ADVERTISEMENT

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಲು ಜಿಲ್ಲಾಧಿಕಾರಿ ಸೂಚನೆ

ಭಕ್ತಿ ಪೂರ್ವಕವಾಗಿ ದೇವಸ್ಥಾನ, ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 4:01 IST
Last Updated 4 ಸೆಪ್ಟೆಂಬರ್ 2021, 4:01 IST
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿದರು
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿದರು   

ಯಾದಗಿರಿ: ಕೊರೊನಾ ಹಬ್ಬುವ ಆತಂಕದಿಂದ ಈ ಬಾರಿ ಹಬ್ಬಗಳ ಆಚರಣೆಗೆ ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದ್ದು, ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಿ ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸೂಚಿಸಿದರು.

ಗೌರಿ- ಗಣೇಶ ಹಬ್ಬದ ಆಚರಣೆ ಪ್ರಯುಕ್ತ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ಮಾರ್ಗಸೂಚಿಗಳನ್ನು ವಿವರಿಸಿದರು.

ಗಣೇಶ ಚತುರ್ಥಿ ಹಬ್ಬವನ್ನು ಸರಳ, ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬೇಕು. ಇದನ್ನು ಹೊರತುಪಡಿಸಿ, ಬೇರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣಗಳಲ್ಲಿ ಚಪ್ಪರ, ಪೆಂಡಾಲ್, ಶಾಮಿಯಾನ ವೇದಿಕೆಗಳನ್ನು ನಿರ್ಮಿಸಿ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದರು.

ADVERTISEMENT

ಗಣೇಶ ಮೂರ್ತಿಗಳನ್ನು ತರುವಾಗ ಹಾಗೂ ವಿಸರ್ಜಿಸುವಾಗ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಪಾರಂಪರಿಕ ಗೌರಿ- ಗಣೇಶ ಮೂರ್ತಿಯನ್ನು ಪೂಜಿಸುವವರು ಅವುಗಳನ್ನು ಮನೆಯಲ್ಲಿಯೇ ವಿಸರ್ಜಿಸುವುದು ಅಥವಾ ಮೂರ್ತಿಗಳನ್ನು ಅತೀ ಸಮೀಪವಾಗುವಂಥ ಮಾರ್ಗಗಳನ್ನು ಬಳಸಿಕೊಂಡು ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಈಗಾಗಲೇ ನಿರ್ಮಿಸಲಾದ ಹೊಂಡ, ಕಲ್ಯಾಣಿ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬೇಕು ಎಂದರು.

ದರ್ಶನಕ್ಕಾಗಿ ಬರುವ ಭಕ್ತರಿಗೆ ಕಡ್ಡಾಯವಾಗಿ ಮುಖಗವಸನ್ನು ಧರಿಸುವುದು, ಕನಿಷ್ಠ 6 ಅಡಿ ಅಂತರವನ್ನು ಗುರುತಿಸುವುದು ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಗಣೇಶೋತ್ಸವ ಆಚರಣೆ ಕಾಲಕ್ಕೆ ಸಂದರ್ಭಕ್ಕನುಗುಣವಾಗಿ ಸರ್ಕಾರ, ಜಿಲ್ಲಾಡಳಿತ, ಪೊಲೀಸ್, ಸ್ಥಳೀಯ ಸಂಸ್ಥೆ ಪ್ರಾಧಿಕಾರಗಳಿಂದ ಹೊರಡಿಸಲಾಗುವ ಎಲ್ಲ ಆದೇಶ, ನಿರ್ದೇಶನ ಹಾಗೂ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ಇತರೆ ಒಗ್ಗೂಡುವಿಕೆಗಳನ್ನು ಮತ್ತು ಬೃಹತ್ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದ್ದು, ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ ಸಮಾರಂಭಗಳಿಗೆ ಅನುಮತಿ ನೀಡಲಾಗಿಲ್ಲ ಎಂದರು.

ಹಬ್ಬ ಹರಿದಿನಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಉಂಟಾಗಲು ಪೂರಕವಾಗಿರುವುದರಿಂದ ಗಣೇಶೋತ್ಸವ ಹಬ್ಬವನ್ನು ಅದೇ ರೀತಿಯಿಂದಲೇ ಆಚರಿಸುವ ಮೂಲಕ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಭಂಗ ಬಾರದಂತೆ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಯಾದಗಿರಿ ಸಿಪಿಐ ಸೋಮಶೇಖರ ಕೆಂಚರೆಡ್ಡಿ, ಸಮಾಜದ ಮುಖಂಡರಾದ ಸಿದ್ದಪ್ಪ ಎಸ್ ಹೊಟ್ಟಿ, ಅಯ್ಯಣ್ಣ ಹುಂಡೇಕಾರ, ಭವರಿಲಾಲ ಧೋಖಾ, ಲಾಯಕ ಹುಸೇನ್ ಬಾದಲ್, ಅಬ್ದುಲ್ ವಾಹಿದಮಿಯ್ಯ, ಶಿವಾಜಿ ಸೇನಾ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಶೇಗುರಕರ್ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.