ADVERTISEMENT

ಯಂಪಾಡ: ಶುದ್ಧ ನೀರು ಮರೀಚಿಕೆ

5 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮ; ಜೀವಜಲಕ್ಕಾಗಿ ನಿತ್ಯ ಪರದಾಟ

ಎಂ.ಪಿ.ಚಪೆಟ್ಲಾ
Published 14 ಮೇ 2022, 2:27 IST
Last Updated 14 ಮೇ 2022, 2:27 IST
ಯಂಪಾಡ ಗ್ರಾಮದಲ್ಲಿ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಲು ಸರತಿಯಲ್ಲಿ ನಿಂತ ಕುರುಬರ ಓಣಿಯ ನಿವಾಸಿಗಳು
ಯಂಪಾಡ ಗ್ರಾಮದಲ್ಲಿ ಕೊಳವೆ ಬಾವಿಯಿಂದ ನೀರು ಸಂಗ್ರಹಿಸಲು ಸರತಿಯಲ್ಲಿ ನಿಂತ ಕುರುಬರ ಓಣಿಯ ನಿವಾಸಿಗಳು   

ಗುರುಮಠಕಲ್: ಒಂದು ಭಾಗದಲ್ಲಿ ರಸ್ತೆಯಲ್ಲಿ ಹರಿಯುವ ನೀರು. ಇನ್ನೊಂದೆಡೆ ನೀರು ಬರುವುದನ್ನು ಚಾತಕಪಕ್ಷಿಯಂತೆ ಕಾಯುವ ಜನ. ಪೊಲೀಸ್ ಠಾಣೆಯವರೆಗೂ ಹೋಗಿದ್ದ ನೀರಿನ ಜಗಳ...

ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಕಂಡು ಬರುವ ದುಸ್ಥಿತಿ ಇದು.

ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಯಂಪಾಡದಲ್ಲಿ 5 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, 780 ಕುಟುಂಬಗಳಿವೆ. 8 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಆದರೆ ಮೂಲಸೌಕರ್ಯಗಳ ಕೊರತೆಯಿಂದ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.

ADVERTISEMENT

ಗ್ರಾಮೀನ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಪೂರೈಕೆಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಿ, ಅನುದಾನ ಬಿಡುಗಡೆ ಮಾಡಿದ ನಂತರವೂ ತೀರದ ಸಮಸ್ಯೆಗಳಿಂದಾಗಿ ಜನರು ಸಮಸ್ಯೆಯನ್ನೆ ಜೀವನದ ಭಾಗವಾಗಿಸಿಕೊಂಡಿದ್ದಾರೆ.

‘2–3 ದಿನಗಳಲ್ಲಿ ನೀರಿನ ಸಮಸ್ಯೆ ಸರಿಪಡಿಸುತ್ತೇವೆ. ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎನ್ನುತ್ತಲೇ ದಿನದೂಡುವ ಪಂಚಾಯಿತಿ ನೀರನ್ನು ಮಾತ್ರ ನೀಡುತ್ತಿಲ್ಲ. ಪಂಚಾಯಿತಿ ಕಚೇರಿಗೆ ಹೋದರೆ ಏನಾದರೊಂದು ಕಾಟಾಚಾರದ ಭರವಸೆ ನೀಡಿ ಕಳುಹಿಸುತ್ತಾರೆ. ಆದರೆ, ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕೆಂಬ ಬದ್ಧತೆ ಮಾತ್ರ ಯಾರಿಗೂ ಇಲ್ಲ’ ಎಂದು ಗ್ರಾಮದ ಶೋಭಾ, ಸಾಬಮ್ಮ, ಶಶಿಕಲಾ ಅಳಲು ತೋಡಿಕೊಂಡರು.

