ADVERTISEMENT

ಚಿನ್ನಾಕಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ

ಪರಿಶಿಷ್ಟರಿಗೆ ಸಾಮಾಜಿಕ ಬಹಿಷ್ಕಾರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:34 IST
Last Updated 24 ಜೂನ್ 2025, 16:34 IST
ಗುರುಮಠಕಲ್‌ ತಾಲ್ಲೂಕಿನ ಚಿನ್ನಾಕಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಧಿಕಾರಿಗಳು ಭೇಟಿ ನೀಡಿದರು
ಗುರುಮಠಕಲ್‌ ತಾಲ್ಲೂಕಿನ ಚಿನ್ನಾಕಾರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಧಿಕಾರಿಗಳು ಭೇಟಿ ನೀಡಿದರು   

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಚಿನ್ನಾಕಾರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದವರಿಗೆ ಸಾಮಾಜಿಕ ಬಹಿಷ್ಕಾರದ ಆರೋಪ ಕೇಳಿಬಂದ ಹಿನ್ನೆಲೆ ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಅಧಿಕಾರಿಗಳ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ, ಸಭೆ ನಡೆಸಿತು.

ಗ್ರಾಮದಲ್ಲಿನ 9 ಗುಂಟೆ ಸರ್ಕಾರಿ ಜಮೀನಿನಲ್ಲಿ 6 ಗುಂಟೆ ಸಮಾಜ ಕಲ್ಯಾಣ ಇಲಾಖೆಗೆ ಈ ಹಿಂದೆಯೇ ನೀಡಲಾಗಿತ್ತು. ಉಳಿದ 3 ಗುಂಟೆ ಜಮೀನಿನಲ್ಲಿ ಈಚೆಗೆ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು. ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದ ಹಿನ್ನೆಲೆ 3 ಗುಂಟೆ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಿದ ನಂತರ ಸಮಸ್ಯೆ ಕಾಣಿಸಿಕೊಂಡಿದೆ.

ವರದಿ ಸಲ್ಲಿಸಲು ಸೂಚನೆ: 3 ಗುಂಟೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸುಶೀಲಾ ಜಿ. ಅವರು ತಹಶೀಲ್ದಾರ್ ಶಾಂತಗೌಡ ಬಿರಾದರ ಅವರಿಗೆ ಸೂಚಿಸಿದರು.

ADVERTISEMENT

ಕೂಡಲೇ ವರದಿ ನೀಡಿದರೆ, ಸ್ಥಳದ ಕುರಿತಾಗಿ ಮುಂದಿನ ಕ್ರಮವಹಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಸಾಮರಸ್ಯಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಂತಿ ಸಭೆ: ಜಿಲ್ಲಾಧಿಕಾರಿ ಸೂಚನೆಯಂತೆ ಮಂಗಳವಾರ‍ ತಹಶೀಲ್ದಾರ್, ಡಿವೈಎಸ್‌ಪಿ, ತಾಪಂ ಇಒ, ಸಮಾಜ ಕಲ್ಯಾಣ ಇಲಾಖೆಯ ಎಡಿ, ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಅಧಿಕಾರಿಗಳು ಗ್ರಾಮದಲ್ಲಿ ಸಭೆ ನಡೆಸಿದರು.

ತಾರತಮ್ಯ ಮಾಡದಂತೆ ತಾಕೀತು: ಗ್ರಾಮದಲ್ಲಿನ ಕ್ಷೌರದಂಗಡಿ, ಹೋಟೆಲ್‌ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳಲ್ಲಿ ಯಾವುದೇ ಕಾರಣಕ್ಕೂ ತಾರತಮ್ಯ ಮಾಡದಂತೆ, ನಿಗದಿತ ದರದಂತೆ ಹಣ ನೀಡಿದರೆ ಅವರಿಗೆ ವಸ್ತುಗಳನ್ನು ಮಾರಾಟ ಮಾಡುವಂತೆ, ಸೇವೆ ನೀಡುವಂತೆ ಅಧಿಕಾರಿಗಳ ತಂಡ ತಿಳಿವಳಿಕೆ ಪತ್ರಗಳನ್ನು ನೀಡಿ, ತಾಕೀತು ಮಾಡಿತು.

ಷೋಕಾಸ್‌ ನೋಟಿಸ್‌: ಕ್ಷೌರದಂಗಡಿಯಲ್ಲಿ ಕ್ಷೌರ ಮಾಡಲು ಬಹಿಷ್ಕರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಅಂಗಡಿಗೆ ಕಾರಣ ಕೇಳಿ ನೋಟಿಸ್‌ ನೀಡಲು ನಿರ್ಧರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.