮುಜಾಯಿಷಿ ನೀಡಿದರು. ಜಿ.ಪಂ ಸಿಇಒ ಶಿಲ್ಪಾಶರ್ಮಾ ಮಾತನಾಡಿ, ಶುದ್ಧ ನೀರಿನ ಘಟಕಗಳ ಬಗ್ಗೆ 15 ದಿನಗೊಳಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ ಮಾತನಾಡಿ, ಕೆರೆ ಹೂಳೆತ್ತುವ ಬದಲು ಸಣ್ಣ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿ ಒತ್ತು ನೀಡಬೇಕೆಂದು ಹೇಳಿದರು.

ಸಂಸದ ಅಮರೇಶ್ವರ ನಾಯಕ ಮಾತನಾಡಿ, ಕೆಬಿಜೆಎನ್‌ಎಲ್‌ ವ್ಯಾಪ್ತಿಯಲ್ಲಿ ಕಾಲುವೆ ಗೇಟ್‍ಗಳ ದುರಸ್ತಿ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕಾಲುವೆಗಳಿಗೆ ನೀರು ಬಿಡುಗಡೆಗೆ ಮುನ್ನ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಆಹಾರ ಇಲಾಖೆ, ಕೆಬಿಜೆಎನ್‌ಎಲ್‌, ನರೇಗಾ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಸೇರಿದಂತೆ ಇತರೆ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲನೆ ನಡೆಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.