ADVERTISEMENT

ಸೈದಾಪುರ: ಗೂಡೂರು ಬ್ರಿಜ್ ಕಂ ಬ್ಯಾರೇಜ್ ಭರ್ತಿ, ರಸ್ತೆ ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 6:31 IST
Last Updated 28 ಸೆಪ್ಟೆಂಬರ್ 2025, 6:31 IST
ಸೈದಾಪುರ ಸಮೀಪದ ಗೂಡೂರು-ಜೋಳದಡಗಿ ಗ್ರಾಮದ ಹತ್ತಿರದ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು
ಸೈದಾಪುರ ಸಮೀಪದ ಗೂಡೂರು-ಜೋಳದಡಗಿ ಗ್ರಾಮದ ಹತ್ತಿರದ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿರುವುದು   

ಸೈದಾಪುರ: ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಸಮೀಪದ ಗೂಡೂರು ಗ್ರಾಮದ ಹತ್ತಿರದ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಆನೂರು.ಕೆ, ಆನೂರು.ಬಿ, ಗೊಂದೆಡಗಿ, ಜೋಳದಡಗಿ, ಭೀಮನಳ್ಳಿ, ಮಲ್ಹಾರ, ಸಾವೂರು ಗ್ರಾಮದ ಹಲವು ರೈತರ ಹೊಲಗಳಿಗೆ ನೀರು ನುಗ್ಗಿವೆ. ನದಿ ಪಕ್ಕದ ನೂರಾರು ಎಕರೆಯಲ್ಲಿ ಬೆಳೆದ ಭತ್ತ ಮತ್ತು ಹತ್ತಿ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ. ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಸಾಲಸೂಲ ಮಾಡಿ ಬಿತ್ತನೆ ಮಾಡಿದ ರೈತರ ಸ್ಥಿತಿ ಹೇಳತೀರದಾಗಿದೆ.

ADVERTISEMENT

ರಸ್ತೆ ಸಂಪರ್ಕ ಕಡಿತ: ಅತಿವೃಷ್ಟಿಯಿಂದಾಗಿ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಭೀಮಾ ನದಿಗೆ ನೀರನ್ನು ಹರಿಬಿಟ್ಟಿದ್ದು, ನದಿಪಾತ್ರದ ಹಲವು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಮುಖ ವ್ಯಾಪಾರ ಕೇಂದ್ರವಾದ ಸೈದಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಗೂಡೂರು ಗ್ರಾಮದ ಹತ್ತಿರದ ಬ್ರಿಜ್ ಕಂ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಬೆಂಡೆಬೆಂಬಳಿ, ಜೋಳದಡಗಿ, ಬಿಳ್ಹಾರ ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸೈದಾಪುರ ಠಾಣೆಯಿಂದ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಜಿಟಿ ಜಿಟಿ ಮಳೆಗೆ ಹದಗೆಟ್ಟ ಆರೋಗ್ಯ: ನಿರಂತರ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಜನ–ಜಾನುವಾರಗಳ ಆರೋಗ್ಯದಲ್ಲಿ ಏರು ಪೇರು ಕಂಡು ಬರುತ್ತಿರುವುದು ಸಾಮಾನ್ಯವಾಗಿದೆ. ಮಳೆಯ ಜೊತೆಗೆ ತಂಪಾದ ಗಾಳಿಯಿಂದ ವಯೋವೃದ್ಧರು ಹಾಗೂ ಮಕ್ಕಳಲ್ಲಿ ಶೀತ, ಜ್ವರ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತಿವೆ. ನಿತ್ಯ ನೂರಾರು ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.