
ಸುರಪುರ: ‘ರಾಜ್ಯದಲ್ಲಿಯೇ ಯಾದಗಿರಿ ಜಿಲ್ಲೆಯಲ್ಲಿ ಆನೆಕಾಲು ರೋಗದ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಆನೆಕಾಲು ರೋಗ ದೈಹಿಕ ಮತ್ತು ಮಾನಸಿಕ ಅಸ್ವಸ್ಥನನ್ನಾಗಿಸಿ ಖಿನ್ನತೆಗೆ ದೂಡುತ್ತದೆ. ರೋಗ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ ಹೇಳಿದರು.
ಪ್ರಭು ಕಾಲೇಜಿನ ಆವರಣದಲ್ಲಿ ಸೋಮವಾರ ಆನೆಕಾಲು ರೋಗ ನಿವಾರಣೆಗಾಗಿ ಮಾತ್ರೆ ನುಂಗಿಸುವ ಕಾರ್ಯಕ್ರಮದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜ.5 ರಿಂದ 17 ರವರೆಗೆ ಆನೆಕಾಲು ರೋಗ ನಿವಾರಣೆ ಮಾತ್ರೆಗಳಾದ ಐವರ್‍ಮೇಕ್ಟಿನ್ ಜೊತೆ ಡಿಇಸಿ ಮಾತ್ರೆಗಳನ್ನು ಆರೋಗ್ಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಮನೆ ಮನೆಗೆ ಹೋಗಿ ಅವರಿಗೆ ನುಂಗಿಸುತ್ತಾರೆ’ ಎಂದರು.
‘ಇದು 18ನೇ ಸುತ್ತಿನ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮ. ಶೇ 92 ಜನ ಈ ಮಾತ್ರೆಗಳನ್ನು ಸೇವಿಸುವುದು ಕಡ್ಡಾಯವಾಗಿದೆ. ತಾಲ್ಲೂಕಿನಲ್ಲ್ಲಿ 4.47 ಲಕ್ಷ ಜನರಿಗೆ ಮಾತ್ರೆ ನುಂಗಿಸುವ ಗುರಿ ಹೊಂದಲಾಗಿದೆ. ಗರ್ಭಿಣಿ ಮತ್ತು 2 ವರ್ಷದ ಮಕ್ಕಳಿಗೆ ಮಾತ್ರೆ ಕೊಡುವುದಿಲ್ಲ’ ಎಂದರು.
‘ಆನೆಕಾಲು ರೋಗ ನಿವಾರಣೆಗೆ ಈ ಮುಂಚೆ ಡಿಇಸಿ ಮಾತ್ರೆಗಳನ್ನು ಮಾತ್ರ ಕೊಡಲಾಗುತ್ತಿತ್ತು. ಕಳೆದ ಮೂರು ವರ್ಷಗಳಿಂದ ಪಾಂಡಿಚೇರಿಯ ಸಂಶೋಧನಾ ವಿಜ್ಞಾನಿಗಳು ಡಿಇಸಿ ಜತೆ ಐವರ್‍ಮೇಕ್ಟಿನ್ ಮಾತ್ರೆ ಕೊಡುವಂತೆ ತಿಳಿಸಿದ್ದು ಇದರಿಂದ ಮೈಕ್ರೋಫೈಲೇರಿಯಾ ಜಂತುಗಳು ಬೆಳವಣಿಗೆ ಕುಂದಿ ನಾಶವಾಗುತ್ತವೆ’ ಎಂದು ಮಾಹಿತಿ ನೀಡಿದರು.
‘4-ಐವರ್‍ಮೇಕ್ಟಿನ್, 3-ಡಿಇಸಿ ಮತ್ತು ಒಂದು ಅಲ್ಪೆಂಡಜೋಲ್ ಮಾತ್ರೆ ನುಂಗಿಸಲಾಗುತ್ತದೆ. 2 ರಿಂದ 5 ವರ್ಷ ಮತ್ತು 5 ವರ್ಷ ಮೇಲ್ಪಟ್ಟವರಿಗೆ ಡಿಇಸಿ, ಅಲ್ಪೆಂಡಜೋಲ್ ಮಾತ್ರೆಗಳನ್ನು ನುಂಗಿಸಲಾಗುತ್ತದೆ. ಜ್ವರ, ತಲೆನೋವು, ಮೈ-ಕೈ ನೋವು, ಮೈ ಉರಿತ, ಕೆರೆತ ಈ ಪ್ರತಿಕೂಲ ಪರಿಣಾಮಗಳು ತಾತ್ಕಾಲಿಕವಾಗಿದ್ದು ಅವು ಒಂದೇ ದಿನದಲ್ಲಿ ತಾನಾಗಿ ಉಪಶಮನವಾಗುತ್ತವೆ’ ಎಂದರು.
ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಚಾಲನೆ ನೀಡಿದರು. ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮೂಡಲಮನೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಪಾಂಶುಪಾಲ ಡಾ.ಎಸ್.ಎಚ್.ಹೊಸ್ಮನಿ, ಉಪ ಪ್ರಾಂಶುಪಾಲ ಪ್ರೊ.ವೇಣುಗೋಪಾಲನಾಯಕ ಜೇವರ್ಗಿ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಡಿ.ವಾರೀಸ್, ಆರೋಗ್ಯ ಸಹಾಯಕ ಸಂಗಪ್ಪ ಚೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.