ADVERTISEMENT

ಯಾದಗಿರಿ: ನೀಗದ ಕಳಪೆ ರಸಗೊಬ್ಬರ, ಬೀಜದ ಸಮಸ್ಯೆ

ಪ್ರತಿವರ್ಷವೂ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ‘ನಕಲಿ’ ಹಾವಳಿ, ಕಡಿವಾಣವೇ ಇಲ್ಲವೇ?

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 4:14 IST
Last Updated 27 ಜುಲೈ 2022, 4:14 IST
ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಅಕ್ರಮ ರಸಗೊಬ್ಬರ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು
ಶಹಾಪುರ ತಾಲ್ಲೂಕಿನ ಹೊಸಕೇರಾ ಗ್ರಾಮದಲ್ಲಿ ಅಕ್ರಮ ರಸಗೊಬ್ಬರ ಚೀಲಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು   

ಯಾದಗಿರಿ: ಜಿಲ್ಲೆಯಲ್ಲಿ ಪ್ರತಿವರ್ಷವೂ ಮುಂಗಾರು, ಹಿಂಗಾರು ಹಂಗಾಮಿನಲ್ಲಿ ನಕಲಿ ರಸಗೊಬ್ಬರ, ನಕಲಿ ಬಿತ್ತನೆ ಬೀಜ ಪೆಡಂಭೂತ ಕಾಡುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲವೇ ಎನ್ನುವಂತೆ ಆಗಿದೆ.

ಕಳಪೆ ರಸಗೊಬ್ಬರ, ಬೀಜದ ಸಮಸ್ಯೆಯಿಂದ ಅಮಾಯಕ ರೈತರು ತೊಂದರೆ ಪಡುತ್ತಿದ್ದಾರೆ. ಜೊತೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿ ಹೋಗುತ್ತಿದ್ದಾರೆ.

ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿದ್ದು, ಬಿತ್ತನೆ ಮಾಡಿದ ಬಮೀನುಗಳಲ್ಲಿ ಫಸಲುಚೆನ್ನಾಗಿ ಬರುತ್ತಿದೆ. ಆದರೆ, ಅವರಿಗೆ ಸಮರ್ಪಕ ರಸಗೊಬ್ಬರ ಸಿಗದಿರುವ ಕಾರಣ ಇದನ್ನೇ ದುರುಪಯೋಗ ಮಾಡಿಕೊಂಡಿರುವ ನಕಲಿ ರಸಗೊಬ್ಬರ ‍ಪೂರಕೈದಾರರು ರೈತರಿಗೆ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಕಳಪೆ ಬೀಜ ಮತ್ತು ಗೊಬ್ಬರದ ಬಗ್ಗೆ ರೈತರು ಎಚ್ಚರ ವಹಿಸಬೇಕು. ಈ ಕುರಿತು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಹಶೀಲ್ದಾರ್‌ಗಳ ತಂಡ ರಚಿಸಿ ಕಳಪೆ ಬೀಜ ಮತ್ತು ಗೊಬ್ಬರ ಮಾರಾಟ ತಡೆಯಬೇಕು ಎನ್ನುವುದು ರೈತರ ಆಗ್ರಹವಾಗಿದೆ.

ಶಹಾಪುರ ತಾಲ್ಲೂಕಿನಲ್ಲಿ ಹೆಚ್ಚು:

ರಾಜ್ಯದ ವಿವಿಧ ತಳಿಯ ಹತ್ತಿ ಬೀಜ ತಯಾರಿಕಾ ಕಂಪನಿ ಬೀಜಗಳುಶಹಾಪುರದಲ್ಲಿ ಸಿಗುತ್ತವೆ. ವಿಜಯಪುರ ಜಿಲ್ಲೆಯ ಸಿಂದಗಿ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ, ರಾಯಚೂರು ಜಿಲ್ಲೆಯ ದೇವದುರ್ಗ, ಯಾದಗಿರಿ ಜಿಲ್ಲೆಯ ಸುರಪುರ ಸೇರಿದಂತೆ ಹಲವು ಕಡೆಯಿಂದ ರೈತರು ಬಂದು ಬೀಜ ಖರೀದಿಸುತ್ತಾರೆ. ಇದರಿಂದ ಕಳಪೆ ಬೀಜ ಮಾರಾಟಕ್ಕೆ ದಾರಿ ಮಾಡಿಕೊಟ್ಟಿದೆ.

