ADVERTISEMENT

ಹಿರಿಯ ನಾಗರಿಕರಿಗೆ ವರ್ಷಕ್ಕೆ 3 ಬಾರಿ ಆರೋಗ್ಯ ತಪಾಸಣೆ ಅಗತ್ಯ: ಶಾಸಕ ಮುದ್ನಾಳ್

ಹಿರಿಯ ನಾಗರಿಕರ ಮತ್ತು ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 3:34 IST
Last Updated 19 ಅಕ್ಟೋಬರ್ 2021, 3:34 IST
ಯಾದಗಿರಿಯಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು 22ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಯಾದಗಿರಿಯಲ್ಲಿ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು 22ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಯಾದಗಿರಿ: ‘60 ವಯೋಮಿತಿ ದಾಟಿದ ನಂತರ ವರ್ಷಕ್ಕೆ 3 ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಎದುರಾದರೇ ಆಯುಷ್ಮಾನ್ ಭಾರತ ಯೋಜನೆ ಅಡಿ ಬಿಪಿಎಲ್ ಕುಟುಂಬಕ್ಕೆ ₹5 ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತಿದೆ. ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ತಿಳಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಮತ್ತು 22ನೇ ವಿಶ್ವ ದೃಷ್ಟಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನರ ಆರೋಗ್ಯ ಮತ್ತು ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ADVERTISEMENT

ಕೋವಿಡ್‌ನಿಂದ ಇಡೀ ಜಗತ್ತು ತತ್ತರಿಸಿ ಹೋಗಿದ್ದು, ಈಗ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಲಸಿಕೆ ಪಡೆದು ಕೊರೊನಾ ತೊಲಗಿಸಲು ನೆರವಾಗಬೇಕು ಎಂದರು.

ಲಸಿಕೆಯಿಂದ ಅಡ್ಡ ಪರಿಣಾಮಗಳಿಲ್ಲ. ಇದನ್ನು ಹಾಕಿಸಿಕೊಂಡರೆ ಕೊರೊನಾ ಬಂದರೂ ಯಾವುದೇ ಗಂಭೀರ ಸ್ವರೂಪದ ಲಕ್ಷಣಗಳು ಉಲ್ಬಣಿಸುವುದಿಲ್ಲ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಇಂದುಮತಿ ಕಾಮಶೆಟ್ಟಿ ಮಾತನಾಡಿ,‘ಹಿರಿಯ ನಾಗರಿಕರನ್ನು ಗೌರವಿಸುವುದು ಬಹಳ ಮುಖ್ಯವಾಗಿದೆ. ಕಣ್ಣು ನಮ್ಮ ದೇಹದ ಅತಿಮುಖ್ಯ ಅಂಗವಾಗಿದೆ. ಇದರ ಕಾಳಜಿ ಅಗತ್ಯ’ ಎಂದರು.

ಅಂಧತ್ವ ನಿವಾರಣಾ ಅಧಿಕಾರಿ ಡಾ.ಭಗವಂತ ಅನವಾರ ಮಾತನಾಡಿದರು.

ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಯುಡಾ ಅಧ್ಯಕ್ಷ ಬಸವರಾಜ ಚಂಡರಕಿ, ಸರ್ವೇಕ್ಷಣ ಅಧಿಕಾರಿ ಡಾ.ಸಾಜೀದ್, ಡಾ. ನಾಗರಾಜ ಪಾಟೀಲ, ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಅಧಿಕಾರಿ ದೀಪಿಕಾ ಹಾಗೂ ವಿಶ್ವನಾಥರೆಡ್ಡಿ ಅಬ್ಬೆ ತುಮಕೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.