ಕುಡಿಯೋದಕ್ಕೇ ಸರಿಯಾಗಿ ನೀರು ಕೊಡದವರು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರಚಾರ ಮಾಡುತ್ತಿರುವುದು ನೋಡಿದರೆ ನಮಗೆ ಗೊಂದಲವಾಗುತ್ತದೆ. ಕೈಕಾಲು ಹಿಡಿದು ಬೇಡಿದರೂ ನಮ್ಮ ನೀರಿನ ಸಮಸ್ಯೆ ಬಗೆಹರಿಸದವರು ಶೌಚಾಲಯದ ಬಳಕೆಯ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಅವರಿಗೆ ಮನಸಾಕ್ಷಿ ಯಿದ್ದರೆ ಮೊದಲು ನಮಗೆ ನೀಡಿದ ಭರವಸೆ ಈಡೇರಿಸಲಿ ಎಂದು ಮಹಿಳೆಯೊಬ್ಬರು ಆಕ್ರೋಶ
ವ್ಯಕ್ತಪಡಿಸಿದರು.

ಖಾಸಗಿ ಕೊಳವೆಬಾವಿಯಿಂದ ನಮ್ಮ ಮನೆಗಳ ಮುಂದಿನಿಂದಲೇ ಪೈಪ್‌ಲೈನ್ ಮಾಡಿ ಅವರಿಗೆ ಬೇಕಿದ್ದವರಿಗೆ ನೀರು ಪೂರೈಸುತ್ತಿರುವ ಪಂಚಾಯಿತಿ ನಮಗೆ ಮಾತ್ರ ಉಪ್ಪು ನೀರನ್ನು ಕುಡಿಯಲು ಹೇಳುತ್ತದೆ. ಒಮ್ಮೆ ಪೈಪ್‌ಲೈನ್ ನಿಲ್ಲಿಸಿದ್ದಾಗ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೂ, ನಮಗೆ ನೀರು ಮಾತ್ರ ಸಿಗಲಿಲ್ಲ. ಪಂಚಾಯಿತಿಯಲ್ಲಿ ಕೇಳಲು ಹೋದರೆ ನಮ್ಮ ಮಾತಿಗೆ, ಮನವಿಗೆ ಕಿಮ್ಮತ್ತು ಸಿಗುತ್ತಿಲ್ಲ ಎಂದು ಗ್ರಾಮಸ್ಥರಾದ ಆನಂದ ಹಾಗೂ ಶರಣಪ್ಪ ತಿಳಿಸಿದರು.

ಈ ಕುರಿತು ಪಿಡಿಒ ರಾಜೇಂದ್ರ ಜಮಾದಾರ ಮಾತನಾಡಿ, ಗ್ರಾಮದಲ್ಲಿ ನೀರಿನ ಲಭ್ಯತೆಯಿಲ್ಲ. ಬಹುಗ್ರಾಮ ನೀರು ಸರಬರಾಜು ಯೋಜನೆಯಿಂದ ವಾರಕ್ಕೆ 2 ದಿನ ಮಾತ್ರ ನೀರು ಸಿಗುತ್ತಿದೆ. ಸಮಸ್ಯೆಯ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಇನ್ನೂ 3– 4 ದಿನಗಳಲ್ಲಿ ಜಲಜೀವನ್ ಯೋಜನೆ ಸಂಪರ್ಕ ಪೂರ್ಣಗೊಂಡು ಪಂಚಾಯಿತಿಗೆ ಹಸ್ತಾಂತರಿಸಿದ ನಂತರ ಸಮಸ್ಯೆ ಸ್ವಲ್ಪ ಕಡಿಮೆಯಾಗಬಹುದು. ತಾಲ್ಲೂಕು ಪಂಚಾಯಿತಿಯಿಂದ 15ನೇ ಹಣಕಾಸು ಯೋಜನೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಮಾನ ಮಾಡಿಕೊಳ್ಳಲಾಗಿದೆ’ ಎಂದರು.

ಯಂಪಾಡ ಗ್ರಾಮದ ನೀರಿನ ಸೌಲಭ್ಯ

650; ಮನೆಗಳು
150; ವೈಯಕ್ತಿಕ ನಳ
100; ಸಾರ್ವಜನಿಕ ನಳ

(ದಿನದ ಪೂರೈಕೆ)

ಬೇಡಿಕೆ; 1 ಲಕ್ಷ ಲೀಟರ್

ಪೂರೈಕೆ; 50 ಸಾವಿರ ಲೀಟರ್

ಇವರು ಏನಂತಾರೆ?