‘ಕಳಪೆ ರಸಗೊಬ್ಬರ ಸಂಬಂಧ ವಡಗೇರಾದಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. 200 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಶಹಾಪುರ ತಾಲ್ಲೂಕಿನ ಗೋಗಿಯಲ್ಲಿಕಳಪೆ 150 ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ. ಭೀಮರಾಯನಗುಡಿಯಲ್ಲಿ ಕಳಪೆ ದರ್ಜೆ ಹತ್ತಿ ಬೀಜ ಮಾರಾಟ ಸಂಬಂಧ ಒಬ್ನನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

‘2022–23ನೇ ಸಾಲಿನ ಏಪ್ರಿಲ್ ತಿಂಗಳಿಂದ ಜುಲೈ 21ರ ವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಬೀಜ ರಸಗೊಬ್ಬರ, ಕೀಟನಾಶಕ ಮಾರಾಟ ಮಳಿಗೆಗಳಿಗೆ ಸಂಬಂಧಿಸಿದಂತೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ತಂಡ ರಚಿಸಲಾಗಿದೆ. ಕೃಷಿ ಅಧಿಕಾರಿಗಳು ಆಗಿಂದ್ದಾಗೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಂಡು ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

‘ಜಿಲ್ಲೆಯಲ್ಲಿ ಶಹಾಪುರ 9, ಸುರಪುರ 6, ಯಾದಗಿರಿ 8 ಸೇರಿ 28 ವಿವಿಧ ಮಾರಾಟ ಮಳಿಗೆಗಳಿಗೆ ಮಾರಾಟ ತಡೆ ಆದೇಶ ನೀಡಲಾಗಿದೆ. ಜಿಲ್ಲೆಯಲ್ಲಿ 50 ಬೀಜ, ರಸಗೊಬ್ಬರ, ಕೀಟನಾಶಕ ಮಾರಾಟಗಾರರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಶಹಾಪುರ 22, ಸುರಪುರ 10, ಯಾದಗಿರಿ 18 ನೋಟಿಸ್‌ ನೀಡಲಾಗಿದೆ. ಜಿಲ್ಲೆಯಲ್ಲಿ 5 ರಸಗೊಬ್ಬರ ಪರವಾನಗಿ ಅಮಾನತು ಮಾಡಲಾಗಿದೆ. ಶಹಾಪುರ 2, ಸುರಪುರ 1, ಯಾದಗಿರಿಯಲ್ಲಿ 2 ರಸಗೊಬ್ಬರ ಅಂಗಡಿ ಮಾಡಲಾಗಿದೆ. ಜಿಲ್ಲೆಯಲ್ಲಿ ಕಳಪೆ ಬೀಜ ರಸಗೊಬ್ಬರ ಕೀಟನಾಶಕ ಮಾರಾಟ ಮಾಡದಂತೆ ಹಾಗೂ ಗರಿಷ್ಠ ಮಾರಾಟ ದೊರಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ’ಎಂದು ಮೂಲಗಳು ತಿಳಿಸಿವೆ.

****

‘ಜಿಲ್ಲಾಧಿಕಾರಿ ಸಭೆ ಕರೆಯಲಿ’

ಜಿಲ್ಲೆಯಲ್ಲಿ ರಸಗೊಬ್ಬರ ಅಭಾವ ಸೃಷ್ಟಿಮಾಡುತ್ತಿದ್ದು, ರಸಗೊಬ್ಬರ ವ್ಯಾಪಾರಿಗಳ ಹಾಗೂ ರೈತರ ತುರ್ತಾಗಿ ಸಭೆ ಕರೆಯಬೇಕು ಎಂದು ಕಾಂಗ್ರೆಸ್‌ ಕಿಸಾನ್‌ ಮೋರ್ಚಾ ಉಪಾಧ್ಯಕ್ಷ ಅಶೋಕ ಮಲ್ಲಾಬಾದಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

