ADVERTISEMENT

ಅಂಚೆ ಕಚೇರಿಯಲ್ಲಿ ‘ಇ ಪೋಸ್ಟ್ ಪೇಮೆಂಟ್’

ಗ್ರಾಮೀಣ ಭಾಗಗಳಲ್ಲೂ ವಿಸ್ತರಿಸಿದ ಸೇವೆ; ಅನಕ್ಷರಸ್ಥರಿಗೆ ಅನುಕೂಲ

ಮಲ್ಲೇಶ್ ನಾಯಕನಹಟ್ಟಿ
Published 26 ಆಗಸ್ಟ್ 2018, 18:01 IST
Last Updated 26 ಆಗಸ್ಟ್ 2018, 18:01 IST
ಯಾದಗಿರಿಯಲ್ಲಿನ ಅಂಚೆ ಕಚೇರಿ
ಯಾದಗಿರಿಯಲ್ಲಿನ ಅಂಚೆ ಕಚೇರಿ   

ಯಾದಗಿರಿ: ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆ’ ಮೂಲಕ ಸಂಪೂರ್ಣ ಡಿಜಿಟಲೀಕರಣಕ್ಕೆ ಅಂಚೆ ಕಚೇರಿ ತೆರೆದುಕೊಂಡಿದೆ. ಸೆಪ್ಟೆಂಬರ್‌ 1ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂತಹ ಸೇವಾ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಗರದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಈ ಸೇವೆ ಆರಂಭಗೊಳ್ಳಲಿದೆ.

‘ಮನೆ ಮನೆಗೂ ತಮ್ಮ ಬ್ಯಾಂಕ್’ ಎಂಬ ಧ್ಯೇಯವಾಕ್ಯದೊಂದಿಗೆ ಕೇಂದ್ರ ಸರ್ಕಾರ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸೇವೆ ಆರಂಭಿಸಿದೆ. ನಗರ ಪ್ರದೇಶಗಳಲ್ಲಿ ಈಗಾಗಲೇ ಎಲ್ಲಾ ಬ್ಯಾಂಕುಗಳಲ್ಲಿ ‘ಇ ಪೇಮೆಂಟ್ಸ್‌ ಸೇವೆ’ ಸಿಗುತ್ತಿದೆ. ಅಂಚೆ ಕಚೇರಿಯ ಸೇವೆ ಬ್ಯಾಂಕ್‌ ಮಾದರಿಯೇ ಇದ್ದರೂ, ಬ್ಯಾಂಕುಗಳಿಗಿಂತ ಒಂದು ಹೆಜ್ಜೆ ಸೇವೆ ವಿಸ್ತರಿಸಿಕೊಂಡಿದೆ.

ಬ್ಯಾಂಕುಗಳಿಂದ ಗ್ರಾಮೀಣ ಭಾಗದ ಜನರಿಗೆ ಇ ಪೇಮೆಂಟ್ಸ್ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಗ್ರಾಮಗಳಲ್ಲೂ ಬ್ಯಾಂಕುಗಳು ಲಭ್ಯವಿಲ್ಲ. ಅನಕ್ಷರತೆಯಿಂದಾಗಿ ಸಾಮಾನ್ಯ ಜನರು ಇ ಬ್ಯಾಂಕಿಂಗ್‌ ವ್ಯವಹಾರಕ್ಕೆ ಕೈ ಹಾಕಿಲ್ಲ. ಆದರೆ, ಅಂಚೆ ಬ್ಯಾಂಕಿಂಗ್‌ ಸೇವೆ ಕ್ಲಿಷ್ಟಕರವಾಗಿಲ್ಲ. ಈ ಮೊದಲು ಅಂಚೆ ಅಣ್ಣ ಹೇಗೆ ಗ್ರಾಮಗಳಿಗೆ ಹೋಗಿ ಪತ್ರಗಳನ್ನು ವಿತರಿಸುತ್ತಿದ್ದನೋ, ಅದೇ ಮಾದರಿಯಲ್ಲಿ ಮನೆ ಬಾಗಿಲಿಗೆ ಉಳಿತಾಯ ಖಾತೆಯಲ್ಲಿನ ಹಣ ಜನರಿಗೆ ಸಿಗಲಿದೆ. ಜತೆಗೆ ಅಂಚೆ ಅಣ್ಣಂದಿರು ಹಣ ಜಮಾ ಮಾಡಿಸಿಕೊಂಡು ಬ್ಯಾಂಕ್ ಸಿಬ್ಬಂದಿಯಂತೆಯೇ ಕಾರ್ಯ ನಿರ್ವಹಿಸಲಿದ್ದಾರೆ ಎನ್ನುತ್ತಾರೆ ಜಿಲ್ಲಾ ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್‌.ಚಿತಕೋಟಿ.

