ADVERTISEMENT

ಯಾದಗಿರಿ: ಹೆಸರಿಗಷ್ಟೇ ‘ಗಾಂಧಿ ಗ್ರಾಮ ಪುರಸ್ಕಾರ’, ಇಂದಿಗೂ ಸಮಸ್ಯೆಗಳು ಜೀವಂತ

ಬಿ.ಜಿ.ಪ್ರವೀಣಕುಮಾರ
Published 10 ಅಕ್ಟೋಬರ್ 2023, 5:59 IST
Last Updated 10 ಅಕ್ಟೋಬರ್ 2023, 5:59 IST
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವ ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಚರಂಡಿ ನೀರು ಹರಿಯುತ್ತಿರುವುದು
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವ ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದಲ್ಲಿ ಚರಂಡಿ ನೀರು ಹರಿಯುತ್ತಿರುವುದು   

ಯಾದಗಿರಿ: ಜಿಲ್ಲೆಯ ಆರು ಗ್ರಾಮ ಪಂಚಾಯಿತಿಗಳಿಗೆ 2022–23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ. ಆದರೆ, ಪ್ರಶಸ್ತಿಗೆ ಭಾಜನವಾಗಿರುವ ಗ್ರಾಮಗಳಲ್ಲಿ ಇಂದಿಗೂ ಸಮಸ್ಯೆಗಳು ಜೀವಂತವಾಗಿದೆ. ಕೆಲವೇ ಅಂಶಗಳನ್ನಿಟ್ಟುಕೊಂಡು ಪುರಸ್ಕಾರ ನೀಡಲಾಗುತ್ತಿದ್ದು, ಇದರಿಂದ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದು ಗ್ರಾಮ ಪಂಚಾಯಿತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿಕೊಂಡು ₹5 ಲಕ್ಷ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ. ಆದರಂತೆ ಜಿಲ್ಲೆಗೆ 2022–23ನೇ ಸಾಲಿಗೆ ಆರು ಪಂಚಾಯಿತಿಗಳು ಪಾ‌ತ್ರವಾಗಿವೆ.

ಬಹುತೇಕ ಪಂಚಾಯಿತಿ ಕೇಂದ್ರ ಸ್ಥಾನ ಇರುವ ಗ್ರಾಮಗಳನ್ನೇ ಆಯ್ಕೆ ಮಾಡಲಾಗುತ್ತಿದೆ. ಆದರೂ ಅಂಥ ಗ್ರಾಮಗಳಲ್ಲಿ ಮೂಲ ಸೌಲಭ್ಯ ವಂಚಿತವಾಗಿದ್ದು, ಗ್ರಾಮಸ್ಥರು ಪರದಾಡುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ಕಳಪೆ ಜೆಜೆಎಂ ಕಾಮಗಾರಿ: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗ್ರಾಮಗಳಲ್ಲೂ ಜಲ ಜೀವನ ಮಿಷನ್‌ (ಜೆಜೆಎಂ) ಕಾಮಗಾರಿ ಅರ್ದಂಬರ್ಧವಾಗಿದ್ದು, ರಸ್ತೆಗಳು ಹಾಳಾಗಿವೆ. ಅಲ್ಲದೇ ಯಾವ ಗ್ರಾಮದಲ್ಲೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಕಾಮಗಾರಿ ಆರಂಭವಾಗಿ ಹಲವಾರು ವರ್ಷಗಳು ಕಳೆದರೂ ನೀರು ಸಿಕ್ಕಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.

ಒಗ್ಗಟ್ಟು, ಸಮನ್ವಯ ಕೊರತೆ: ಗ್ರಾಮದ ಸಮಗ್ರ ಅಭಿವೃದ್ಧಿಗೆ ಸದಸ್ಯರ ಒಗ್ಗಟ್ಟು ಕೊರತೆ ಎದ್ದು ಕಾಣುತ್ತದೆ. ಅಧಿಕಾರಿ, ಸದಸ್ಯರ ನಡುವೆ ಸಮನ್ವಯತೆ ಕೊರತೆಯಿಂದ ಗ್ರಾಮದಲ್ಲಿ ಎಲ್ಲ ಕಡೆಯೂ ಅಭಿವೃದ್ಧಿ ಆಗುವುದಿಲ್ಲ ಎಂಬುದು ಗ್ರಾಮಸ್ಥರು ಹೇಳುವ ಮಾತು.

