ADVERTISEMENT

ಸೀತಾಫಲ ಕೃಷಿ: ಗಿಡಕ್ಕೆ 35 ಕೆ.ಜಿ ಇಳುವರಿ, ₹2 ಲಕ್ಷ ಲಾಭದ ನಿರೀಕ್ಷೆ

ಶಹಾಪುರ; ಕೃಷಿ ವಿದ್ಯಾಯಲದ ಮಾರ್ಗದರ್ಶನ, ಅನೇಕ ಕಡೆ ತರಬೇತಿ

ಟಿ.ನಾಗೇಂದ್ರ
Published 23 ಅಕ್ಟೋಬರ್ 2022, 4:31 IST
Last Updated 23 ಅಕ್ಟೋಬರ್ 2022, 4:31 IST
ಶಹಾಪುರ ತಾಲ್ಲೂಕಿನ ಸೈದಾಪೂರ ಗ್ರಾಮದ ಕೃಷಿಕ ಮಹಾಂತಯ್ಯ ಸ್ವಾಮಿ ಅವರು ಬೆಳೆದ ಸೀತಾಫಲ
ಶಹಾಪುರ ತಾಲ್ಲೂಕಿನ ಸೈದಾಪೂರ ಗ್ರಾಮದ ಕೃಷಿಕ ಮಹಾಂತಯ್ಯ ಸ್ವಾಮಿ ಅವರು ಬೆಳೆದ ಸೀತಾಫಲ   

ಶಹಾಪುರ: ತಾಲ್ಲೂಕಿನ ಸೈದಾಪೂರ ಗ್ರಾಮದ ರೈತ ಮಹಾಂತಯ್ಯ ಸ್ವಾಮಿ ಅವರು ಸೀತಾಫಲ ಕೃಷಿಅಳವಡಿಸಿಕೊಂಡಿದ್ದು ಹೊಸ ಭರವಸೆಯ ಬೆಳಕು ಮೂಡಿಸಿದ್ದಾರೆ. ಬೇರೆ ಬೇರೆ ಕಡೆ ತರಬೇತಿ ಪಡೆದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿನ ಮಾರ್ಗದರ್ಶನದಲ್ಲಿ ತಮ್ಮ 1.5 ಎಕರೆ ಜಮೀನಿನಲ್ಲಿ ಅರ್ಕಾ ಸಹನಾ ಸೀತಾಫಲ ತಳಿಯನ್ನು ಬೆಳೆದಿದ್ದಾರೆ.

ಸದ್ಯ ಸೀತಾಫಲ ಕಾಯಿ ಕೀಳುವ ಹಂತಕ್ಕೆ ಬಂದಿವೆ. ಗಿಡಕ್ಕೆ 35 ಕೆ.ಜಿ ಇಳುವರಿ ಬಂದಿವೆ. ಸುಮಾರು ಪ್ರಸಕ್ತ ವರ್ಷ ₹2ಲಕ್ಷ ಲಾಭ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ಅವರು.

ಮೂಲತಃ ನಾನು ಡಿಪ್ಲೋಮಾ ಸಿವಿಲ್ ಎಂಜಿನಿಯರ್ ಆಗಿರುವ ಮಾಹಾಂತಯ್ಯ ಕೃಷಿಯಲ್ಲಿ ಹೊಸತನವನ್ನು ಮಾಡುವ ಛಲದಿಂದ ಸೀತಾಫಲ ಕೃಷಿಗೆ ಮುಂದಾದರು. 2019ರಲ್ಲಿ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಹೆಸರಘಟ್ಟದಿಂದ ಒಂದು ಗಿಡಕ್ಕೆ ₹110 ಕೊಟ್ಟು ತಂದರು.

