ADVERTISEMENT

ಆಟೊ ಚಾಲಕರಿಗೆ ಡಿ.ಎಲ್‌ ಕೊಡಿಸಿದ ಪೊಲೀಸರು!

ಪೊಲೀಸ್‌ ಇಲಾಖೆ ಮುತುವರ್ಜಿ; 215 ಆಟೊ ಚಾಲಕರಿಗೆ ಚಾಲನ ಪರವಾನಗಿ ವಿತರಣೆ

ಬಿ.ಜಿ.ಪ್ರವೀಣಕುಮಾರ
Published 10 ಸೆಪ್ಟೆಂಬರ್ 2019, 15:05 IST
Last Updated 10 ಸೆಪ್ಟೆಂಬರ್ 2019, 15:05 IST
ಯಾದಗಿರಿಯ ಗಾಂಧಿ ಚೌಕ್‌ ಬಳಿ ಇತ್ತೀಚೆಗೆ ನಡೆದ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ (ಸಂಗ್ರಹ ಚಿತ್ರ)
ಯಾದಗಿರಿಯ ಗಾಂಧಿ ಚೌಕ್‌ ಬಳಿ ಇತ್ತೀಚೆಗೆ ನಡೆದ ಚಾಲನಾ ಪರವಾನಗಿ ವಿತರಣಾ ಕಾರ್ಯಕ್ರಮ (ಸಂಗ್ರಹ ಚಿತ್ರ)   

‌ಯಾದಗಿರಿ: ನಗರದಲ್ಲಿ ಸುಮಾರು 1000ಕ್ಕಿಂತ ಹೆಚ್ಚು ಪ್ರಯಾಣಿಕರ ಆಟೋಗಳಿದ್ದು, ಶೇಕಡ 90ರಷ್ಟು ಚಾಲಕರಿಗೆ ಚಾಲನಾ ಪರವಾನಗಿ ಇಲ್ಲ. ಇದರಿಂದ ಪೊಲೀಸ್‌ ಇಲಾಖೆ ವತಿಯಿಂದಲೇ ಡಿಎಲ್‌ ವಿತರಿಸುವ ಕೆಲಸಕ್ಕೆ ಕೈಹಾಕಿ ಸದ್ಯ 215 ಜನ ಆಟೋ ಚಾಲಕರಿಗೆ ಚಾಲನಾ ಪರವಾನಗಿ ವಿತರಿಸಿದೆ.

8 ನೇ ತರಗತಿ ಓದಿದವರಿಗೆ ಮಾತ್ರ ಚಾಲನಾ ಪರವಾನಗಿ ಸಿಗುತ್ತದೆ. ಹೀಗಾಗಿ ಆಟೋಗಳನ್ನು ಓಡಿಸುವವರು ಹಲವಾರು ಜನರು ಅನಕ್ಷರಸ್ಥರು ಮತ್ತೆ ಎಂಟನೇ ತರಗತಿಗಿಂತ ಕಡಿಮೆ ಓದಿದವರು. ಹೀಗಾಗಿ ಪೊಲೀಸರೇ ಮುತುವರ್ಜಿ ವಹಿಸಿ ಆಟೋ ಚಾಲಕರಿಗೆ ಚಾಲನಾ ಪರವಾನಗಿ ಕೊಡಿಸಬೇಕು ಎಂದು ನಿರ್ಧರಿಸಿ ಕಳೆದ ಮಾರ್ಚ್‌ನಲ್ಲಿ ಆರ್‌ಟಿಒ, ಸಂಚಾರ ಪೊಲೀಸರು, ನೂರಿ ಡ್ರೈವಿಂಗ್‌ ಶಾಲೆ, ಆಟೋ ಚಾಲಕರ ಸಭೆ ಕರೆಯಲಾಗಿತ್ತು. ಅಲ್ಲಿಯೇ ಅವರಿಗೆ ಚಾಲನಾಪರವಾನಗಿ ಹೊಂದುವರಿಂದ ಏನೇನು ಅನುಕೂಲ ಇದೆ ಎಂದು ತಿಳಿವಳಿಕೆ ಮೂಡಿಸಲಾಗಿತ್ತು.

‘ಸರ್ಕಾರಿ ಫೀಸ್‌ ₹900 ಇದೆ. ಹೀಗಾಗಿ ಇದರಲ್ಲಿ ಡಿಎಲ್ ಮಾಡಿಸಿಕೊಡುವಂತೆ ಪೊಲೀಸರು ಮನವಿ ಮಾಡಿದ್ದರು. ಹೀಗಾಗಿ ನಮಗೆ ನಷ್ಟವಾದರೂ ಪರವಾಗಿಲ್ಲ. ಬಡ ಆಟೋ ಚಾಲಕರಿಗೆ ಅನುಕೂಲವಾಗಲಿ ಎಂದು ಚಾಲನಾ ಪರವಾನಗಿ ಮಾಡಿಕೊಡಲಾಗಿದೆ’ ಎಂದು ಜುಬೇರ್ ಹೈಮದ್‌ ಹೇಳುತ್ತಾರೆ.

ADVERTISEMENT

‘ನಾನು ಇಲ್ಲಿಗೆ ಬಂದಾಗ ಹಲವಾರು ಆಟೋ ಚಾಲಕರು ಚಾಲನಾ ಪರವಾನಗಿ ಇಲ್ಲ ಎಂದು ಹೇಳುತ್ತಿದ್ದರು. ಹೀಗಾಗಿ ಇವರಿಗೆ ಪೊಲೀಸ್‌ ಇಲಾಖೆ ವತಿಯಿಂದಲೇ ಚಾಲನಾ ಪರವಾನಗಿ ಕೊಡಿಸಬೇಕು ಎನಿಸಿತು. ಕಳೆದ ಐದು ತಿಂಗಳಿಂದ ಇದಕ್ಕೆ ಪ್ರಯತ್ನ ಪಟ್ಟಿದ್ದೇವೆ. ಈಗ ಇದು ಫಲ ನೀಡಿದೆ. ಅಲ್ಲದೆ ಹೊಸ ಸಂಚಾರ ನಿಯಮ ಬಂದಿದ್ದಕ್ಕೂ ಆಟೋ ಚಾಲಕರಿಗೆ ಬಹಳ ಉಪಯೋಗವಾಗಿದೆ’ ಎನ್ನುತ್ತಾರೆ ಸಂಚಾರ ಪೊಲೀಸ್‌ ಪಿಎಸ್‌ಐ ಭೀಮರತ್ನ ಸಜ್ಜನ್.

ಏನೇನು ದಾಖಲಾತಿ ಬೇಕು: ಚಾಲನ ಪರವಾನಗಿಗೆ ಎರಡು ಫೋಟೋ, ಆಧಾರ್‌ ಕಾರ್ಡ್‌, ಜನನ ಪ್ರಮಾಣ ಪತ್ರ, 8ನೇ ತರಗತಿ ಓದಿದ್ದರೆ ಮಾರ್ಕ್ಸ್‌ ಕಾರ್ಡ್‌ ಇಲ್ಲದಿದ್ದರೆ ನೋಟರಿ ಮಾಡಿಸಿ ಸಂಚಾರ ಪೊಲೀಸ್‌ ಠಾಣೆಗೆ ತಂದು ಕೊಟ್ಟರೂ ಸಾಕು. ಅಲ್ಲಿಂದ ಸಂಚಾರ ಪೊಲೀಸರು ಆರ್‌ಟಿಒಗೆ ಈ ಮಾಹಿತಿಯನ್ನು ಆಪ್ಲೋಡ್‌ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.