ADVERTISEMENT

ಸ್ವಯಂ ಉದ್ಯೋಗ; ಆರ್ಥಿಕ ವೃದ್ಧಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 5:02 IST
Last Updated 12 ಆಗಸ್ಟ್ 2021, 5:02 IST
ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಉದ್ಘಾಟಿಸಿದರು
ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಉದ್ಘಾಟಿಸಿದರು   

ಯಾದಗಿರಿ: ಉದ್ಯಮಗಳನ್ನು ಪ್ರಾರಂಭಿ ಸಲು ಬೇಕಾಗುವ ಎಲ್ಲಾ ಮಾಹಿತಿಗಳನ್ನು ಪಡೆದು ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು. ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಯಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರ (ಸಿಡಾಕ್) ಧಾರವಾಡ, ಕೌಶಲ್ಯಾಭಿವೃದ್ದಿ, ಉದ್ಯಮ ಶೀಲತೆ ಹಾಗೂ ಜೀವ ನೋಪಾಯ ಇಲಾಖೆ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೆಲಸ ಮಾಡಲು ನೂರಾರು ದಾರಿಗಳಿರುತ್ತವೆ. ವಿದ್ಯಾವಂತರು ಸ್ವಯಂ ಉದ್ಯೋಗಗಳನ್ನು ಪ್ರಾರಂಭಿಸಲು ಮುಂದೆ ಬರಬೇಕು. ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮಗಳನ್ನು ಪ್ರಾರಂಭಿಸಲು ಸಾಕಷ್ಟು ಅವಕಾಶಗಳು ಲಭ್ಯವಿರುತ್ತವೆ. ದೇಶದಲ್ಲಿ ಯುವಜನತೆ ಬುದ್ಧಿವಂತರಿದ್ದಾರೆ. ಚೀನಾ ದೇಶವು ಜಗತ್ತಿನಲ್ಲಿಯೇ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸುವಲ್ಲಿ ಮುಂದಿದೆ. ನಮ್ಮ ಯುವಕರು ಅದೇ ಮಾರ್ಗದಲ್ಲಿ ನಡೆಯಬೇಕು ಎಂದರು.

ADVERTISEMENT

ಸಿಡಾಕ್‌ನ ಜಂಟಿ ನಿರ್ದೇಶಕ ಜಿ.ಯು.ಹುಡೇದ ಮಾತನಾಡಿ, 10 ದಿನಗಳ ಅವಧಿಯ ತರಬೇತಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳನ್ನು ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪ್ರಭುದೊರೆ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಕೌಶಲ ಮೈಗೂಡಿಸಿಕೊಳ್ಳುವಂತೆ ಮತ್ತು ಉದ್ಯಮ ಸ್ಥಾಪನೆಗೆ ಬೇಕಾಗುವ ಮಾಹಿತಿ ಅವಶ್ಯಕತೆ ಬಗ್ಗೆ ವಿವರಿಸಿದರು.

ಉದ್ಯಮ ಮಾಡಲು ಸರ್ಕಾರದ ವಿವಿಧ ಇಲಾಖೆಗಳ ಯೋಜನೆ ಬಗ್ಗೆ ಮಾಹಿತಿ ನೀಡಿ ಸ್ವಯಂ ಉದ್ಯಮಗಳ ಸ್ಥಾಪನೆಗೆ ಬೇಕಾದ ಕೌಶಲವನ್ನು ಬೆಳೆಸಿಕೊಳ್ಳಲು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕಿ ರೇಖಾ ಮ್ಯಾಗೇರಿ ಅವರು ಕೈಗಾರಿಕಾ ಕೇಂದ್ರದ ಯೋಜನೆಗಳ ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ ಅವರು ಉದ್ಯಮಕ್ಕೆ ಸಂಬಂಧಿಸಿದ ಬ್ಯಾಂಕಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.

ಸೈಯ್ಯದ್ ಆಷ್ಪಕ್ ಸ್ವಾಗತಿಸಿದರು. ಸಿಡಾಕ್ ತರಬೇತುದಾರ ಶಾಂತಯ್ಯ ಗುರುವಿನ್ ಪ್ರಾರ್ಥಿಸಿದರು. ಸಿಡಾಕ್ ತರಬೇತುದಾರ ಶ್ರೀಶೈಲ್ ಗುದಗೆ ನಿರೂಪಿದರು. ಸಮಾರಂಭದಲ್ಲಿ ಜಿಲ್ಲೆಯ ಭಾವಿ ಉದ್ಯಮಶೀಲರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.