ಸೊಳ್ಳೆಗಳ ವಿಪರೀತ ಕಾಟ: ಈಗ ಮಳೆಗಾಲವಾಗಿದ್ದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಚರಂಡಿಗಳನ್ನು ಸೂಕ್ತವಾಗಿ ಸ್ವಚ್ಛ ಮಾಡುವುದಿಲ್ಲ. ಉತ್ತಮ ರಸ್ತೆ, ವಿದ್ಯುತ್‌ ದೀಪಗಳಿಲ್ಲ. ವರ್ಷಕ್ಕೊಮ್ಮೆ ಊರಿನ ಜಾತ್ರೆ, ಹಬ್ಬಕ್ಕೆ ಮಾತ್ರ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುತ್ತದೆ. ನಡುವೆ ಸುಟ್ಟು ಹೋದರೆ ಬಜೆಟ್‌ ಇಲ್ಲ ಎನ್ನುವ ಸಬೂಬು ಹೇಳುತ್ತಾರೆ. ಕೆಲವು ಗ್ರಾಮ ಪಂಚಾಯಿತಿ ಆವರಣದಲ್ಲೇ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸ್ಥಗಿತಗೊಂಡಿರುವುದು ಕಂಡು ಬರುತ್ತಿದೆ.

ಇನ್ನೂ ಗ್ರಾಮದ ಎಲ್ಲ ಕಡೆ ಸಿಸಿ ರಸ್ತೆ ಆಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ವೈದ್ಯರು ಬರುವುದಿಲ್ಲ. ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ. 30–40 ವರ್ಷಗಳಿಂದ ಅಳವಡಿಸಿರುವ ವಿದ್ಯುತ್‌ ತಂತಿಗಳು ಜೋತು ಬಿದ್ದಿವೆ. ಮರಗಿಡಗಳಿಗೆ ಅಡ್ಡವಾಗಿವೆ. ಆದರೂ ಜೆಸ್ಕಾಂನವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮದ ನಿವಾಸಿಗಳ ಆರೋಪ.

ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮ ಪಂಚಾಯಿತಿಯಲ್ಲಿ 13 ಮಂದಿ ಪಂಚಾಯಿತಿ ಸದಸ್ಯರಿದ್ದಾರೆ. 4 ವಾರ್ಡ್‌, 5,000 ಜನಸಂಖ್ಯೆ ಇದೆ. ಪ್ರಾಥಮಿಕ, ಪ್ರೌಢ ಶಾಲೆ, ಉರ್ದು ಶಾಲೆ ಇದೆ. ಬಯಲು ಶೌಚಾಲಯ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಸಿಸಿ ರಸ್ತೆ, ಶುದ್ಧ ಮತ್ತು ಸಮಪರ್ಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.

ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಚಾಮನಾಳ ತಾಂಡಾ ವ್ಯಾಪ್ತಿಯನ್ನು ಬಂದಳ್ಳಿ ಪಂಚಾಯಿತಿ ಹೊಂದಿದೆ.

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ

ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರು ಘಟಕ
ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಹರಿಯುತ್ತಿರುವ ನೀರು
ಮಲ್ಲಾ ಬಿ. ಗ್ರಾಮದ ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿರುವುದು
ಹುಣಸಗಿ ತಾಲ್ಲೂಕಿನ ಕೋಳಿಹಾಳ ಗ್ರಾಮದಲ್ಲಿ ಪಂಚಾಯಿತಿ ಮುಂದೆ ಚರಂಡಿ ನೀರು ಹರಿಯುತ್ತಿರುವುದು

Highlights -

Quote - ಗ್ರಾಮದಲ್ಲಿ ಸಿ.ಸಿ ರಸ್ತೆ ಹಾಗೂ ಚರಂಡಿ ಕೆಲಸ ನಡೆದಿದೆ. ವೈಯಕ್ತಿಕ ಶೌಚಾಲಯವಿದ್ದರೂ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯವಿಲ್ಲ ಪವಿತ್ರ ದೇವಿಂದ್ರ ಛಲವಾದಿ ಗ್ರಾಪಂ ಅಧ್ಯಕ್ಷೆ ಕೊಳ್ಳೂರ(ಎಂ)

Quote - ನಮ್ಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರೆತಿರುವುದು ನಮ್ಮ ಜವಾಬ್ದಾರಿ ಹೆಚ್ಚಿಸಿದೆ. ಇನ್ನಷ್ಟು ಹುರುಪಿನಿಂದ ಕೆಲಸ ಮಾಡಲಾಗುವುದು ಶಿವಪುತ್ರಪ್ಪ ಪಿಡಿಒ ಮಲ್ಲಾ ಬಿ.

