ADVERTISEMENT

ಪ್ರವಾಹ: ಜಮೀನುಗಳಿಗೆ ನುಗ್ಗಿದ ನೀರು

ಬೆಳೆ ಹಾನಿ ಮಾಹಿತಿ ನೀಡಲು ರೈತರಿಗೆ ಸೂಚನೆ; ನದಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:31 IST
Last Updated 26 ಜುಲೈ 2021, 3:31 IST
ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದ ಬಳಿ ಕೃಷ್ಣಾ ನದಿ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿರುವುದು
ಶಹಾಪುರ ತಾಲ್ಲೂಕಿನ ಗೌಡೂರ ಗ್ರಾಮದ ಬಳಿ ಕೃಷ್ಣಾ ನದಿ ಪ್ರವಾಹದಿಂದ ಜಮೀನುಗಳಿಗೆ ನೀರು ನುಗ್ಗಿರುವುದು   

ಶಹಾಪುರ/ವಡಗೇರಾ: ಶಹಾಪುರ ಹಾಗೂ ವಡಗೇರಾ ತಾಲ್ಲೂಕಿನಲ್ಲಿ ಮೂರು ದಿನದಿಂದ ಕೃಷ್ಣಾ ನದಿ ಪ್ರವಾಹದಿಂದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಸಂಭವವಿದೆ.

2020-21ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಭಿಮಾ ಫಸಲು ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿನ ಬೆಳೆಗಳ ನೋಂದಾಯಿತ ರೈತರು ನಿರ್ದಿಷ್ಟ ಪ್ರಕೃತಿ ವಿಕೋಪದಡಿ ಬೆಳೆ ಮುಳುಗಡೆ, ಬೆಳೆ ಹಾನಿ ಕುರಿತುವಿಮೆ ಸಂಸ್ಥೆಗೆ72 ಗಂಟೆಯೊಳಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ರೈತರ ಹೆಸರು, ಗ್ರಾಮ, ಸರ್ವೆ ನಂಬರ,ಬೆಳೆಹಾನಿ ಕ್ಷೇತ್ರ, ಬೆಳೆಯ ಹೆಸರು, ಆಧಾರ ಸಂಖ್ಯೆ, ಬೆಳೆ ವಿಮೆ ತುಂಬಿದ ಕಂತಿನ ಸ್ವೀಕೃತಿ ಸಂಖ್ಯೆ ವಿವರಗೊಳೊಂದಿಗೆ ದೂರವಾಣಿ ಸಂಖ್ಯೆ 1800-200-5142 ಕರೆ ಮಾಡಿ ಮಾಹಿತಿ ದಾಖಲಿಸಬಹುದಾಗಿದೆ. ಅಲ್ಲದೆ ವಿಮಾ ಕಂಪನಿಯ ಪ್ರತಿನಿಧಿಗಳಾದ ಮೌನೇಶ ಪಾಟೀಲ (ಶಹಾಪುರ), 8867263747 ಹಾಗೂ ಕಾಸೀಂ ಪಟೇಲ್ (ವಡಗೇರಾ) 9945569003 ಸಂಪರ್ಕಿಸಲು ಕೋರಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ತಿಳಿಸಿದ್ದಾರೆ.

ADVERTISEMENT

ಕೃಷ್ಣಾ ನದಿಯ ಪ್ರವಾಹ 2 ದಿನದಿಂದ ಯಥಾ ಸ್ಥಿತಿ ಮುಂದುವರೆದಿದೆ. ನದಿಯ ದಂಡೆಯ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿವೆ. ಈಗಾಗಲೇ ಬಿತ್ತನೆ ಮಾಡಿದ್ದ ಹತ್ತಿ, ಭತ್ತ, ಮೆಣಸಿನಕಾಯಿ, ಸಜ್ಜೆ ಬೆಳೆ ಹಾನಿಯಾಗಿವೆ. ಪ್ರವಾಹದಿಂದ ನೀರು ನಿಂತ ಪ್ರದೇಶವನ್ನು ಹಾನಿಯೆಂದು ಭಾವಿಸದೆ ಇಡೀ ಜಮೀನು ವ್ಯಾಪ್ತಿಯನ್ನು ಹಾನಿ ಪ್ರದೇಶವೆಂದು ಘೋಷಣೆ ಮಾಡಬೇಕು. ವಿದ್ಯುತ್ ಸ್ಥಗಿತದಿಂದ ಹಾನಿಯಾಗಿದ್ದರು ಸಹ ಅದನ್ನು ಸಹ ಬೆಳೆನಷ್ಟವೆಂದು ಪರಿಗಣನೆ ಮಾಡಬೇಕು ಎಂದು ಗೌಡೂರ ಗ್ರಾಮದ ರೈತ ಮಲ್ಲಪ್ಪ ಮನವಿ ಮಾಡಿದರು.

ಎರಡು ದಿನದಿಂದ ನದಿ ದಂಡೆಯ ಹಳ್ಳಿಗಳು ಆತಂಕದಿಂದ ಕಾಲ ಕಳೆಯುವಂತೆ ಆಗಿದೆ. ಪ್ರವಾಹದಿಂದ ಬರುತ್ತಿರುವ ನೀರಿನ ಕೆಟ್ಟ ವಾಸನೆ ಹಾಗೂ ವಿಷಜಂತುಗಳ ಹಾವಳಿ, ಬೀಸುತ್ತಿರುವ ಶೀತಗಾಳಿಯಿಂದ ಸಾಂಕ್ರಾಮಿಕ ರೋಗ ಭೀತಿ ಜನತೆಯಲ್ಲಿ ಆವರಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಂಡೆಯಹಳ್ಳಿಯಲ್ಲಿ ತಾತ್ಕಾಲಿಕ ವೈದ್ಯಕೀಯ ಸಿಬ್ಬಂದಿ ನೇಮಿಸಬೇಕು ಎಂದು ಜನತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.