ADVERTISEMENT

ಪ್ರತಿ ಜಿಲ್ಲೆಯಲ್ಲಿ ಇಎಸ್‍ಐ ಆಸ್ಪತ್ರೆ ಸ್ಥಾಪಿಸಿ: ರಾಜಾ ವೆಂಕಟಪ್ಪನಾಯಕ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:09 IST
Last Updated 3 ಮೇ 2022, 5:09 IST
ಸುರಪುರದ ರಂಗಂಪೇಟೆಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿದರು. ಡಾ.ಸುರೇಶ್ ಸಜ್ಜನ್, ರಾಜಾ ಹನುಮಪ್ಪನಾಯಕ, ಶಂಕರನಾಯಕ, ಮಲ್ಲಿಕಾರ್ಜುನ ಕ್ರಾಂತಿ ಇದ್ದರು
ಸುರಪುರದ ರಂಗಂಪೇಟೆಯಲ್ಲಿ ನಡೆದ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಉದ್ಘಾಟಿಸಿದರು. ಡಾ.ಸುರೇಶ್ ಸಜ್ಜನ್, ರಾಜಾ ಹನುಮಪ್ಪನಾಯಕ, ಶಂಕರನಾಯಕ, ಮಲ್ಲಿಕಾರ್ಜುನ ಕ್ರಾಂತಿ ಇದ್ದರು   

ಸುರಪುರ: ‘ಇಎಸ್‍ಐ ಆಸ್ಪತ್ರೆ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡುತ್ತದೆ. ಇಂತಹ ಆಸ್ಪತ್ರೆಗಳು ಪ್ರತಿ ಜಿಲ್ಲೆಗಳಲ್ಲಿ ನಿರ್ಮಾಣ ಮಾಡುವ ಅವಶ್ಯಕತೆಯಿದೆ’ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.

ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 136ನೇ ವಿಶ್ವ ಕಾರ್ಮಿಕ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ನಮ್ಮ ಅಧಿಕಾರವಧಿಯಲ್ಲಿ ಜಾತ್ಯತೀತವಾಗಿ ಪ್ರತಿಯೊಂದು ಸಮಾಜಕ್ಕೂ ಭವನಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಕಾರ್ಮಿಕರ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ನಾನು ನಿಮ್ಮ ಹೋರಾಟದಲ್ಲಿ ಪಾಲ್ಗೊಳ್ಳುತ್ತೇನೆ’ ಎಂದರು.

ADVERTISEMENT

ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ. ಸುರೇಶ್ ಸಜ್ಜನ ಮಾತನಾಡಿ, ‘ನಮ್ಮ ವೀರಶೈವ ಕಲ್ಯಾಣ ಮಂಟಪದ ನಿರ್ಮಾಣಕ್ಕೆ ಕಟ್ಟಡ ಕಾರ್ಮಿಕರ ಶ್ರಮ, ಶಕ್ತಿಯಿದೆ. ಮಂದಿರ, ಮಸೀದಿ, ಗುರುದ್ವಾರ ನಿರ್ಮಿಸಿದವರು ಕಾರ್ಮಿಕರು. ಕಾರ್ಮಿಕರ ಶ್ರಮ ಶ್ಲಾಘನೀಯ’ ಎಂದರು.

ದಸಂಸ (ಕ್ರಾಂತಿಕಾರಿ) ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ‘ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡುವುದರ ಮೂಲಕ ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ. 8 ಗಂಟೆಯ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಲು ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ಕಾರ್ಮಿಕರು ಅವಕಾಶ ಕೊಡಬಾರದು’ ಎಂದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ದೇವೆಂದ್ರಪ್ಪ ಪತ್ತಾರ ಮಾತನಾಡಿ, ‘ಕಾರ್ಮಿಕ ಚಳವಳಿಯ ಸ್ಪೂರ್ತಿಯ ಸೆಲೆಯಾದ ಮೇ 1ರ ದಿನಾಚರಣೆ ಬಗ್ಗೆ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ ಜೀವನದ ಅಡಿಪಾಯವಾದ ದುಡಿಯುವ ಜನತೆ ಹೆಮ್ಮೆಯಿಂದ ಆಚರಿಸುವ ದಿನ ಇದು. ಇದು ಚರಿತ್ರಾರ್ಹ ಘಟನೆಗಳ ಮೈನವಿರೇಳಿಸುವ ಇತಿಹಾಸದ ಸ್ಮರಣೆ’ ಎಂದರು.

‘ದುಡಿಯುವ ಜನರ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಕಾರ್ಮಿಕ ವರ್ಗದ ಐಕ್ಯ ಚಳವಳಿ ಇಂದಿನ ಅವಶ್ಯಕತೆಯಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ಎಐಟಿಯುಸಿ ಖಂಡಿಸುತ್ತದೆ. ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ಮುಖಂಡರಾದ ನಿಂಗರಾಜ ಬಾಚಿಮಟ್ಟಿ, ಶಂಕರನಾಯಕ, ವೆಂಕೋಬ ದೊರೆ, ಅಹ್ಮದ್ ಪಠಾಣ, ಅಯ್ಯಣ್ಣ ಹಾಲಬಾವಿ, ಕಲ್ಪನಾ ಗುರುಸಣಗಿ, ಶ್ರೀದೇವಿ ಕೂಡ್ಲಿಗಿ, ಆನಂದ ಕಟ್ಟಿಮನಿ, ಪರಶುರಾಮ ಹುಲಕಲ್, ರಮೇಶ ದೊರೆ, ವೆಂಕಟೇಶ ಹೊಸ್ಮನಿ, ವೆಂಕಟೇಶ ಬೇಟೆಗಾರ, ರಂಗನಗೌಡ ಪಾಟೀಲ ದೇವಿಕೇರಿ, ನರಸಿಂಹಕಾಂತ ಪಂಚಮಗಿರಿ, ದೇವೆಂದ್ರಪ್ಪ ನಗರಗುಂಡ, ತಿಮ್ಮಯ್ಯ ತಳವಾರ, ಪ್ರಕಾಶ ಆಲಾಳ, ತಿಮ್ಮಯ್ಯ ದೊರೆ, ಹನುಮಂತಪ್ಪ ದೇವತ್ಕಲ್, ಶಿವಲಿಂಗ ಹಸಾನಾಪುರ, ರಾಹುಲ್ ಹುಲಿಮನಿ, ಬಸಮ್ಮ ತಡಿಬಿಡಿ, ಮಲ್ಲಯ್ಯ ವಗ್ಗಾ, ರಾಮು ನಗರಗುಂಡ ಇದ್ದರು.

ಸೀತಾರಾಮನಾಯಕ ನಿರೂಪಿಸಿದರು. ರಾಮಯ್ಯ ಬೋವಿ ಸ್ವಾಗತಿಸಿದರು. ಯಮುನಾ ಕಕ್ಕೇರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.