ADVERTISEMENT

ಸಂಭ್ರಮದ ದಸರಾ ಹಬ್ಬ ಆಚರಣೆ; ದೇವಿಗೆ ಮೂರ್ತಿ ಭವ್ಯ ಮೆರವಣಿಗೆ

ನೆರೆ ನಡುವೆಯೂ ಕಳೆ ಗಟ್ಟಿದ ಸಡಗರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 14:21 IST
Last Updated 8 ಅಕ್ಟೋಬರ್ 2019, 14:21 IST
ಯಾದಗಿರಿಯ ಚಕ್ರಕಟ್ಟಾ ಬಡಾವಣೆಯಲ್ಲಿ ಜೈ ಭವಾನಿ ಹಿಂದೂ ಸೇವಾ ಸಮಿತಿಯಿಂದ ದೇವಿ ಮೂರ್ತಿ ಪ್ರತಿಸ್ಠಾಪನೆ ಮಾಡಿ, ಪೂಜೆ ಸಲ್ಲಿಸಲಾಯಿತು
ಯಾದಗಿರಿಯ ಚಕ್ರಕಟ್ಟಾ ಬಡಾವಣೆಯಲ್ಲಿ ಜೈ ಭವಾನಿ ಹಿಂದೂ ಸೇವಾ ಸಮಿತಿಯಿಂದ ದೇವಿ ಮೂರ್ತಿ ಪ್ರತಿಸ್ಠಾಪನೆ ಮಾಡಿ, ಪೂಜೆ ಸಲ್ಲಿಸಲಾಯಿತು   

ಯಾದಗಿರಿ: ಬೆಲೆ ಏರಿಕೆ ನಡುವೆಯೂ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಆಯುಧ ಪೂಜೆ, ಮಂಗಳವಾರ ದಸರಾ ಹಬ್ಬವನ್ನು ಸಾರ್ವಜನಿಕರು ಸಂಭ್ರಮದಿಂದ ಆಚರಿಸಿದರು.

ವಿವಿಧ ದೇಗುಲಗಳಲ್ಲಿ ದುರ್ಗಾದೇವಿ, ತುಳಜಾ ಭವಾನಿ, ಮಹಾಲಕ್ಷ್ಮಿ, ಚಾಮುಂಡೇಶ್ವರಿ ದೇವಿಗೆ ಭಕ್ತರು ಪೂಜೆ ಸಲ್ಲಿಸುವ ಮೂಲಕ ದಸರಾ ಹಬ್ಬದ ಸಡಗರಕ್ಕೆ ಸಾಕ್ಷಿಯಾದರು.

ಸೋಮವಾರ ಆಯುಧ ಪೂಜೆ ಅಂಗವಾಗಿ ತಮ್ಮ ಕೆಲಸದ ಸಾಮಾಗ್ರಿ, ವಾಹನ ಮತ್ತು ಆಯುಧಗಳನ್ನು ಸ್ವಚ್ಛಗೊಳಿಸಿ ಮನೆ, ಅಂಗಡಿ ಮುಂಗಟ್ಟುಗಳಲ್ಲಿ, ಕೆಲಸ ಮಾಡುವ ಕಚೇರಿಗಳಲ್ಲಿ ಆಯುಧ ಪೂಜೆ ಮಾಡಿದರು.

ADVERTISEMENT

ಎಟಿಎಂ ಬಂದ್‌:

ಸಾಲು ಸಾಲು ರಜೆ ಬಂದಿದ್ದರಿಂದ ಆಯುಧಪೂಜೆ ದಿನ ಸಾರ್ವಜನಿಕರು ಎಟಿಎಂನಲ್ಲಿ ಹಣವಿಲ್ಲದೆ ಪರದಾಡಿದರು. ಭಾನುವಾರ ರಜೆ, ಸೋಮವಾರ ಆಯುಧ ಪೂಜೆ, ಮಂಗಳವಾರ ದಸರಾ ಹಬ್ಬದ ಅಂಗವಾಗಿ ಮೂರು ದಿನ ಸತತವಾಗಿ ರಜೆ ಇದ್ದಿದ್ದರಿಂದ ಬ್ಯಾಂಕ್‌ಗಳು ಮುಚ್ಚಿದ್ದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಟಿಎಂ ಕೇಂದ್ರಗಳ ಮುಂದೆ ‘ನೋ ಕ್ಯಾಶ್‌’ ಬೋರ್ಡ್‌ ನೇತು ಹಾಕಲಾಗಿತ್ತು.

