ಯಾದಗಿರಿ: ಅದು ಹೆಸರಿಗೆ ಮಾತ್ರ ಜ್ಞಾನ ದೇಗುಲ. ಆದರೆ, ಅಲ್ಲಿನ ಪರಿಸ್ಥಿತಿಯೇ ಬೇರೆಯಿದೆ. ಕುಡಿದು ಎಸೆದ ಬಾಟಲಿ, ಮೂತ್ರ ವಿಸರ್ಜನೆ, ಸಿಗರೇಟ್ ಪಾಕೇಟ್, ಪಾನಮಸಾಲ ಚೀಟಿಗಳು ಎಲ್ಲೆಂದರಲ್ಲೆ ಕಾಣಸಿಗುತ್ತವೆ.
ಇದು ನಗರದ ವಾರ್ಡ್ ಸಂಖ್ಯೆ–2ರ ಹೆಂಡಗಾರ ಅಗಸಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.
ಈ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ 115 ವಿದ್ಯಾರ್ಥಿಗಳು ಓದುತ್ತಾರೆ. ಶಿಕ್ಷಕರಿಗೆ ಪ್ರತ್ಯೇಕ ಕೋಣೆ ಇಲ್ಲ. ತರಗತಿಯೇ ಸಭೆ ನಡೆಸುವ ಕೋಣೆಯಾಗಿದೆ. 6 ಮಂದಿ ಶಿಕ್ಷಕಿಯರು ಇದ್ದಾರೆ. ಆದರೆ, ಅವರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ಸೌಲಭ್ಯಗಳು ಇಲ್ಲ.
ಬೆಂಚು ಅಥವಾ ಕೂರಲು ಸರಿಯಾದ ಜಾಗ ಇಲ್ಲ. ಇದರಿಂದ ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಪೋಷಕರು ಶಾಲೆಯ ಅವ್ಯವಸ್ಥೆ ನೋಡಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿದ್ದಾರೆ.
ಶೌಚಾಲಯವಾಗಿ ಬಳಕೆ: ಹೊಸ ಕಟ್ಟಡವನ್ನು ಅಕ್ಕಪಕ್ಕದ ನಿವಾಸಿಗಳು ಶೌಚಾಲಯವಾಗಿ ಬಳಕೆ ಮಾಡುತ್ತಿದ್ದಾರೆ. ಶಾಲೆಯ ಮುಂಭಾಗದಲ್ಲಿಯೇ ಸಾರ್ವಜನಿಕ ಶೌಚಾಲಯವಿದ್ದು, ಶಾಲಾವಣರವೂ ಶೌಚಕ್ಕೆ ಬಳಕೆಯಾಗುತ್ತಿದೆ. ಮೂಗು ಮುಚ್ಚಿಕೊಂಡೆ ಶಾಲೆಗೆ ಒಳಗೆ ಪ್ರವೇಶಿಸಿದರೆ ಅಲ್ಲಿ ಶಾಲೆ ಎನ್ನುವ ಕಲ್ಪನೇ ಇಲ್ಲದಂತೆ ಹದಗೆಡಿಸಲಾಗಿದೆ.
ಕಟ್ಟಡಗಳ ಕೊರತೆ: ಸದ್ಯ ನಾಲ್ಕು ಕೋಣೆಗಳಿದ್ದು, ಅಲ್ಲಿಯೇ 7ನೇ ತರಗತಿ ವಿದ್ಯಾರ್ಥಿಗಳು ಪಾಠ ಆಲಿಸುತ್ತಾರೆ. ಹೆಚ್ಚುವರಿಯಾಗಿ ಶಾಲೆ ಹಿಂಭಾಗದಲ್ಲಿ ನಾಲ್ಕು ಕೋಣೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಇವು ಪಾಳು ಬಿದ್ದಿವೆ. ಬಾಗಿಲು, ಕಿಟಕಿಗಳನ್ನು ಮುರಿಯಲಾಗಿದ್ದು, ಬೆಂಚುಗಳನ್ನು ಹೊತ್ತಯ್ಯಲಾಗಿದೆ. ಶೌಚಾಲಯ ಬಾಗಿಲು ಮುರಿದಿದೆ. ಸ್ವಚ್ಛತೆ ಇಲ್ಲ.
