ಯರಗೋಳ: ಚಾಮನಹಳ್ಳಿಯಿಂದ ಓರುಂಚ ಗ್ರಾಮಕ್ಕೆ ತೆರಳುವ ಒಳರಸ್ತೆ ಕಳೆದ ಎರಡು ದಿನಗಳ ಹಿಂದೆ ರಾತ್ರಿ ಸುರಿದ ಮಳೆಗೆ ಕೊಚ್ಚಿ ಹೋದ ಕಾರಣ ದುರಸ್ತಿಗೆ ಆಗ್ರಹಿಸಿ ಹೋರಾಟಗಾರ ಉಮೇಶ ಮುದ್ನಾಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿ, ‘ಎರಡು ದಿನಗಳ ಹಿಂದೆ ಸುರಿದ ಮಳೆಯಿಂದ ಕೊಚ್ಚಿ ಹೋದ ರಸ್ತೆಯು ಅರ್ಧದಷ್ಟು ಮಾತ್ರ ಉಳಿದಿದ್ದು, ಇನ್ನೊಂದೆಡೆ ರಸ್ತೆ ಎಡ ಮತ್ತು ಬಲ ಭಾಗದಲ್ಲಿ ನಾಲೆ ಹೂಳು ತುಂಬಿದ್ದು ಜಾಲಿ ಕಂಟಿಗಳು ಇಕ್ಕೆಲಗಳಲ್ಲಿ ಬೆಳೆದಿವೆ. ಮಳೆಯಿಂದ ಕೊಚ್ಚಿ ಹೋದ ರಸ್ತೆ ಈಗಾಗಲೇ ಅರ್ಧದಷ್ಟು ಮಾತ್ರ ಉಳಿದಿದ್ದು, ಗುರುಮಿಠಕಲ್ ಮತಕ್ಷೇತ್ರದಲ್ಲಿ ಬರುವ ಚಾಮನಹಳ್ಳಿ ಓರುಂಚ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ತೆರಳುವ ಒಳರಸ್ತೆ ಸಂಪೂರ್ಣ ಹದಗೆಟ್ಟಿದೆ’ ಎಂದು ಪ್ರತಿಭಟನೆ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ನಿತ್ಯ ಟ್ರ್ಯಾಕ್ಟರ್, ಎತ್ತಿನಬಂಡಿ, ಟಂಟಂ ಮತ್ತು ಜಾನುವಾರುಗಳು ಸಂಚರಿಸುತ್ತವೆ. ಒಂದು ವೇಳೆ ರಾತ್ರಿ ಹೊಸಬರು ಈ ರಸ್ತೆಗೆ ಬಂದರೆ ಭೀಕರ ಅಪಘಾತವಾಗುವ ಸಂಭವವಿದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಈ ರಸ್ತೆ ದುಸ್ತಿತಿ ತಲುಪಿದೆ. ಕೂಡಲೇ ಅತಿ ಶೀಘ್ರದಲ್ಲೇ ರಸ್ತೆ ಸರಿಪಡಿಸದಿದ್ದರೆ ಯಾದಗಿರಿ ಮತ್ತು ಸೇಡಂ ರಸ್ತೆ ತಡೆಹಿಡಿದು ಕೈಯಲ್ಲಿ ಬೆತ್ತ ಹಿಡಿದು ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.