ADVERTISEMENT

ಕಬ್ಬಿನ ಬಾಕಿ ಹಣ ಕೊಡಿಸಲು ಆಗ್ರಹ

₹50 ಕೋಟಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡ ಕೋರ್‌ಗ್ರೀನ್ ಶುಗರ್ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 16:15 IST
Last Updated 4 ಜೂನ್ 2019, 16:15 IST
ಯಾದಗಿರಿ ಜಿಲ್ಲಾಧಿಕಾರಿಗೆ ಕಲಬುರ್ಗಿ ಮತ್ತು ಬೀದರ್‌ನಿಂದ ಬಂದಿದ್ದ ರೈತರು ಸಕ್ಕರೆ ಕಾರ್ಖಾನೆ ಕಬ್ಬಿನ ಹಣ ಪಾವತಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು
ಯಾದಗಿರಿ ಜಿಲ್ಲಾಧಿಕಾರಿಗೆ ಕಲಬುರ್ಗಿ ಮತ್ತು ಬೀದರ್‌ನಿಂದ ಬಂದಿದ್ದ ರೈತರು ಸಕ್ಕರೆ ಕಾರ್ಖಾನೆ ಕಬ್ಬಿನ ಹಣ ಪಾವತಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು   

ಯಾದಗಿರಿ: ವಡಗೇರಾ ತಾಲ್ಲೂಕಿನ ತುಮಕೂರು ಬಳಿ ಇರುವ ಕೋರ್‌ಗ್ರೀನ್ ಶುಗರ್ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಿ ಏಳು ತಿಂಗಳು ಕಳೆದರೂ ಕಾರ್ಖಾನೆ ಆಡಳಿತ ಮಂಡಳಿ ಕಬ್ಬಿನ ಬಾಕಿ ಹಣ ನೀಡದೆ ಸತಾಯಿಸುತ್ತಿದೆ ಎಂದು ಆರೋಪಿಸಿ ಕಲಬುರ್ಗಿ ಹಾಗೂ ಬೀದರ್ ಸುತ್ತಮುತ್ತಲಿಂದ ಬಂದಿದ್ದ ರೈತರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ಗೆ ಮನವಿ ಸಲ್ಲಿಸಿದರು.

ಕೋರ್‌ಗ್ರೀನ್ ಶುಗರ್ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಲಾಗಿದೆ. ಕಬ್ಬು ಬೆಳೆಯುವಂತೆ ಆಡಳಿತ ಮಂಡಳಿ ನಮಗೆ ಸಲಹೆ ನೀಡಿ, ನಮ್ಮಿಂದ ಕಬ್ಬನ್ನು ಪಡೆದುಕೊಂಡು ಇದೀಗ ಸುಮಾರು 7 ತಿಂಗಳು ಕಳೆದರೂ ಬಾಕಿ ಹಣ ಕೊಡದೆ ತೊಂದರೆ ಕೊಡಲಾಗುತ್ತಿದೆ. ಈ ಬಗ್ಗೆ ಕೇಳಿದರೆ 15 ದಿನಗಳ ಒಳಗಾಗಿ ಹಣ ಪಾವತಿ ಮಾಡಲಾಗುವುದು ಎಂದು ಕಾರ್ಖಾನೆ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದುವರೆಗೂ ಅವರಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಇತ್ತ ಕಬ್ಬು ಬೆಳೆದು ನಾವು ಸಂಕಷ್ಟದಲ್ಲಿದ್ದೇವೆ ಎಂದು ಕಬ್ಬಯ ಬೆಳೆಗಾರರು ಆರೋಪಿಸಿದರು.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸುಮಾರು 60ಕ್ಕೂ ಹೆಚ್ಚು ರೈತರಿಗೆ ಹಣ ಪಾವತಿಯಾಗಿಲ್ಲ. ಬೀದರ್‌ ಜಿಲ್ಲೆಯ ಮದರಗಿ ತಾಂಡವೊಂದರಲ್ಲೇ 18 ರೈತರ ಹಣ ಬಾಕಿ ಇದೆ. ನವೆಂಬರ್ ತಿಂಗಳಲ್ಲಿ ಕಬ್ಬುಕಟಾವು ಮಾಡಿಸಿಕೊಂಡ ಕಾರ್ಖಾನೆ ಈವರೆಗೆ ಸುಮಾರು 200 ರಷ್ಟು ರೈತರ ₹50 ಕೋಟಿಗೂ ಹೆಚ್ಚು ಹಣವನ್ನು ರೈತರಿಗೆ ಪಾವತಿಸದೇ ಸತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಾಡಿಗೆ ವಾಹನ

ADVERTISEMENT

ಸುಮಾರು 3 ಬಾರಿ ಬೀದರ್‌ನಿಂದ ಎಲ್ಲ ರೈತರು ಸೇರಿ ₹10 ಸಾವಿರ ಬಾಡಿಗೆ ವಾಹನ ಮಾಡಿಕೊಂಡು ಬರುತ್ತಿದ್ದೇವೆ. ಕೂಡಲೇ ಕಾರ್ಖಾನೆ ಆಡಳಿತ ಮಂಡಳಿಗೆ ಕಬ್ಬಿನ ಬಾಕಿ ಹಣ ಕೊಡುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

ರೈತ ಮುಖಂಡರಾದ ಶಂಕರಗೌಡ ಪಾಟೀಲ್ ಕೊಲ್ಲೂರ, ಮಲ್ಲಣಗೌಡ ಪಾಟೀಲ್ ಹರವಾಳ, ಶ್ರೀಶೈಲ ಹರವಾಳ, ಆಕಾಶ, ವಿನೋದ, ರಮೇಶ ಕಲಶೆಟ್ಟಿ, ಮಲ್ಲೇಶಿ, ಭೀಮಾಶಂಕರ, ವೆಂಕಟೇಶ ಮದರಗಿ, ಭಗವಾನ, ಹರಿಚಂದ್ರ, ಅರವಿಂದ್ ಸೇರಿದಂತೆ ನೂರಾರು ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.