ADVERTISEMENT

ವಡಗೇರಾ: ರಸ್ತೆಗೆ ಬಾಗಿ ನಿಂತ ನೀಲಗಿರಿ ಗಿಡಗಳು

ಅಪಾಯ ಸಂಭವಿಸುವ ಮುನ್ನ ಗಿಡಗಳ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 5:35 IST
Last Updated 11 ಜೂನ್ 2025, 5:35 IST
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಪ್ರೌಢಶಾಲೆಯಿಂದ ಅನತಿ ದೂರದಲ್ಲಿ ನೀಲಗಿರಿ ಗಿಡವೊಂದು ರಸ್ತೆಗೆ ಬಾಗಿರುವುದು
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಪ್ರೌಢಶಾಲೆಯಿಂದ ಅನತಿ ದೂರದಲ್ಲಿ ನೀಲಗಿರಿ ಗಿಡವೊಂದು ರಸ್ತೆಗೆ ಬಾಗಿರುವುದು   

ವಡಗೇರಾ: ತಾಲ್ಲೂಕಿನ ಹಾಲಗೇರಾ ಗ್ರಾಮದ ಪ್ರೌಢಶಾಲೆಯಿಂದ ಅನತಿ ದೂರದಲ್ಲಿ ನೀಲಗಿರಿ ಗಿಡಗಳು ಬಾಗಿರುವುದರಿಂದ ವಾಹನ ಚಾಲಕರು, ಸಾರ್ವಜನಿಕರು ಜೀವ ಭಯದಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ.

ಜಿಲ್ಲಾ ಮುಖ್ಯ ರಸ್ತೆ(ಎಂಡಿಆರ್): ಈ ರಸ್ತೆಯು ಜಿಲ್ಲಾ ಮುಖ್ಯ ರಸ್ತೆಯಾಗಿರುವುದರಿಂದ ಪ್ರತಿದಿನ ನೂರಾರು ಖಾಸಗಿ ವಾಹನಗಳು, ಸಾರಿಗೆ ಬಸ್‌ಗಳು ಹಾಗೂ ಶಾಲಾ ವಾಹನಗಳು ಸಂಚರಿಸುತ್ತವೆ. ಹಾಗೆಯೇ ಈ ರಸ್ತೆಯು ಪಕ್ಕದ ಜಿಲ್ಲೆಯಾದ ರಾಯಚೂರು, ಶಹಾಪುರ ತಾಲ್ಲೂಕಿನ ಹತ್ತಿಗೂಡುರು ಹಾಗೂ ವಡಗೇರಾ ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಲಗೇರಾ ಗ್ರಾಮದ ಪ್ರೌಢ ಶಾಲೆಯನ್ನು ದಾಟಿ ಮುಂದೆ ಬಂದಾಗ ಜಿಲ್ಲಾ ಮುಖ್ಯ ರಸ್ತೆಯ ಬಲ ಬದಿಯಲ್ಲಿ (ವಡಗೇರಾದಿಂದ ಯಾದಗಿರಿಗೆ ಬರುವಾಗ) ಹೊಂದಿಕೊಂಡಂತೆ ಅನೇಕ ನೀಲಗಿರಿ ಗಿಡಗಳು ಇವೆ. ಅವುಗಳಲ್ಲಿ ಮೂರು ಗಿಡಗಳು ಸಂಪೂರ್ಣವಾಗಿ ಬಾಗಿದ್ದು, ಬೀಳುವ ಹಂತದಲ್ಲಿ ಇವೆ.

ಇದರಿಂದಾಗಿ ನಿತ್ಯ ರಸ್ತೆಯ ಮೇಲೆ ಸಂಚರಿಸುವ ವಾಹನ ಸವಾರರು ನೀಲಗಿರಿ ಗಿಡದ ಕಡೆ ಒಮ್ಮೆ ನೋಡಿ ವಾಹನ ಚಲಾಯಿಸುವುದು ಅನಿವಾರ್ಯವಾಗಿದೆ. ಜೋರಾಗಿ ಗಾಳಿ ಬೀಸಿದಾಗ ವಾಹನಗಳ ಮೇಲೆ ಬಿದ್ದು ಜೀವ ಹಾನಿಯಾಗುವ ಸಂಭವ ಇದೆ ಎಂದು ವಾಹನ ಸವಾರ ರಾಮಪ್ಪ ನಾಯ್ಕೋಡಿ ಹಾಲಗೇರಾ ಹೇಳುತ್ತಾರೆ.

ADVERTISEMENT

ನೀಲಗಿರಿಗೆ ತಾಯಿ ಬೇರಿಲ್ಲ: ಸಾಮಾನ್ಯವಾಗಿ ಗಿಡ– ಮರಗಳಿಗೆ ತಾಯಿ ಬೇರು ಹಾಗೂ ತಂತು ಬೇರುಗಳು ಇರುತ್ತವೆ. ತಾಯಿ ಬೇರು ಗಿಡದ ಭಾರವನ್ನು ಹೊರುವುದರ ಜತೆಗೆ ಗಿಡ ಬೆಳೆಯಲು ಬೇಕಾದ ನೀರನ್ನು ಕಾಂಡಗಳ ಮುಖಾಂತರ ಒದಗಿಸುತ್ತದೆ. ಅಷ್ಟೇ ಅಲ್ಲ ಜೋರಾಗಿ ಗಾಳಿ ಬೀಸಿದಾಗ ತಾಯಿ ಬೇರು ಆ ಗಿಡ ಬೀಳದಂತೆ ನೋಡಿಕೊಳ್ಳುತ್ತದೆ. ಆದರೆ ನೀಲಗಿರಿ ಗಿಡಕ್ಕೆ ತಾಯಿ ಬೇರೆ ಇರುವುದಿಲ್ಲ. ಆ ಗಿಡದ ಸಂಪೂರ್ಣ ಭಾರ ತಂತು ಬೇರುಗಳ ಮೇಲೆ ನಿಂತಿರುತ್ತದೆ. ಜೋರಾಗಿ ಗಾಳಿ ಬೀಸಿದಾಗ ಭೂಮಿಯ ಕೆಲವೇ ಅಡಿ ಒಳಗಡೆ ಇರುವ ತಂತು ಬೇರುಗಳು ಗಾಳಿಯ ಒತ್ತಡವನ್ನು ತಾಳದೇ ಗಿಡ ಬುಡ ಸಮೇತವಾಗಿ ಭೂಮಿಗೆ ಬೀಳಬಹುದು.

ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಮಳೆಯ ಜತೆ ಜೋರಾಗಿ ಗಾಳಿಯು ಬೀಸುತ್ತಿದೆ. ಜೀವ ಹಾನಿಯಾಗುವುದಕ್ಕಿಂತ ಮುಂಚೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು. ಜಿಲ್ಲಾ ಮುಖ್ಯ ರಸ್ತೆಯ ಮೇಲೆ ಬಾಗಿ ನಿಂತಿರುವ ನೀಲಗಿರಿ ಗಿಡಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕು ಎಂಬುದು ವಾಹನ ಸವಾರರ ಹಾಗೂ ಚಾಲಕರ ಒತ್ತಾಸೆಯಾಗಿದೆ.

ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ರಸ್ತೆಯಲ್ಲಿ ನೀಲಗಿರಿ ಗಿಡ ಬಾಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.