ADVERTISEMENT

‘ನನ್ನ ಜಮೀನಿನಲ್ಲಿ 300 ಗಿಡಗಳು ಇವೆ. ಸೀತಾಫಲ ಬೆಳೆಯನ್ನು ಯಾವುದೇ ಸಂದರ್ಭದಲ್ಲಿ ಬೆಳೆಯಲು ಸಾಧ್ಯವಿದೆ. ಸ್ಥಳೀಯ ಬೆಟ್ಟದಲ್ಲಿ ಸಿಗುವ ಸೀತಾಫಲದ ಗಿಡದ ಹೆಣ್ಣು ಹೂ ಹಾಗೂ ಗಂಡು ಹೂ ತೆಗೆದುಕೊಂಡು ಪರಾಗಸ್ಪರ್ಶ ಮಾಡಬೇಕು. ನಂತರ 4 ತಿಂಗಳ ನಂತರ ಫಸಲು ಬರುತ್ತದೆ. (ಜೂನ್‌ದಿಂದ ಸೆಪ್ಟಂಬರ್) ಕೇವಲ ನಾಲ್ಕು ತಿಂಗಳು ಮಾತ್ರ ನೀರು ಗಿಡಕ್ಕೆ ಹಾಯಿಸಬೇಕು. ಗಿಡದ ಹಣ್ಣು ಕೀಳಿದ ಬಳಿಕ ಗಿಡ ಒಣಗಲು ಬಿಡಬೇಕು. ನಮಗೆ ಯಾವಾಗ ಬೆಳೆ ಬೇಕು ಅನಿಸುತ್ತದೆ ಆಗ ನೀರು ಹಾಯಿಸಿದರೆ ಗಿಡ ಚಿಗುರೊಡೆಯುತ್ತದೆ’ ಎಂದು ಮಾಹಿತಿ ನೀಡಿದರು.

ಗಿಡ ಮುಂದಿನ ವರ್ಷ ನಾಲ್ಕು ವರ್ಷದ ಆಗುತ್ತವೆ. ಆಗ ಹೆಚ್ಚು ಇಳುವರಿ ಬರುವ ಆಶಾಭಾವನೆಯಿದೆ. ಸುಮಾರು ₹8ಲಕ್ಷ ಲಾಭ ಬರುವ ನಿರೀಕ್ಷೆ ಇದೆ. ಖರ್ಚು ಕಡಿಮೆ ಲಾಭ ಜಾಸ್ತಿ. ನಿರ್ವಹಣೆಯು ಕಡಿಮೆ ಇದೆ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಸ್ಥಳೀಯ ತಳಿಗಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿವೆ. ಪ್ರತಿ ಗಿಡಕ್ಕೆ 35 ಕೆ.ಜಿ ಹಣ್ಣುಗಳು ಬಿಡುತ್ತಿದ್ದು, ಪ್ರತಿ ಕಾಯಿಯು 500 ಗ್ರಾಂ ತೂಕವನ್ನು ಹೊಂದಿವೆ, ಮಾರುಕಟ್ಟೆಯಲ್ಲಿ 1 ಕೆ.ಜಿ ಗೆ ₹120 ರಿಂದ ₹150 ಧಾರಣಿ ಸಿಗುತ್ತಿದೆ ಎಂದು ಕೃಷಿ ವಿಸ್ತರಣಾ ಅಧಿಕಾರಿ ಡಾ.ಶಿವಾನಂದ ಹೊನ್ನಾಳಿ ಮಾಹಿತಿ ನೀಡಿದರು.

ಬೆಂಗಳೂರು ಮತ್ತು ಹೈದರಾಬಾದ್‌ ತಮ್ಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡಿದ್ದಾರೆ. ಇದರ ಜೊತೆಗೆ ಇವರು ಸಸಿಗಳನ್ನು ಸಹಿತ ಬೇರೆ ರೈತರಿಗೆ ಕೊಡುವ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿದ್ದಾರೆ. ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಮಹಾಂತಯ್ಯ ಸ್ವಾಮಿ 9900222987 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.