ADVERTISEMENT

ಶಿರವಾಳ: ಕುಡಿಯುವ ನೀರಿಗೆ ತತ್ವಾರ

ಭೀಮಾ ನದಿಯಿಂದ ನಾಲ್ಕೇ ಕಿ.ಮೀ ದೂರದಲ್ಲಿರುವ ಗ್ರಾಮ

ಟಿ.ನಾಗೇಂದ್ರ
Published 14 ಜೂನ್ 2022, 3:53 IST
Last Updated 14 ಜೂನ್ 2022, 3:53 IST
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ಮಕ್ಕಳು
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ಮಕ್ಕಳು   

ಶಹಾಪುರ: ಭೀಮಾನದಿಯಿಂದ ಕೇವಲ 4 ಕಿ.ಮೀ ದೂರದಲ್ಲಿರುವ ತಾಲ್ಲೂಕಿನ ಶಿರವಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಗ್ರಾಮ ಪಂಚಾಯಿತಿಯ ಅಸಮರ್ಪಕ ನಿರ್ವಹಣೆಯ ಸಮಸ್ಯೆಯಿಂದ ಹಳ್ಳ ಇಲ್ಲವೆ ಗಣಿಯಲ್ಲಿ ಸಂಗ್ರಹವಾದ ನೀರು ಸೇವನೆ ಮಾಡುವಂತಾಗಿದ್ದು, ಮಳೆಗಾಲದಲ್ಲೂ ಸಮಸ್ಯೆಯ ಮುಂದುವರಿದಿದ್ದು ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.

ಮಾಜಿ ಶಾಸಕಗುರು ಪಾಟೀಲ್ ಶಿರವಾಳ ಅವರ ಸ್ವಗ್ರಾಮದ ದುಸ್ಥಿತಿ ಇದು. ಹಲವು ವರ್ಷದ ಹಿಂದೆ ಸ್ಥಾಪಿಸಿದ್ದ ಎರಡು ಶುದ್ಧ ಕುಡಿಯುವ ನೀರಿನ ಘಟಕ ಆರಂಭವಾಗಿಯೇ ಇಲ್ಲ. ಈಗಾಗಲೇ ಅಲ್ಲಿ ಯಂತ್ರಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಗ್ರಾಮದಲ್ಲಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದ್ದಾರೆ ತೆರವುಗೊಳಿಸಲು ಮುಂದಾದರೆ ರಾಜಕೀಯ ಪ್ರಭಾವ ಬಳಕೆಯಾಗುತ್ತದೆ. ಇದರಿಂದ ಒಡೆದು ಹೋದ ಪೈಪು ಹಾಕಲು ನಾವು ಹಿಂದೇಟು ಹಾಕುವಂತೆ ಆಗಿದೆ ಎಂದು ಗ್ರಾ.ಪಂ. ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಇರುವ ಟ್ಯಾಂಕ್‌ನಲ್ಲಿನ ನೀರನ್ನೇ ಕುಡಿಯಲು ಉಪಯೋಗಿಸುತ್ತೇವೆ. ಹಳ್ಳದ ನೀರನ್ನು ಉಳಿದ ಕೆಲಸಗಳಿಗೆ ಬಳಕೆ ಮಾಡುತ್ತೇವೆ. ಶುದ್ಧ ನೀರು ಗಗನ ಕುಸುಮವಾಗಿದೆ. ಇನ್ನೂ ಕುಡಿಯುವ ನೀರಿಗೆ ಪರದಾಡುವಾಗ ಶೌಚಾಲಯ ಸೇರಿ ನೈಸರ್ಗಿಕ ಕ್ರಿಯೆಗಳಿಗೆ ಬಯಲು ಜಾಗವೇ ಗತಿ ಎನ್ನುತ್ತಾರೆ ಗ್ರಾಮದ ಮಹಿಳೆಯರು.

ADVERTISEMENT

ಗ್ರಾಮದಲ್ಲಿ ಸುಮಾರು 4 ಸಾವಿರ ಜನಸಂಖ್ಯೆ ಇದೆ. ಭೀಮಾ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ ಹಾಗೂ ಬಾವಿ ನೀರಿನ ಸಹಾಯದಿಂದ ಹಲವು ಬಡಾವಣೆಗಳಿಗೆ ಪೂರೈಸಲಾಗುತ್ತದೆ. ಆದರೆ ಮೂಲ ಸಮಸ್ಯೆ ಇರುವುದು ಕಳಪೆ ಸಾಮಗ್ರಿ ಬಳಸಿ ಪೈಪು ಒಡೆದು ಹೋಗುವುದು. ವಿದ್ಯುತ್ ಮೋಟಾರ ಕೆಡುವುದು ಹೀಗೆ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತದೆ. ಯಾರ ಮುಂದೆ ಹೇಳಿದರು ಸಮಸ್ಯೆ ಮಾತ್ರ ಪರಿಹಾರ ಆಗುತ್ತಿಲ್ಲ. ವರ್ಷದ ಹಿಂದೆ ಸ್ವತಃ ಅಂದಿನ ಜಿಲ್ಲಾ ಪಂಚಾಯಿತಿ ಮಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶಿಲ್ಪಾ ಶರ್ಮಾ ಆಗಮಿಸಿ ಸಮಸ್ಯೆಯನ್ನು ಕಣ್ಣಾರೆ ಕಂಡರು ಪರಿಹಾರ ಮಾತ್ರ ಶೂನ್ಯ ಎನ್ನುತ್ತಾರೆ ಶೇಖಪ್ಪ ಹಾದಿಮನಿ.

ಈಗಾಗಲೇ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಕೆಲಸ ಸಾಗಿದೆ. ರಸ್ತೆಯ ಮಧ್ಯ ಒಡೆದು ಪೈಪು ಹಾಕಿದ್ದಾರೆ ಇದರಿಂದ ಮತ್ತಷ್ಟು ಸಮಸ್ಯೆ ಬಿಗಡಾಯಿಸಿದೆ. ತ್ವರಿತವಾಗಿ ಕೆಲಸ ಪುರ್ಣಗೊಳಿಸಿ ಗ್ರಾಮಸ್ಥರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡ ಬೇಕು ಎನ್ನುತ್ತಾರೆ ಗ್ರಾಮಸ್ಥರು.

*ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿಲ್ಲ ಇಲ್ಲ. ಜೆಜೆಎಲ್ ಯೋಜನೆ ತ್ವರಿತವಾಗಿ ನಡೆದಿದೆ. ಅಲ್ಲಲ್ಲಿ ಪೈಪು ಒಡೆದು ಹೋಗಿವೆ. ದುರಸ್ತಿಗೊಳಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡುವಂತೆ ಪಿಡಿಒ ಅವರಿಗೆ ಸೂಚಿಸಿರುವೆ

- ಗುರು ಪಾಟೀಲ ಶಿರವಾಳ, ಮಾಜಿ ಶಾಸಕ, ಶಹಾಪುರ

*ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಪೈಪು ಪದೇ ಪದೇ ಒಡೆಯುತ್ತಿರುವುದು ನಮಗೆ ತಲೆ ನೋವಾಗಿದೆ. ತ್ವರಿತವಾಗಿ ಕೆಲಸ ಪೂರ್ಣಗೊಳಿಸಲಾಗುವುದು. ಎರಡು ಶುದ್ಧ ನೀರಿನ ಘಟಕಗಳು ಬಂದ್ ಆಗಿವೆ. ದುರಸ್ತಿ ಮಾಡಲಾಗುವುದು

- ವಸಂತ ಪವಾರ, ಪಿಡಿಒ, ಶಿರವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.