ADVERTISEMENT

ಬೆಂಗಳೂರಿಗೆ ಸ್ಲೀಪರ್ ಬಸ್ ಓಡಿಸಿ: ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 4:32 IST
Last Updated 17 ಜುಲೈ 2025, 4:32 IST
ಸುರಪುರದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ. ಕೃಷ್ಣಪ್ಪ ಬಣದ ಮುಖಂಡರು ಮನವಿ ಸಲ್ಲಿಸಿದರು 
ಸುರಪುರದ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಿಗೆ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ. ಕೃಷ್ಣಪ್ಪ ಬಣದ ಮುಖಂಡರು ಮನವಿ ಸಲ್ಲಿಸಿದರು    

ಸುರಪುರ: ಸುರಪುರದಿಂದ ಬೆಂಗಳೂರಿಗೆ ಸ್ಲೀಪರ್ ಬಸ್ ಓಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬಿ. ಕೃಷ್ಣಪ್ಪ ಬಣದ ಮುಖಂಡರು ಬುಧವಾರ ಬಸ್ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ವಿಭಾಗೀಯ ಸಂಘಟನಾ ಸಂಚಾಲಕ ಹಣಮಂತ ಹೊಸಮನಿ ಮಾತನಾಡಿ, ‘ಸುರಪುರದಿಂದ ಬೆಂಗಳೂರಿಗೆ ನಿತ್ಯ ನೂರಾರು ಪ್ರಯಾಣಿಕರು ಹೋಗುತ್ತಾರೆ. ಖಾಸಗಿ ಸ್ಲೀಪರ್ ಬಸ್‍ನವರು ಪ್ರಯಾಣಿಕರ ಹತ್ತಿರ ಹಣ ಸುಲಿಗೆ ಮಾಡುತ್ತಿದ್ದಾರೆ. ಕಾರಣ ಸಾರಿಗೆ ಸಂಸ್ಥೆಯಿಂದ ಸ್ಲೀಪರ್ ಬಸ್ ಆರಂಭಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಸಂಸ್ಥೆಗೂ ಲಾಭವಾಗುತ್ತದೆ’ ಎಂದರು.

‘ಈ ಮೊದಲು ಸುರಪುರದಿಂದ ಕಲಬುರಗಿಗೆ ಸಾಕಷ್ಟು ಸಗರನಾಡು ಬಸ್‍ಗಳು ಸಂಚರಿಸುತ್ತಿದ್ದವು. ದರವೂ ಕಡಿಮೆ ಇತ್ತು. ಬಡ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಈಗ ಈ ಬಸ್‍ಗಳನ್ನು ಬಂದ್ ಮಾಡಿರುವುದರಿಂದ ಜನರಿಗೆ ತೊಂದರೆಯಾಗಿದೆ. ಕಾರಣ ಪುನಃ ಸಗರನಾಡು ಬಸ್‍ಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ನಂತರ ಸುರಪುರ ಪೊಲೀಸ್ ಇನ್‍ಸ್ಪೆಕ್ಟರ್‌ಗೆ ಮನವಿ ಸಲ್ಲಿಸಿ ಮಾತನಾಡಿದ ತಾಲ್ಲೂಕು ಸಮಿತಿ ಸಂಚಾಲಕ ಶ್ರೀನಿವಾಸನಾಯಕ ಬೊಮ್ಮನಳ್ಳಿ, ‘ನಗರದ ಗಾಂಧಿವೃತ್ತ ಮತ್ತು ಅಂಬೇಡ್ಕರ್ ವೃತ್ತಗಳಲ್ಲಿ ಜನ ಮತ್ತು ವಾಹನ ದಟ್ಟಣೆ ಅಧಿಕವಾಗಿರುತ್ತದೆ. ಇದರಿಂದ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಇದೇ ವೃತ್ತದಿಂದ ಶಾಲಾ ಮಕ್ಕಳು, ಸರ್ಕಾರಿ ನೌಕರರು ತೆರಳುತ್ತಾರೆ. ಅವರಿಗೆ ಸರಿಯಾದ ಸಮಯಕ್ಕೆ ಹೋಗಲು ಆಗುತ್ತಿಲ್ಲ. ಕಾರಣ ಎರಡು ಕಡೆ ಕಡ್ಡಾಯವಾಗಿ ಪೊಲೀಸರ ನಿಯೋಜನೆ ಮಾಡಿ ಜನದಟ್ಟಣೆ, ವಾಹನ ದಟ್ಟಣೆ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.

ವೈಜನಾಥ ಹೊಸಮನಿ, ಮಾನಪ್ಪ ಬಳಬಟ್ಟಿ, ತಿರುಪತಿ ಧೊರಿ, ಲಂಕೆಪ್ಪ ದೊಡ್ಡಮನಿ, ಈಶ್ವರ ರೋಜಾ, ಶಿವಣ್ಣ ನಾಟೇಕಾರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.