ADVERTISEMENT

ವಿವಾದಿತ ಜಮೀನು ಗೋಮಾಳ : ಅಧಿಕಾರಿಗಳಿಂದ ಸರ್ವೆ

ತುರ್ಕಲದೊಡ್ಡಿ: ಖಬರಸ್ತಾನ ಜಮೀನು ವಿವಾದ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:18 IST
Last Updated 19 ಡಿಸೆಂಬರ್ 2019, 10:18 IST
ಸೈದಾಪುರ ಸಮೀಪದ ತುರುಕಲದೊಡ್ಡಿಯಲ್ಲಿ ವಿವಾದಿತ ಸ್ಮಶಾನ ಭೂಮಿಯನ್ನು ಸಹಾಯಕ ಆಯುಕ್ತರು ಮತ್ತು ಪೊಲೀಸ್ ಸಿಬ್ಬಂದಿ ಸೇರಿಕೊಂಡು ಸರ್ಕಾರಿ ಗೋಮಾಳ ಭೂಮಿ ಎಂದು ಗಡಿ ಗುರುತಿಸಿದರು
ಸೈದಾಪುರ ಸಮೀಪದ ತುರುಕಲದೊಡ್ಡಿಯಲ್ಲಿ ವಿವಾದಿತ ಸ್ಮಶಾನ ಭೂಮಿಯನ್ನು ಸಹಾಯಕ ಆಯುಕ್ತರು ಮತ್ತು ಪೊಲೀಸ್ ಸಿಬ್ಬಂದಿ ಸೇರಿಕೊಂಡು ಸರ್ಕಾರಿ ಗೋಮಾಳ ಭೂಮಿ ಎಂದು ಗಡಿ ಗುರುತಿಸಿದರು   

ಸೈದಾಪುರ: ಸಮೀಪದ ತುರ್ಕಲದೊಡ್ಡಿ ಗ್ರಾಮದಲ್ಲಿ ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಖಬರಸ್ತಾನ ಜಮೀನನ್ನು ಗೋಮಾಳ ಭೂಮಿ ಎಂದು ಗುರುತಿಸಲಾಗಿದ್ದು, ಬುಧವಾರ ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ನೇತೃತ್ವದ ಕಂದಾಯ ಭೂಮಾಪನ, ಪೊಲೀಸ್ ಇಲಾಖೆ ಸಿಬ್ಬಂದಿ ತಂಡದಿಂದ ಸರ್ವೆ ಮಾಡಿ ಗಡಿ ಗುರುತು ಮಾಡಲಾಯಿತು.

ಇಲ್ಲಿ ಈಚೆಗೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಶವ ಸಂಸ್ಕಾರದ ಘಟನೆಯ ವಿವಾದ ಸೃಷ್ಟಿಸಿತ್ತು. ಸೋಮವಾರ ಮುಸ್ಲಿಂ ಸಮುದಾಯದ ವೃದ್ಧೆ ಆಶಾಬಿ ಭಾಷಮೀಯ (70) ಮೃತಪಟ್ಟಿದ್ದರು. ಇದರಿಂದ ಮತ್ತೆ ಶವ ಸಂಸ್ಕಾರದ ಸಮಸ್ಯೆ ಎದುರಾಗಬಹುದು ಎಂಬ ಕಾರಣ ಗ್ರಾಮಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತರ ನೇತೃತ್ವದ ತಂಡ ಸದರಿ ಜಮೀನು ಸರ್ಕಾರಿ ಗೈರಾಣಿ ಭೂಮಿಯಾಗಿದ್ದು, ಅಲ್ಲಿ ಒತ್ತುವರಿ ಮಾಡಿದವರಿಗೆ 15 ದಿನಗಳ ಕಾಲಾವಕಾಶ ನೀಡಿ ಸ್ಥಳ ತೆರವು ಮಾಡಲು ಸೂಚಿಸಿತು.

ಇನ್ನು ಮುಸ್ಲಿಂ ಸಮುದಾಯಕ್ಕೆ ಸ್ಮಶಾನ ಭೂಮಿ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಗ್ರಾಮದ ಸರ್ವೆ ನಂ–77 ರಲ್ಲಿ ಸ್ಥಳ ಗುರುತಿಸುವ ಕಾರ್ಯವು ನಡೆದಿದ್ದು ವಿವರವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ಅವರು ಮಾಹಿತಿ ನೀಡಿದರು.

ADVERTISEMENT

ಗ್ರಾಮದ ಸರ್ವೆ ನಂ– 39, 77, 45, 40, 04, ಹಾಗೂ 23 ಇವು ಸರ್ಕಾರಿ ಜಮೀನುಗಳಾಗಿವೆ. ಈ ಎಲ್ಲಾ ಆಸ್ತಿಯ ಸರ್ವೆ ಮಾಡಿ ಒತ್ತುವರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಂಕರಗೌಡ ಸೋಮನಾಳ ತಿಳಿಸಿದರು.

ಡಿವೈಎಸ್‌ಪಿ ಶರಣಪ್ಪ, ಸಿಪಿಐ ಹೊಸಕೇರಪ್ಪ, ಕಂದಾಯ ನಿರೀಕ್ಷಕ ಭೀಮಸೇನರಾವ್ ಕುಲಕರ್ಣಿ, ಭೂಮಾಪಕರಾದ ಈಶ್ವರಚಂದ್ರ, ಸದ್ದಾಂ, ತಹಶೀಲ್ದಾರ್ ಶ್ರೀಧರಚಾರ್ಯ, ಸೈದಾಪೂರ ಪಿಎಸ್‍ಐ ಎನ್. ವೈ.ಗುಂಡುರಾವ್, ಮಹೇಶ,ಕಂದಾಯ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.