Quote - ಗಾಂಧಿಗ್ರಾಮ ಪುರಸ್ಕಾರದ ಆಯ್ಕೆ ಕೇವಲ ಡಾಟಾ ಆಧಾರದ ಮೇಲೆ ನಡೆದಿದೆ. ರಾಜ್ಯ ಮಟ್ಟದ ಅಧಿಕಾರಿಗಳು ಖುದ್ದು ಪರಿಶೀಲಿಸಿದರೆ ಆಯ್ಕೆ ಪಾರದರ್ಶಕವಾಗಿರುತ್ತದೆ ಮಂಜುನಾಥ ಕೊಂಬಿನ್ ಕೆಆರ್‌ಡಿಎಸ್‌ಎಸ್ ಕೆಂಭಾವಿ ಹೋಬಳಿ ಸಂಚಾಲಕ

Quote - ಈಗಾಗಲೇ ಗ್ರಾಪಂ ಮುಂಭಾಗದಲ್ಲಿ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅಧಿಕ ಭಾರದ ವಾಹನ ಸಂಚಾರ ಸಂದರ್ಭದಲ್ಲಿ ಚರಂಡಿ ಒಡೆದಿದ್ದು ಶೀಘ್ರದಲ್ಲೇ ಮತ್ತೆ ನಿರ್ಮಿಸಲಾಗುವುದು ಶಿವಕುಮಾರ್ ಚೌದ್ರಿ ಪಿಡಿಒ ಗ್ರಾಪಂ ಕೋಳಿಹಾಳ

Quote - ಕುರಕುಂದ ಗ್ರಾಮದಲ್ಲಿರುವ ಕಿರು ನೀರು ಸರಬರಾಜು ಓವರ್‌ ಹೆಡ್‌ ಟ್ಯಾಂಕ್‌ ಪ್ರತಿ 15 ದಿನಕ್ಕೊಮ್ಮೆ ಸ್ವಚ್ಛ ಮಾಡಲಾಗುತ್ತಿದೆ. ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಪ್ರಶಸ್ತಿ ನೀಡಲಾಗಿದೆ. ಸಿಸಿ ರಸ್ತೆ ಇನ್ನೂ ನಿರ್ಮಾಣ ಮಾಡಬೇಕಿದೆ ಸಿದ್ದವೀರಪ್ಪ ಕುರಕುಂದ ಪಿಡಿಒ

Quote - ಬಂದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಸಭೆ ಮಾಡಿ ಕ್ರಿಯಾ ಯೋಜನೆ ತಯಾರಿಸುತ್ತಿಲ್ಲ. ಉದ್ಯೋಗ ಖಾತ್ರಿ 15ನೇ ಹಣಕಾಸು ಯೋಜನೆಯಡಿ ದುರುಪಯೋಗ ಆಗುತ್ತಿದೆ. ಎಲ್ಲೋ ಕುಳಿತು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪಂಚಾಯಿತಿಯನ್ನು ಆಯ್ಕೆ ಮಾಡಲಾಗಿದೆ ಗಿರೀಶ್ ಕುಮಾರ್ ಯಡ್ಡಳ್ಳಿ ಸಾಮಾಜಿಕ ಕಾರ್ಯಕರ್ತ

Cut-off box - ಗುರುಮಠಕಲ್‌ ಕ್ಷೇತ್ರದಲ್ಲಿ 2 ಗ್ರಾಮಗಳು ಗುರುಮಠಕಲ್‌ ಮತಕ್ಷೇತ್ರದಲ್ಲಿ ಎರಡು ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರ ತವರು ಗ್ರಾಮವಾದ ಕಂದಕೂರ ಆಯ್ಕೆಯಾಗಿದೆ. ಇಲ್ಲಿಯೂ ಸಮಸ್ಯೆಗಳು ತಾಂಡಾವವಾಡುತ್ತಿವೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಬರುವುದಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