ಸದ್ಯ ಇರುವ ಎಲ್ಲ ಕೊಠಡಿಗಳಲ್ಲಿ ಕಬ್ಬಿಣದ ಸಲಾಕೆಗಳು ಕಂಡುಬರುತ್ತಿವೆ. ಯಾವಗ ಕುಸಿದು ಬೀಳುತ್ತವೇ ಎಂಬ ಭೀತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರು ಇದ್ದಾರೆ.
ಬಯಲಿನಲ್ಲೇ ಅಡುಗೆ: ಶಾಲಾ ಆವರಣದಲ್ಲಿಯೇ ಅಡುಗೆ ತಯಾರಿಸಲಾಗುತ್ತಿದೆ. ಟಿನ್‌ಶೆಡ್‌ಗಳಿಂದ ನಿರ್ಮಿಸಿದ ಕೋಣೆ ಮಳೆ, ಗಾಳಿಗೆ ಕುಸಿದು ಬಿದ್ದಿದೆ. ಅಂದಿನಿಂದ ಹೊರಗಡೆಯೇ ಅಡುಗೆ ಮಾಡಲಾಗುತ್ತಿದೆ. ಗಾಳಿ ಮಳೆಯಲ್ಲಿಯೇ ಅಡುಗೆ ಮಾಡುವ ಸ್ಥಿತಿ ಏರ್ಪಟ್ಟಿದೆ. ಅಗಸಿಗೆ ಹೊಂದಿಕೊಂಡಂತೆ ಅಡುಗೆ ಪದಾರ್ಥಗಳನ್ನು ಜೋಡಿಸಿ ಇಡಲಾಗಿದೆ. ಅಲ್ಲದೇ ಪಾಠ ಮಾಡುವ ಕೋಣೆಯಲ್ಲಿಯೇ ಅಡುಗೆಗೆ ಬೇಕಾಗುವ ಸಮಾಗ್ರಿಗಳನ್ನು ಶೇಖರಣೆ ಮಾಡಿ ಇಡಲಾಗಿದೆ.
ಶಾಲೆಗೆ ದೂರದಿಂದ ಬಂದ ಮಕ್ಕಳು ಮಾತ್ರ ಮಧ್ಯಾಹ್ನದ ಬಿಸಿಯೂಟ ಶಾಲೆಯಲ್ಲಿಯೇ ಕುಳಿತು ಊಟ ಮಾಡುತ್ತಾರೆ. ಅಕ್ಕಪಕ್ಕದಲ್ಲಿ ಮನೆಗಳಿದ್ದ ವಿದ್ಯಾರ್ಥಿಗಳು ಊಟನೀಡಿಸಿಕೊಂಡು ಮನೆಗೆ ತೆರಳುತ್ತಾರೆ. ಕಾರಣ ಕೇಳಿದರೆ ಜಾಗ ಸಮಸ್ಯೆ ಇಂದ ಸ್ಥಳಾವಕಾಶದ ಕೊರತೆ ಇದೆ.
ಪುಸ್ತಕಗಳು ಮಾಯ: ಶಾಲೆಯ ಹೊಸ ಕಟ್ಟಡದಲ್ಲಿ ₹13 ಸಾವಿರ ವೆಚ್ಚ ಮಾಡಿ ಮುಖ್ಯ ಶಿಕ್ಷಕಿ ವಿವಿಧ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಆದರೆ, ರಜೆ ಮುಗಿಸಿಕೊಂಡು ಬಂದು ನೋಡಿದರೆ ಬಾಗಿಲು ಮುರಿದು ಪುಸ್ತಕಗಳನ್ನು ಅಕ್ಕಪಕ್ಕವರು ಖದ್ದುಕೊಂಡು ಹೋಗಿ ಗುಜರಿಗೆ ಪುಸ್ತಕಗಳನ್ನು ಹಾಕಿದ್ದರು ಎಂದು ಶಿಕ್ಷಕರು ದೂರು ನೀಡಿದರು.
