ADVERTISEMENT

ಭ್ರೂಣಲಿಂಗ ಪತ್ತೆಗೆ ಅವಕಾಶವಿಲ್ಲ: ಹರ್ಷಲ್ ಭೋಯರ್

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 7:42 IST
Last Updated 15 ಅಕ್ಟೋಬರ್ 2025, 7:42 IST
ಯಾದಗಿರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು
ಯಾದಗಿರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು   

ಯಾದಗಿರಿ: ‘ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ (ಪಿಸಿ ಮತ್ತು ಪಿಎನ್‌ಡಿಟಿ) ಅನ್ವಯ ಭ್ರೂಣಲಿಂಗ ಪತ್ತೆ ಮತ್ತು ಭ್ರೂಣಲಿಂಗ ಆಯ್ಕೆಗೆ ಅವಕಾಶವಿಲ್ಲ. ಯಾರಾದರೂ ಕಾನೂನು ಬಾಹಿರವಾಗಿ ನಡೆದುಕೊಂಡಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ರಾಷ್ಟ್ರೀಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂತಾನೋತ್ಪತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಆಡಳಿತ ವೈದ್ಯಾಧಿಕಾರಿಗಳು ಗಂಭೀರ ಸಮಸ್ಯೆ ಇರುವ ಗರ್ಭಿಣಿಯರನ್ನು ಗುರುತಿಸಬೇಕು. ನಿರಂತರವಾಗಿ ಅವರ ಆರೋಗ್ಯ ತಪಾಸಣೆ ಕೈಗೊಂಡು, ತಜ್ಞ ವೈದ್ಯರು ಸಮ್ಮುಖದಲ್ಲಿ ಹೆರಿಗೆ ಜರುಗಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಪ್ರಸವ ನಂತರ ಸಂಬಂದಪಟ್ಟ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜಂಟಿಯಾಗಿ ಮನೆಗೆ ಭೇಟಿ ಕೊಡಬೇಕು. ಬಾಣಂತಿಯರ ಆರೋಗ್ಯ ತಪಾಸಣೆಯನ್ನು ಪರಿಶೀಲಿಸಿ, ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಕೂಡಲೇ ವೈದ್ಯಾಧಿಕಾರಿಗಳ ಗಮನಕ್ಕೆ ತರಬೇಕು.  ಹೆಚ್ಚಿನ ರೀತಿಯಲ್ಲಿ ಆರೋಗ್ಯ ತಪಾಸಣೆ ನೀಡಿ ತಾಯಿ ಮರಣವನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಬೇಕು’ ಎಂದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಅಪಾಯಕಾರಿ ಹೆರಿಗೆಗಳ ಕುರಿತು ಸಮಗ್ರ ಮಾಹಿತಿಯನ್ನು ಪೋಷಕರಿಗೆ ಕಡ್ಡಾಯವಾಗಿ ತಿಳಿಸಬೇಕು. ಪ್ರಾಥಮಿಕ ಸುರಕ್ಷ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಆರೋಗ್ಯದ ಕುರಿತು ಖಾಸಗಿ ಆಸ್ಪತ್ರೆಯಲ್ಲಿ ನೀಡಿರುವ ದಾಖಲಾತಿಗಳನ್ನು ಪರಿಶೀಲಿಸಬೇಕು’ ಎಂದು ಹೇಳಿದರು.

‘ಸರ್ಕಾರಿ ವೈದ್ಯರ ಕರ್ತವ್ಯದ ಬಯೊಮೆಟ್ರಿಕ್‌ ಹಾಜರಾತಿ ವರದಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಪ್ರತಿ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯವರು ಬಾಲಿಕ ಸಾಫ್ಟ್‌ವೇರ್‌ನಲ್ಲಿ ಕಡ್ಡಾಯವಾಗಿ ಫಲಾನುಭವಿಯ ಮಾಹಿತಿ ನಮೂದಿಸಬೇಕು’ ಎಂದರು.

‘ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯಲ್ಲಿ 1,286 ಸಂಶಾಯಾಸ್ಪದ ಜ್ವರ ಹಾಗೂ ದದ್ದು ಪ್ರಕರಣಗಳು ವರಿಯಾಗಿವೆ. ರಾಜ್ಯದಲ್ಲಿ ಜಿಲ್ಲೆ 2ನೇ ಸ್ಥಾನದಲ್ಲಿದೆ. 23 ದಡಾರ, 27 ರುಬೆಲ್ಲಾ ಪ್ರಕರಣಗಳು ವರದಿಯಾಗಿವೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ‌ನೀಡಿದರು.

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಸಾಜಿದ್ ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶೇ105.7ರಷ್ಟು ಪ್ರಗತಿ

‘ಜಿಲ್ಲೆಯಲ್ಲಿ ಎನ್‌ಎಂಎನ್‌ಆರ್ ದರವು ಶೇ 105.7ರಷ್ಟು ಪ್ರಗತಿ ಸಾಧಿಸಿದೆ. ಎಲ್ಲಾ ಆರೋಗ್ಯ ಸಂಸ್ಥೆಗಳಿಂದ ಪ್ರತಿ ತಿಂಗಳು ಸಂಶಯಾಸ್ಪದ ಜ್ವರ ಮತ್ತು ದದ್ದು (ಗುಳ್ಳೆ) ಪ್ರಕರಣಗಳು ವರದಿಯಾಗುತ್ತಿವೆ. ಯಾವುದೇ ಆರೋಗ್ಯ ಸಂಸ್ಥೆಗಳು ಶೂನ್ಯ ಹೊಂದಿಲ್ಲ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿಯನ್ನು ಅಳವಡಿಸಿ ದರಪಟ್ಟಿ ಅನ್ವಯ ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕವನ್ನು ಸ್ವಿಕರಿಸಿದರೆ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.