‘ರಸಗೊಬ್ಬರ ತಾಲ್ಲೂಕುವಾರು ಹಂಚಿಕೆಯಾದ ಬಗ್ಗೆ ಯಾವ ರಸಗೊಬ್ಬರ ಅಂಗಡಿಯವರು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸಮಗ್ರ ಮಾಹಿತಿಯನ್ನು ಸಭೆಗೆ ತರುವಂತೆ ತಾಕೀತು ಮಾಡಬೇಕು. ಸಭೆಗೆ ರೈತ ಸಂಘ, ಪ್ರಗತಿಪರ ರೈತರ ಸಭೆ ಕರೆದು ಜಿಲ್ಲೆಯ ರಸಗೊಬ್ಬರ ಹಾವಳಿಯ ಸ್ವಷ್ಟ ಚಿತ್ರಣ ರೈತರ ಮುಂದೆ ಸಭೆಯಲ್ಲಿ ಮಂಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು‘ ಎಂದು ಆಗ್ರಹಿಸಿದ್ದಾರೆ.


‘ರಸಗೊಬ್ಬರ ಯೂರಿಯ ಜೊತೆ ಬೇರೆ ಯಾವುದನ್ನು ಸೇರಿಸಿ ಕೊಡಬಾರದು ಎಂದು ಎಚ್ಚರ ಕೊಡಬೇಕು. ಬೇರೆ ಜಿಲ್ಲೆಗಳಿಂದ ₹1,500, ₹1,600 ಕೊಟ್ಟ ಡಿಎಪಿ 50ಕೆಜಿ ಬ್ಯಾಗ್ ತರುವ ರೈತಾಪಿ ವರ್ಗಕ್ಕೆ ಜಿಲ್ಲೆಯಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕೆ ಸಿಗುವಂತಾಗಬೇಕು‘ ಎಂದು ಒತ್ತಾಯಿಸಿದ್ದಾರೆ.

****

ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ರಾಯಚೂರು, ಕಲಬುರಗಿಯಿಂದಲೂ ಆಮದು ಮಾಡಿಕೊಳ್ಳಲಾಗಿದೆ. ಕಳ‍ಪೆ ರಸಗೊಬ್ಬರ, ಕಳಪೆ ಬೀಜದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ

ಅಬಿದ್‌ ಎಸ್‌ಎಸ್‌, ಜಂಟಿ ಕೃಷಿ ನಿರ್ದೇಶಕ

****

ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಎರಡು ರಸಾಯನಿಕ ಕಳ‍ಪೆ ಗೊಬ್ಬರ ಬಗ್ಗೆ ಪ್ರಕರಣ ದಾಖಲಾಗಿದೆ. ಒಂದು ಕಳಪೆ ದರ್ಜೆಯ ಹತ್ತಿ ಬೀಜ ಬಗ್ಗೆ ಕೇಸ್‌ ದಾಖಲಾಗಿದೆ

ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

****

ಜಿಲ್ಲೆಯಲ್ಲಿ ಡಿಎಪಿ, ಯೂರಿಯಾ ರ‌ಸಗೊಬ್ಬರ ಕೊರತೆಯಿಂದ ನೆರೆ ಜಿಲ್ಲೆಗಳಿಗೆ ರೈತರು ತೆರಳಿ ತರುವ ಪರಿಸ್ಥಿತಿ ಇದೆ. ಕೂಡಲೇ ಅಗತ್ಯವಾದ ರಸಗೊಬ್ಬರ ಪೂರಕೈ ಮಾಡಬೇಕು

ಅಶೋಕ ಮಲ್ಲಾಬಾದಿ, ಉಪಾಧ್ಯಕ್ಷ, ಕಾಂಗ್ರೆಸ್‌ ಕಿಸಾನ್‌ ಮೋರ್ಚಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.