ವಡಗೇರಾ: ವಡಗೇರಾ ಗ್ರಾಮದ ಸರ್ವೆ ನಂ.287ರ ರೈತ ನಿಂಗಣ್ಣ ಭೀಮರಾಯ ಹಾಗೂ ಲಕ್ಷ್ಮಿನಾಗರಾಜ್ ಅವರಿಗೆ ಸೇರಿದ ಹೊಲದ ಬದುವಿನ ಪಕ್ಕದಲ್ಲಿ ನಿರ್ಮಿಸಿರುವ ದೊಡ್ಡ ಒಡ್ಡನ್ನು ತೆರವುಗೊಳಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವಿದ್ಯಾಧರ ಜಾಕಾ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಡಗೇರಾ ಗ್ರಾಮದ ಸರ್ವೆ ನಂ.287ರ ಜಮೀನಿನ ಬದುವಿನ ಪಕ್ಕದಲ್ಲಿ ರೈತರಾದ ಮಾಂತಗೌಡ ಹಾಗೂ ವೀರೇಶ್ ಗೌಡ ಎಂಬುವವರು ದೊಡ್ಡದಾದ ಒಡ್ಡು ನಿರ್ಮಿಸಿರುವುದರಿಂದ ಅಕ್ಕ ಪಕ್ಕದ ಜಮೀನಿನ ರೈತರ ಹೊಲದಲ್ಲಿ ಮಳೆಯ ನೀರು ನಿಲ್ಲುತ್ತಿದ್ದು ಇದರಿಂದ ರೈತರ ಬೆಳೆಗಳು ಹಾಳಾಗುತ್ತಿವೆ. ಅನಾದಿ ಕಾಲದಿಂದಲೂ ಮಳೆಯ ನೀರು ಇದೇ ಮಾರ್ಗವಾಗಿ ಹರಿದು ಹೋಗುತ್ತಿದ್ದು ಒಡ್ಡು ನಿರ್ಮಿಸಿರುವುದರಿಂದ ಅಕ್ಕ ಪಕ್ಕದ ರೈತರು ತಮ್ಮ ಜಮೀನುಗಳಿಗೆ ಹೋಗಲು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕೇಳಲು ಹೋದರೆ ರೈತರಿಗೆ ವಿನಾಕಾರಣ ಕಿರುಕುಳ, ದಬ್ಬಾಳಿಕೆ ಮಾಡುತ್ತಿದ್ದಾರೆ. ಕೂಡಲೇ ಪರಿಶೀಲನೆ ನಡೆಸಿ ಒಡ್ಡು ತೆರವಿಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ತೋರಿದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಶರಣು ಜಡಿ, ಮರಲಿಂಗ ಗೋನಾಲ, ಅಶೋಕ್ ಚಿನ್ನಿ, ವೆಂಕಟೇಶ ಇಟಗಿ, ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.