ಇಲ್ಲಿನ ಸ್ಟೇಷನ್ ಬಜಾರ್ ಹಾಗೂ ಗಾಂಧಿ ಬಜಾರ್‌, ಭುವನೇಶ್ವರಿ ಬೆಟ್ಟ, ಜಗಜೀವನರಾಂ ನಗರದಲ್ಲಿ ನವರಾತ್ರಿ ಅಂಗವಾಗಿ ಭವಾನಿ ದೇವಿಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಆಯುಧ ಪೂಜೆ ಅಂಗವಾಗಿ ನಗರದ ಸುಭಾಷ್ ಹಾಗೂ ಮಹಾತ್ಮ ಗಾಂಧಿ ವೃತ್ತ ಸ್ಟೇಷನ್ ರಸ್ತೆಗಳಲ್ಲಿ ಜನಸಂದಣಿ ದಟ್ಟವಾಗಿತ್ತು. ಬೆಲೆ ತುಸು ಹೆಚ್ಚಾದರೂ ಹೂ, ಹಣ್ಣುಕಾಯಿ, ಬಾಳೆದಿಂಡು, ಹಣ್ಣುಗಳವ್ಯಾಪಾರ ಜೋರಾಗಿ ನಡೆಯಿತು. ಬಟ್ಟೆ ಅಂಗಡಿಗಳಲ್ಲಿ ಜನರೇ ತುಂಬಿದ್ದರು. ಮಹಿಳೆಯರ ಸಂಭ್ರಮ ಮೇರೆಮೀರಿತ್ತು. ನಗರದ ಬಳೆ ಮತ್ತು ಬಟ್ಟೆ, ಆಭರಣಗಳ ಅಂಗಡಿಗಳಲ್ಲಿ ಮಹಿಳೆಯರ ದಂಡು ಜಮಾಯಿಸಿದ್ದವು. ಹೊಸ ಉಡುಗೆತೊಟ್ಟ ಮಕ್ಕಳು ಸಂಭ್ರಮಿಸಿದರು.

ಮನೆಯಲ್ಲಿ ಸಿಹಿಯೂಟ ತಯಾರಿಸಿ ಬಂಧು ಬಳಗವನ್ನು ಹಬ್ಬಕ್ಕೆ ಆಹ್ವಾನಿಸಿದ್ದರು. ಅಕ್ಕಪಕ್ಕದರನ್ನು ಊಟಕ್ಕೆ ಆಹ್ವಾನಿಸುವುದರ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಗೊಳಿಸಿದರು. ಹಬ್ಬದ ಅಂಗವಾಗಿ ಮಂಗಳವಾರ ರಸ್ತೆಯಲ್ಲಿ ವಾಹನಗಳ ವಿರಳವಾಗಿತ್ತು, ಅಲ್ಲದೆ ಜನರು ಹಬ್ಬದ ಅಂಗವಾಗಿ ದೇವಸ್ಥಾನ, ಪೂಜೆಯಲ್ಲಿ ನಿರತರಾಗಿದ್ದರು. ಇದರಿಂದ ಹಲವಾರು ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು.

ಹಿಂದು ಸೇವಾ ಸಮಿತಿ ಸದಸ್ಯರು ಮಂಗಳವಾರ ಸಂಜೆ 600ಕ್ಕೂಹೆಚ್ಚು ಭಕ್ತರು ತುಳಜಾಪುರಕ್ಕೆ ಕಾಲ್ನನಡಿಗೆಯಲ್ಲಿ ಪಾದಯಾತ್ರೆ ಬೆಳೆಸಿದರು.

ಸ್ಟೇಷನ್ ಏರಿಯಾದ ಶಿವಾಜಿನಗರದ ಬಳಿ ಒಂಬತ್ತು ದಿನಗಳು ಕಾಲ ದೇವಿ ಪುರಾಣ, ಸಂಜೆ ದಾಂಡಿಯಾ ಹಾಗೂ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು.

ಮಂಗಳವಾರ ಸಂಜೆ ದೇವಿಯ ಭವ್ಯ ಮೆರವಣಿಗೆ ನಡೆಯಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಷಯ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.