
ಯಾದಗಿರಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಕಾನೂನುಬಾಹಿರ ನಡೆ ಅನುಸರಿಸುತ್ತಿದೆ ಎಂದು ಆರೋಪಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್) ಜಿಲ್ಲಾ ಮುಖಂಡರು, ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕ್ರೀಡಾಂಗಣದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ನೀಲಿ ಧ್ವಜ, ಸಂವಿಧಾನ ಪ್ರಸ್ತಾವನೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಿಡಿದು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಆರ್‌ಎಸ್‌ಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಿದರು.
‘ಕೇಂದ್ರದಲ್ಲಿ ಮನುವಾದಿಗಳು ಅಧಿಕಾರಕ್ಕೆ ಬಂದ ನಂತರ ದಲಿತ ಸಮುದಾಯದ ಮೇಲಿನ ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಾಗುತ್ತಿವೆ. ದಲಿತ ಸಮುದಾಯವನ್ನು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ವ್ಯವಸ್ಥಿತವಾಗಿ ಸದೆಬಡಿಯಲಾಗುತ್ತಿದೆ. ಸುಪ್ರೀಂಕೋರ್ಟ್ ಸಿಜೆಐ ಗವಾಯಿ ಅವರ ಮೇಲೆ ಜಾತಿವಾದಿ ವಕೀಲನೊಬ್ಬ ಶೂ ಎಸೆದು ದೇಶದ್ರೋಹದ ಕೃತ್ಯ ಎಸಗಿದ್ದರು. ದಲಿತರು ಉನ್ನತ ಹುದ್ದೆಗಳಿಗೆ ಏರುವುದನ್ನು ಸಹಿಸುತ್ತಿಲ್ಲ’ ಎಂದು ಆರೋಪಿಸಿದರು.
‘ಅಧಿಕೃತವಾಗಿ ನೋಂದಣಿ ಆಗದೆ ಅನಧಿಕೃತ ಆದಾಯ ಮೂಲಗಳನ್ನು ಹೊಂದಿ ತೆರಿಗೆ ಪಾವತಿಸದೆ, ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಆರ್‌ಎಸ್‌ಎಸ್ ಸಂವಿಧಾನದ ಚೌಕಟ್ಟಿನಲ್ಲಿ ವರ್ತಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದರು. ಇದನ್ನು ಗುರಿಯಾಗಿಸಿಕೊಂಡು ಕೆಲವರು ಅವರನ್ನು ಮತ್ತು ಅವರ ಕುಟುಂಬವನ್ನು ಅವಮಾನಿಸುತ್ತಿದ್ದಾರೆ’ ಎಂದರು.
‘ಪ್ರಿಯಾಂಕ್ ಅವರ ರಾಜಕೀಯ ಏಳಿಗೆಯನ್ನು ಸಹಿಸದ ಮನುವಾದಿಗಳು ಮಲ್ಲಿಕಾರ್ಜುನ ಖರ್ಗೆ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸುತ್ತಿದ್ದಾರೆ. ಇಂತಹ ದಲಿತ ವಿರೋಧಿ ಧೋರಣೆಯನ್ನು ಖಂಡಿಸುತ್ತೇವೆ. ದಲಿತ ಸಮುದಾಯ ಸಂಘಟನಾತ್ಮಕವಾಗಿ ಆರ್‌ಎಸ್‌ಎಸ್ ಅನ್ನು ಪ್ರತಿರೋಧಿಸಬೇಕಿದೆ’ ಎಂದು ಹೇಳಿದರು.
‘ರಾಷ್ಟ್ರಗೀತೆ ಬಗ್ಗೆ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನೀಡಿದ ಹೇಳಿಕೆಯನ್ನು ಅಸಂಬದ್ಧವಾಗಿದೆ. ರಾಷ್ಟ್ರ ವಿರೋಧಿ ಹೇಳಿಕೆ ಸಂಬಂಧ ಕಾಗೇರಿ ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ಪದಾಧಿಕಾರಿಗಳಾದ ಚಂದಪ್ಪ ಮುನೆಪ್ಪನೋರ, ಶಿವಲಿಂಗ ಹಸನಾಪುರ, ಮರೆಪ್ಪ ಕ್ರಾಂತಿ, ಶಿವಕುಮಾರ ತಳವಾರ, ತಿಪ್ಪಣ್ಣ ಶೆಳ್ಳಗಿ, ತಾಯಪ್ಪ ಭಂಡಾರಿ, ಭೀಮಾಶಂಕರ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ರಂಗಸ್ವಾಮಿ ಕೊಂಕಲ್, ಚಂದ್ರು ಬಲಶೆಟ್ಟಿಹಾಳ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.