‘ನಿವಾಸಿಗಳ ಸಹಕಾರ ಇಲ್ಲ’
ಯಾದಗಿರಿ: ‘ನಗರದ ಬಹುತೇಕ ಶಾಲೆಗಳ ಅಕ್ಕಪಕ್ಕದ ನಿವಾಸಿಗಳ ಸಹಕಾರ ಇಲ್ಲ. ಸಮುದಾಯದ ಶಾಲೆ ಎಂದು ಜನರು ಇನ್ನೂ ಒಪ್ಪಿಕೊಂಡಿಲ್ಲ. ಇದರಿಂದ ಶಾಲೆಯ ಸೌಲಭ್ಯಗಳನ್ನು ಜನತೆ ಹೊತ್ತುಕೊಂಡು ಹೋಗುತ್ತಿದ್ದಾರೆ’ ಎಂದು ಶಿಕ್ಷಕಿಯರು ದೂರಿದರು.
‘ರಜೆ ದಿನ ಅಥವಾ ಭಾನುವಾರದ ನಂತರ ಸೋಮವಾರ ಶಾಲಾವರಣದಲ್ಲಿ ಕುಡಿದು ಬಿಸಾಕಿದ ಬಾಟಲಿಗಳು ಬಿದ್ದಿರುತ್ತವೆ. ಅವುಗಳನ್ನು ತೆಗೆದು ಸ್ವಚ್ಛಗೊಳಿಸಬೇಕು. ರಜೆ ದಿನಗಳಲ್ಲಿ ಮಧ್ಯಾಹ್ನದ ವೇಳೆ ಹಲವರು ಇಲ್ಲಿಯೇ ಮಲಗಿರುತ್ತಾರೆ’ ಎಂದು ಅವರು ತಿಳಿಸಿದರು.
***
ಶಿಥಿಲಗೊಂಡಿರುವ ಶಾಲೆಯನ್ನು ನೆಲಸಮಗೊಳಿಸಿ ಮರು ನಿರ್ಮಿಸಲು ಕೋರಲಾಗಿದೆ. ಶಾಲೆ ಅಕ್ಕಪಕ್ಕದಲ್ಲಿರುವ ನಿವಾಸಿಗಳ ಸಹಕಾರ ನಮಗಿಲ್ಲ. ಎಲ್ಲವನ್ನು ಹಾಳು ಮಾಡುತ್ತಿದ್ದಾರೆ.
-ಶಾಂತಮ್ಮ, ಮುಖ್ಯಶಿಕ್ಷಕಿ
***
ನಮ್ಮ ಶಾಲೆಯನ್ನು ನಾವೇ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ನಾನೇ ಹಲವಾರು ಬಾರಿ ಅಕ್ಕಪಕ್ಕದ ನಿವಾಸಿಗಳಿಗೆ ಮನವಿ ಮಾಡಿದ್ದೇನೆ. ಆದರೂ ಅದೇ ಚಾಳಿ ಮುಂದುವರಿದೆ.
-ಸಾಬರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ
***
ಶಾಲೆಯನ್ನು ಸ್ಥಳೀಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಹೊಸದಾಗಿ ಶಾಲೆ ನಿರ್ಮಿಸಿಕೊಡಬೇಕು.
-ಹೆಸರು ಹೇಳಲಿಚ್ಛಿಸದ ವಿದ್ಯಾರ್ಥಿನಿ
***
ಶಾಲೆಗಳಲ್ಲಿ ಯಾವ ಕೊರತೆ ಇದೆ ಎನ್ನುವುದನ್ನು ಪರಿಶೀಲನೆ ಮಾಡಿ ಅಗತ್ಯಕ್ಕೆ ತಕ್ಕಂತೆ ಪೂರೈಸಲಾಗುತ್ತಿದೆ. ಶಾಲೆಗಳ ಜವಾಬ್ದಾರಿಯನ್ನು ಎಸಿಎಂಸಿಯವರಿಗೆ ನೀಡಲಾಗಿದೆ
-ಚಂದ್ರಕಾಂತರೆಡ್ಡಿ, ಯಾದಗಿರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.