ADVERTISEMENT

ಜಿಲ್ಲಾ ಬಿಸಿಯೂಟ ನೌಕರ ಸಂಘದ ಪ್ರತಿಭಟನೆ

ಜಂಟಿ ಬ್ಯಾಂಕ್ ಖಾತೆ ತೆರೆಯುವ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2023, 6:53 IST
Last Updated 20 ಮಾರ್ಚ್ 2023, 6:53 IST
ಯಾದಗಿರಿಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಯಾದಗಿರಿಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   

ಯಾದಗಿರಿ: ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ ಜಂಟಿ ಬ್ಯಾಂಕ್ ಖಾತೆ ತೆರೆಯುವ ಇಲಾಖೆ ಆದೇಶವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಈ ಕುರಿತು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕಾರ್ಯಕರ್ತರು, ಕಳೆದ 20 ವರ್ಷಗಳಿಂದ ರಾಜ್ಯದಲ್ಲಿ ಮಧ್ಯಾಹ್ನ ಉಪಾಹಾರ ಯೋಜನೆಯಲ್ಲಿ ರಾಜ್ಯದ ಹಿರಿಯ, ಕಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರಾಗಿ ಕೆಲಸ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಸಹಾಯಕ ಅಡುಗೆಯವರು ಕನಿಷ್ಠ ವೇತನ ಇಲ್ಲದೇ ಯೋಜನೆಯ ಯಶಸ್ಸಿಗಾಗಿ ದುಡಿಯುತ್ತಿದ್ದೇವೆ ಎಂದು
ಹೇಳಿದರು.

ತಮಗೆ ಕನಿಷ್ಠ ವೇತನ ಕೊಡಬೇಕು. ಕೆಲಸದ ಭದ್ರತೆ ಒದಗಿಸಬೇಕು. ಆರೋಗ್ಯ ವಿಮೆ ಜಾರಿಗೊಳಿಸಬೇಕು. ನಿವೃತ್ತಿಯಾದ ಅಡುಗೆಯವರಿಗೆ ನಿವೃತ್ತಿ ವೇತನ ಅಥವಾ ಇಡುಗಂಟು ಹಣ ಕೊಡಬೇಕು ಎಂದು ಸರ್ಕಾರಕ್ಕೆ ಸಂಘಟನೆಯಿಂದ ಒತ್ತಾಯಿಸುತ್ತಾ ಹಲವಾರು ಹೋರಾಟಗಳ ಮೂಲಕ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೂ ಸರ್ಕಾರಗಳು ತಮ್ಮ ಆಗ್ರಹಕ್ಕೆ ಕಿವಿಗೊಡುತ್ತಿಲ್ಲ ಎಂದು ಆಪಾದಿಸಿದರು.