*8 ದಿನಕ್ಕೊಮ್ಮೆ ನೀರು ಬರುತ್ತೆ. ಅದೂ ಸಹ ನೆರೆ ಹೊರೆಯರೊಡನೆ ಕಾದಾಡಿದರೆ ಒಬ್ಬೊಬ್ಬರಿಗೆ ಎರಡರಿಂದ ಮೂರು ಕೊಡ ಸಿಗುತ್ತದೆ. ನಮ್ಮದೆ ಗ್ರಾಮದ ಇನ್ನೊಂದು ಭಾಗದಲ್ಲಿ ನಿತ್ಯವೂ ನೀರು ರಸ್ತೆಯಲ್ಲಿ ಹರಿಯುವಷ್ಟು ಪೂರೈಕೆಯಾಗುತ್ತಿದೆ.

–ಆನಂದ ಕಲಾಲ್, ಗ್ರಾಮದ ಯುವಕ

*ನೀರು ಕೊಡುತ್ತೇವೆಂದು ನಮ್ಮಿಂದ ₹1,454 ಪಡೆದಿದ್ದಾರೆ. ಆದರೆ, ನೀರು ಮಾತ್ರ ಬರುವುದೇ ಇಲ್ಲ. ಬಳಕೆಯ ನೀರಿಗೆ ಕೊಳವೆಬಾವಿ, ಕುಡಿಯುವ ನೀರಿಗೆ 2.ಕಿ.ಮೀ ದೂರದ ಕೊಳವೆಬಾವಿಗೆ ಹೋಗಲಬೇಕು. ನಮ್ಮಿಡಿ ಜೀವನ ನೀರು ಹೊತ್ತು ತರುವುದೇ ಆಗಿದೆ

– ಭೀಮಮ್ಮ ಕತಲಪ್ಪನೋರ, ಗ್ರಾಮಸ್ಥೆ

*ನಾವೂ ಇದೇ ಊರಿನವರು ಸಾರ್, ನಮಗೂ ನೀರುಕೊಡಿ ಎಂದು ಪಂಚಾಯಿತಿಗೆ ಕೇಳಿದರೆ ಹುಸಿ ಭರವಸೆ ನೀಡುತ್ತಾ ಸಾಗಹಾಕುತ್ತಾರೆ. ನೀರು ಮಾತ್ರ ನೀಡಲ್ಲ. ನಮ್ಮ ಭಾಗದಲ್ಲಿ ನೀರು ದುಬಾರಿಯಾಗಿದೆ

– ಶರಣಮ್ಮ ದೊಡ್ಮನಿ, ಗ್ರಾಮಸ್ಥೆ

*ಜನರಿಗೆ ಶುದ್ಧ ನೀರು ಮರೀಚಿಕೆಯಾಗಿದೆ. ದೂರದ ಹೊಲದಲ್ಲಿನ ಖಾಸಗಿ ಕೊಳವೆಬಾವಿಯಿಂದ ನೀರು ತರುವಾಗ ಕಾಲುಜಾರಿ ಬಿದ್ದು, ಭುಜದ ಮೂಳೆ ಮುರಿದಿತ್ತು. ನಮ್ಮ ಕಷ್ಟ ಯಾರಿಗೂ ಬೇಡ

– ಶರಣಪ್ಪ ಅಲಿಪುರ, ಗ್ರಾಮಸ್ಥ

*15ನೇ ಹಣಕಾಸು ಯೋಜನೆಯಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಜೆಜೆಎಂ ಮತ್ತು ಬಹುಗ್ರಾಮ ಯೋಜನೆಗಳ ಮೂಲಕ ಯಂಪಾಡ ಗ್ರಾಮದ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ. ಗ್ರಾಮ ಪಂಚಾಯಿತಿಯವರು ಬಹುಗ್ರಾಮ ನೀರು ಯೋಜನೆಯ ನೀರೆತ್ತುವ ಘಟಕ ದಲ್ಲಿ ಆಪರೇಟರ್ ನೇಮಕ ಮಾಡಿಕೊಳ್ಳಬಹುದು

– ಎಸ್.ಎಸ್.ಖಾದ್ರೋಳಿ, ತಾಲ್ಲೂಕು ಪಂಚಾಯಿತಿ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.