ADVERTISEMENT

ಸುರಪುರ: ಕಳಪೆ ಬೀಜ ಮಾರಾಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:07 IST
Last Updated 16 ಜೂನ್ 2025, 14:07 IST
ಸುರಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು
ಸುರಪುರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು   

ಸುರಪುರ: ಕಳಪೆ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟಗಾರರ ವಿರುದ್ಧ ಕಠಿಣ ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಸೋಮವಾರ ತಹಶೀಲ್ದಾರ್ ಎಚ್.ಎ.ಸರಕಾವಸ ಮತ್ತು ಸಹಾಯಕ ಕೃಷಿ ನಿರ್ದೇಶಕ ರಾಮನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಚನ್ನಪ್ಪ ಆನೆಗುಂದಿ ಮಾತನಾಡಿ, ‘ಕಳಪೆ ರಸಗೊಬ್ಬರ, ಬಿತ್ತನೆ ಬೀಜ, ಕ್ರಿಮಿನಾಶಕ ಮಾರಾಟ ನಡೆದೆ ಇದೆ. ಇವುಗಳನ್ನು ಖರೀದಿಸಿ ಉಳುಮೆ ಮಾಡುವ ರೈತ ನಷ್ಟ ಹೊಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ತಮ್ಮ ಲಾಭದ ದೃಷ್ಟಿಕೋನವನ್ನಷ್ಟೇ ಹೊಂದಿರುವ ವರ್ತಕರು, ರೈತರನ್ನು ಸಾಲದ ಕೂಪಕ್ಕೆ ದೂಡುತ್ತಿದ್ದಾರೆ. ಅಧಿಕಾರಿಗಳು ಕ್ರಮ ಜರುಗಿಸುತ್ತಿಲ್ಲ. ರೈತ ಸಂಘಗಳು ಹೋರಾಟ ಮಾಡಿದ ನಂತರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕೈತೊಳೆದುಕೊಳ್ಳುತ್ತಾರೆ. ಇದರಿಂದ ರೈತನಿಗೆ ಪ್ರಯೋಜನವಿಲ್ಲ. ರೈತನಿಗೆ ಪರಿಹಾರ ದೊರಕುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಸಮಿತಿ ಅಧ್ಯಕ್ಷ ಧರ್ಮಣ್ಣ ದೊರೆ ಮಾತನಾಡಿ, ‘ನಕಲಿ ಬೀಜ ಇತರ ಸಾಮಗ್ರಿ ಮಾರಾಟ ಮಾಡಲು ವರ್ತಕರು ಹೆದರುವಂತಾಗಬೇಕು. ರೈತರು ಕೇಳಿದರೆ ಅಸಲಿ ಬಿಲ್ ಕೊಡುವುದಿಲ್ಲ. ಜಿಎಸ್‌ಟಿ ಬಿಲ್ ನೀಡುವಂತೆ ತಾಕೀತು ಮಾಡಬೇಕು’ ಎಂದು ಒತ್ತಾಯಿಸಿದರು.

‘ವರ್ತಕರು ದರಪಟ್ಟಿ ಪ್ರದರ್ಶಿಸುವಂತೆ ಸೂಚಿಸಬೇಕು. ಸಾಕಷ್ಟು ಗೊಬ್ಬರ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆ ಎಲ್ಲ ಯೋಜನೆಗಳು ಸಮರ್ಪಕವಾಗಿ ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಲ್ಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಯ್ಯ ಆಲ್ಹಾಳ, ಸಿದ್ದು ನಾಯ್ಕೋಡಿ, ಅಂಬ್ರಪ್ಪಗೌಡ ರುಕ್ಮಾಪುರ, ಸುಗ್ರೀವ ಬಾದ್ಯಾಪುರ, ರಫೀಕ್ ಸುರಪುರ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.