ADVERTISEMENT

ಯೋಜನೆಯನ್ನು ದುರ್ಬಲ ಗೊಳಿಸುವ ಹುನ್ನಾರದಿಂದ 2023ರ ಜನವರಿ 4 ರಂದು ಮಧ್ಯಾಹ್ನ ಉಪಾಹಾರ ಯೋಜನೆ ಮತ್ತು ಕ್ಷೀರಭಾಗ್ಯ ಯೋಜನೆಯನ್ನು ಅನುಷ್ಠಾನ ಮಾಡುವ ಸಂಬಂಧ ಶಾಲಾ ಹಂತದಲ್ಲಿ ಪ್ರಸ್ತುತ ನಿರ್ವಹಿಸಲಾಗುತ್ತಿರುವ ಮುಖ್ಯ ಅಡುಗೆಯವರು ಎಸ್‌ಡಿಎಂಸಿ ಪದನಿಮಿತ್ತ ಕಾರ್ಯದರ್ಶಿಗಳಾದ ಮುಖ್ಯೋಪಾಧ್ಯಾಯರ ಜಂಟಿ ಬ್ಯಾಂಕ್ ಖಾತೆಯ ಬದಲಾವಣೆ ಮಾಡಿ ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಮುಖ್ಯ ಶಿಕ್ಷಕರ ಹೆಸರಿನಲ್ಲಿ 2023-2024 ನೇ ಸಾಲಿನಿಂದ ಅನ್ವಯವಾಗುವಂತೆ ನಿರ್ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯಲ್ಲಿ ಇದ್ದಕ್ಕಿದ್ದಂತೆ ಇಂತಹ ಆದೇಶ ಮಾಡುವ ಕಾರಣ ಏನಿತ್ತು. ಇದನ್ನು ಬದಲಾವಣೆ ಮಾಡುವಂತೆ ಯಾರು ಕೇಳಿದ್ದರು? ಇಂತಹ ಅದೇಶಗಳಿಂದ ಮಧ್ಯಾಹ್ನ ಉಪಹಾರ ಯೋಜನೆಗೆ ಮುಂದಿನ ದಿನಗಳಲ್ಲಿ ಧಕ್ಕೆಯುಂಟಾಗುವ ಸಂಭವ ಇದ್ದು, ಯೋಜನೆಯನ್ನು ದುರ್ಬಲಗೊಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಆದ್ದರಿಂದ ಕೂಡಲೇ ಈ ಆದೇಶವನ್ನು ಇಲಾಖೆ ಆಯುಕ್ತರು ಹಿಂಪಡೆದು ಈ ಮೊದಲು ಇದ್ದಂತೆ ಮುಖ್ಯ ಅಡುಗೆಯವರು ಮತ್ತು ಮುಖ್ಯೋಪಾಧ್ಯಾಯರ ಜಂಟಿ ಬ್ಯಾಂಕ್ ಖಾತೆಯನ್ನು ಮುಂದುವರೆಸುವಂತೆ ಆದೇಶ ಮಾಡಲು ತಾವುಗಳು ಇಲಾಖೆ ಆಯುಕ್ತರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಿಗೆ ಶಾಲೆಗಳಲ್ಲಿನ ಅಡುಗೆ ಸಿಬ್ಬಂದಿಯವರನ್ನು ಚುನಾವಣೆ ಸಿಬ್ಬಂದಿಗೆ ಅಡುಗೆ ಮಾಡಲು ಮತ್ತು ಇನ್ನಿತರೆ ಚುನಾವಣಾ ಕೆಲಸಕ್ಕೆ ಬಳಕೆ ಮಾಡಿಕೊಂಡಲ್ಲಿ ಚುನಾವಣಾ ಸಿಬ್ಬಂದಿಗೆ ಕೊಡುವ ಭತ್ಯೆದಷ್ಟೇ ಭತ್ಯೆಯನ್ನು ಅಡುಗೆ ಸಿಬ್ಬಂದಿಯವರಿಗೂ ಕೊಡಬೇಕೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಅಕ್ಷರ ದಾಸೋಹ ಬಿಸಿಯೂಟ ಸಂಘಟನೆ ಜಿಲ್ಲಾಧ್ಯಕ್ಷೆ ಕಲ್ಪನಾ ಗುರುಸುಣಿಗಿ, ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಕೂಡಲಗಿ, ಎಐಟಿಯುಸಿ ಜಿಲ್ಲಾಧ್ಯಕ್ಷ ದೇವೀಂದ್ರಪ್ಪ ಪತ್ತಾರ, ಬಿಸಿಯೂಟ ಜಿಲ್ಲಾ ಖಜಾಂಚಿ ಬಸಮ್ಮ ತಡಿಬಿಡಿ, ಯಮುನಾ ಕಕ್ಕೇರಾ, ಸುಧಾ ಕೆಂಭಾವಿ, ನೀಲಮ್ಮ ವಜ್ಜಲ್, ಸುಮಿತ್ರಾ ಬುದೂರು, ದೊಡ್ಡಮ್ಮ ಬಳಿಚಕ್ರ, ಮಂಜುಳಾ ಜಿನಿಕೇರಿ, ಗಂಗಮ್ಮ ಕುರುಕುಂದಿ, ನಿರ್ಮಲಾ ನಾಯ್ಕಲ್, ನಿಂಗಮ್ಮ ಬೋಳಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.