ADVERTISEMENT

ಜೇಡಿ ಮಣ್ಣಿನ ಎತ್ತುಗಳಿಗೆ ಬೇಡಿಕೆ

ರೈತ ಜೀವನದ ಮಹತ್ವ ಹೆಚ್ಚಿಸುವ ಮಣ್ಣೆತ್ತಿನ ಅಮಾವಾಸ್ಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 6:08 IST
Last Updated 25 ಜೂನ್ 2025, 6:08 IST
ಹುಣಸಗಿ ಪಟ್ಟಣದಲ್ಲಿ ಮಣ್ಣೆತ್ತು ಖರೀದಿಯಲ್ಲಿ ತೊಡಗಿರುವ ಜನತೆ
ಹುಣಸಗಿ ಪಟ್ಟಣದಲ್ಲಿ ಮಣ್ಣೆತ್ತು ಖರೀದಿಯಲ್ಲಿ ತೊಡಗಿರುವ ಜನತೆ   

ಹುಣಸಗಿ: ಕೃಷಿಯ ಮಹತ್ವ ತಿಳಿಸುವ ಹಬ್ಬವಾದ ಮಣ್ಣೆತ್ತಿನ ಅಮಾವಾಸ್ಯೆಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲಿ ಕುಂಬಾರರ ಮನೆಗಳು ಕಡಿಮೆ ಇದ್ದು, ಅಲ್ಲಲ್ಲಿ ಜೇಡಿ ಮಣ್ಣಿನಿಂದ ಮನೆಯಲ್ಲಿಯೇ ಎತ್ತುಗಳನ್ನು ಮಾಡುವ ಕೆಲಸ ಒಂದು ತಿಂಗಳ ಹಿಂದೆಯೇ ಆರಂಭಿಸಲಾಗುತ್ತಿತ್ತು. ಆದರೆ ಕುಟುಂಬದಲ್ಲಿನ ಸದಸ್ಯರು ಕಡಿಮೆ ಇರುವುದರಿಂದಾಗಿ ಬಹುತೇಕ ಜನರು ಪಿಒಪಿ ಹಾಗೂ ಸಿದ್ಧ ಎತ್ತುಗಳ ಖರೀದಿಗೆ ಮುಂದಾಗುತ್ತಿದ್ದಾರೆ.

‘ಗ್ರಾಮದಲ್ಲಿ ನಮ್ಮದು ಒಂದೇ ಮನೆ ಇದ್ದರೂ ಗ್ರಾಮ್ಕಕೆ ಬೇಕಾಗುವಷ್ಟು ಎತ್ತುಗಳನ್ನು ತಯಾರಿಸಿ ಮನೆಗಳಿಗೆ ಕೊಡುವ ಕಾಯಕ ಹಲವಾರು ವರ್ಷಗಳಿಂದ ಇಂದಿಗೂ ಬಿಟ್ಟಿಲ್ಲ. ನಮ್ಮ ಕಾಯಕಕ್ಕೆ ತಕ್ಕಷ್ಟು ಹಣ, ದವಸ, ಧಾನ್ಯ ಗ್ರಾಮಸ್ಥರು ನೀಡುತ್ತಾರೆ’ ಎಂದು ವಜ್ಜಲ ಗ್ರಾಮದ ನಿಂಗಣ್ಣ ಕುಂಬಾರ ತಿಳಿಸಿದರು.

ADVERTISEMENT

ಕಳೆದ ಒಂದು ತಿಂಗಳಿನಿಂದ ಮಣ್ಣೆತ್ತು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸುಮಾರು 500ಕ್ಕೂ ಹೆಚ್ಚು ಜೋಡು ಎತ್ತು ಮಾಡಿರುವುದಾಗಿ ಪಾರ್ವತಿ ಸಂಗಣ್ಣ ಕುಂಬಾರ ಹೇಳಿದರು.

‘ಹುಣಸಗಿ ಪಟ್ಟಣದಲ್ಲಿ ಈ ಬಾರಿ ಸುಮಾರು ಒಂದು ಲಕ್ಷ ಹಣದಲ್ಲಿ ಎತ್ತುಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ಆದರೆ ಮಂಗಳವಾರ ಬೆಳಿಗ್ಗೆವರೆಗೂ ಮಂದಗತಿಯಲ್ಲಿ ವ್ಯಾಪಾರ ಇತ್ತು. ಸಂಜೆ ಜೋರಾಯಿತು’ ಎನ್ನುತ್ತಾರೆ ವಿರೇಶ ಕುಂಬಾರ ಹಾಗೂ ಬಸವರಾಜ ಕುಂಬಾರ.

‘ಭೂಮಿ, ಮಣ್ಣು ಮತ್ತು ಎತ್ತು ರೈತರೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ. ಆದರೆ ಇಂದಿನ ಯಾಂತ್ರೀಕರಣ ಹಾಗೂ ಸುಧಾರಿತ ಕೃಷಿ ಪದ್ಧತಿಯ ಹೆಸರಿನಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜೀವಂತ ಎತ್ತುಗಳು ಕಣ್ಮರೆಯಾಗುತ್ತಿವೆ. ಇದರಿಂದಾಗಿ ಈ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ಮಹತ್ವವೂ ಮುಂದಿನ ಪೀಳಿಗೆಗೆ ತಿಳಿಯದಂತಾಗುವುದೂ ಅಚ್ಚರಿ ಇಲ್ಲ’ ಎಂದು ವಜ್ಜಲ ಗ್ರಾಮದ ಸಾಹೇಬಗೌಡ ಶ್ರೀಗಿರಿ ಅನಿಸಿಕೆ ವ್ಯಕ್ತಪಡಿಸಿದರು.

‘ಭೂತಾಯಿ, ಗಂಗಾಪೂಜೆ, ವೃಷಭ ಪೂಜೆ, ಮಣ್ಣಿನ ಗಣೇಶ, ದೀಪಾರಾಧನೆ, ಎಲ್ಲ ಹಬ್ಬಗಳಿಗೆ ತನ್ನದೇ ಆದ ಮಹತ್ವ ಹಾಗೂ ವಿಶೇಷತೆ ಇದೆ. ಇದರ ಮಹತ್ವವನ್ನು ತಿಳಿದುಕೊಂಡಾಗ ಮಾತ್ರ ಹಬ್ಬ ಆಚರಣೆಯ ಕುರಿತು ಹೆಚ್ಚು ಶ್ರದ್ಧೆ, ಭಕ್ತಿ ಮತ್ತು ಪ್ರೀತಿ ಮೂಡುತ್ತದೆ’ ಎಂದು ತಾಲ್ಲೂಕಿನ ಕೂಡಲಗಿಯ ಗಜಾನನ ಮಾಹಾರಾಜ ಹಬ್ಬಗಳ ಕುರಿತು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.