ADVERTISEMENT

ಜಿಲ್ಲಾ ವ್ಯಾಪ್ತಿಯಲ್ಲಿ ಸದ್ಯ ಎರಡು ಕಡೆಗಳಲ್ಲಿ ಈ ಸೇವೆ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 463 ಅಂಚೆ ಕಚೇರಿಗಳು ಈ ಸೇವೆಯ ವ್ಯಾಪ್ತಿಗೆ ಒಳಪಡಲಿವೆ. ಸದ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಹಾಗಾಗಿ, ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಜಿಲ್ಲಾಕೇಂದ್ರ ಕಚೇರಿ ಹಾಗೂ ಸ್ಟೇಷನ್‌ ಅಂಚೆ ಕಚೇರಿಗಳಲ್ಲಿ ಸದ್ಯ ಈ ಸೇವೆ ಲಭ್ಯವಿದೆ ಎನ್ನುತ್ತಾರೆ ಅವರು.

ಪ್ರಯೋಜನೆಯ ವೈಶಿಷ್ಠ್ಯ

ಖಾತೆ ತೆರೆಯಲು ಅರ್ಜಿ ಗುಜರಾಯಿಸಬೇಕಿಲ್ಲ
ಇದೊಂದು ಕಾಗದ ರಹಿತ ಖಾತೆ
ವ್ಯವಹಾರ ಮಾಡಲು ಉಳಿತಾಯ ಖಾತೆ ಪುಸ್ತಕ ಬೇಕಿಲ್ಲ
ಖಾತೆ ತೆರೆಯಲು ಕನಿಷ್ಠ ಠೇವಣಿ ಬೇಕಿಲ್ಲ. ಕನಿಷ್ಠ ಮೊತ್ತ ಬೇಕಿಲ್ಲ.
₹1 ಲಕ್ಷದವರೆಗೆ ಠೇವಣಿ ಇಡಬಹುದು
ವ್ಯವಹಾರದ ವಿವರಗಳನ್ನು ಉಚಿತವಾಗಿ ಪಡೆಯಬಹುದು
ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಸಾಕು
ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್ ಬರುವುದರಿಂದ ವ್ಯವಹಾರ ಖಚಿತ ಮತ್ತು ಸುರಕ್ಷಿತ
ಖಾತೆಯ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಬೇಕಿಲ್ಲ
ಕ್ಯೂ ಆರ್ ಕಾರ್ಡ್ ಎಲ್ಲ ಮಾಹಿತಿಯನ್ನು ನೀಡುತ್ತದೆ
ಕಳೆದು ಹೋದರೂ ಆಧಾರ್‌ ಸಂಖ್ಯೆ, ಮೊಬೈಲ್ ಸಂಖ್ಯೆಯಿಂದ ವ್ಯವಹಾರ ಮುಂದುವರಿಸಬಹುದು
ಮನೆ ಬಾಗಿಲಲ್ಲೇ ಪೋಸ್ಟ್‌ ಮ್ಯಾನ್ ಮೂಲಕ ಖಾತೆ ತೆರೆಯಬಹುದು
ಎಲ್ಲ ಬಿಲ್ ಪಾವತಿಗಳನ್ನು ಇಂಡಿಯಾ ಪೋಸ್ಟ್‌ ಪೇಮೆಂಟ್ಸ್ ಬ್ಯಾಂಕ್ ಖಾತೆಯಿಂದ ಪಾವತಿಸಬಹುದು

ಅಂಚೆ ಕಚೇರಿ ಗ್ರಾಹಕರಿಗೆ ನೀಡುತ್ತಿರುವ ಇ ಪೇಮೆಂಟ್ಸ್ ಸೇವಾ ಸೌಲಭ್ಯ ಒಂದು ಉತ್ತಮ ಯೋಜನೆಯಾಗಿದೆ. ಅನಕ್ಷರಸ್ಥರಿಗೂ ಇದರ ಪ್ರಯೋಜನ ಸಿಗಲಿದೆ.
- ವಿ.ಎಲ್‌.ಚಿತಕೋಟಿ,ಸಹಾಯಕ ಅಂಚೆ ಅಧೀಕ್ಷಕ ಯಾದಗಿರಿ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.