Cut-off box - ಗಾಂಧಿ ಗರಿಯ ಗ್ರಾಪಂದಲ್ಲಿ ಅವ್ಯವಸ್ಥೆಯ ಆಗರ ಶಹಾಪುರ: ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮ ಪಂಚಾಯಿತಿಯು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿ ತನ್ನ ಗರಿಯನ್ನು ಹೆಚ್ಚಿಸಿಕೊಂಡಿದೆ. ಆದರೆ ತನ್ನ ಒಡಲಿನಲ್ಲಿ ಅವ್ಯವಸ್ಥೆಯ ಆಗರ ತುಂಬಿಕೊಂಡಿರುವುದು ವಿಪರ್ಯಾಸ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟೊಣ್ಣೂರು ಮರಕಲ್ ಗೌಡೂರು ಸೇರಿ 7724 ಜನಸಂಖ್ಯೆ ಇದೆ. ಗ್ರಾಮದಲ್ಲಿ ಬಹುದೊಡ್ಡಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಮಹಿಳೆಯರಿಗೆ ಸಾರ್ವಜನಿಕ ಶೌಚಾಲಯವಿಲ್ಲ. ರಾತ್ರಿ ಆಗುತ್ತಿದ್ದಂತೆ ರಸ್ತೆ ಬದಿಯಲ್ಲಿ ನಿತ್ಯಕರ್ಮಗಳನ್ನು ಮುಗಿಸಬೇಕು. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲ. ಅಭಿವೃದ್ಧಿಗಾಗಿ ಸಾಕಷ್ಟು  ಅನುದಾನ ಬಂದರೂ ಅನುಷ್ಠಾನ ಮಾತ್ರ ಸರಿಯಾಗಿ ಆಗುತ್ತಿಲ್ಲ. ಅಲ್ಲದೆ ಕೃಷ್ಣಾ ನದಿಗೆ ಗ್ರಾಮ ಹೊಂದಿಕೊಂಡಿದ್ದರಿಂದ ಗ್ರಾಮ ಪಂಚಾಯಿತಿಗೆ ಮರಳು ಸಾಗಣೆಯಿಂದ ₹83 ಲಕ್ಷ ರಾಜಧನ ಸಂಗ್ರಹವಾಗಿತ್ತು. ಅದು ಎಲ್ಲಿ ಮಾಯವಾಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಸಂಸದರ ಆದರ್ಶ ಗ್ರಾಮ ಎಂಬ ಹೆಗ್ಗಳಿಕೆಯನ್ನು ಹೊತ್ತಿದೆ. ಆದರೆ ಅಭಿವೃದ್ಧಿಯ ನಿರೀಕ್ಷೆಯ ಭಾರದಲ್ಲಿ ಸೋತು ಹೋಗಿದೆ. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕವು ಆರಂಭವಾಗಿರುವುದಕ್ಕಿಂತ ಕೆಟ್ಟು ನಿಂತಿರುವುದು ಹೆಚ್ಚು. ಗ್ರಾಮದಲ್ಲಿ ಉಪ ಆರೋಗ್ಯ ಕೇಂದ್ರವಿದ್ದರೂ ಕರ್ತವ್ಯಕ್ಕೆ ಸಿಬ್ಬಂದಿ ಸರಿಯಾಗಿ ಬರುತ್ತಿಲ್ಲ ಎಂಬ ದೂರು ಗ್ರಾಮಸ್ಥರದ್ದಾಗಿದೆ. ಸಮಾಧಾನದ ಸಂಗತಿ ಎಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎನ್ನುತ್ತಾರೆ ಜನರು.

Cut-off box - ಶೌಚಾಲಯ ಇಲ್ಲದ ಗ್ರಾ.ಪಂ.ಗೆ ಪುರಸ್ಕಾರ! ಸುರಪುರ: ತಾಲ್ಲೂಕಿನ ಮಲ್ಲಾ ಬಿ. ಗ್ರಾಮ ಪಂಚಾಯಿತಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಅ. 2 ರಂದು ಪ್ರಶಸ್ತಿ ಮತ್ತು ಪ್ರೋತ್ಸಾಹ ಧನ ₹ 5 ಲಕ್ಷ ಪಡೆದುಕೊಂಡಿದೆ. ತಾಲ್ಲೂಕಿನ ಎಲ್ಲ 23 ಗ್ರಾಮ ಪಂಚಾಯಿತಿಗಳನ್ನು ಪುರಸ್ಕಾರಕ್ಕಾಗಿ ಅರ್ಜಿ ಹಾಕಲಾಗಿತ್ತು. 5:1 ಅನುಪಾತದಡಿ ವಿಂಗಡಿಸಿದ ಇಲಾಖೆ ಕೊನೆಗೆ ತಾಲ್ಲೂಕಿನಿಂದ ಮಲ್ಲಾ ಬಿ. ಪಂಚಾಯಿತಿ ಆಯ್ಕೆ ಮಾಡಿತು. ‘ಪಂಚಾಯಿತಿ ವ್ಯಾಪ್ತಿಯಲ್ಲಿ ಮಲ್ಲಾ ಬಿ. ಸೇರಿದಂತೆ ಮಲ್ಲಾ ಕೆ. ಹದನೂರ ಗೊಗಡಿಹಾಳ ಗ್ರಾಮಗಳು ಒಳಪಡುತ್ತವೆ. ಎಲ್ಲ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸಲಾಗಿದೆ’ ಎನ್ನುತ್ತಾರೆ ಅಭಿವೃದ್ಧಿ ಅಧಿಕಾರಿ ಪುತ್ರಪ್ಪಗೌಡ. ‘₹ 27 ಲಕ್ಷ ವೆಚ್ಚದಲ್ಲಿ ಜಿಲ್ಲೆಯಲ್ಲೆ ಮಾದರಿ ಎನ್ನಬಹುದಾದ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಿಸಲಾಗಿದೆ. 2022-23ನೇ ಸಾಲಿಗೆ ₹ 1.5 ಕೋಟಿ ವೆಚ್ಚದ ನರೇಗಾ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಶೇ 80 ಕ್ಕೂ ಹೆಚ್ಚು ಕರ ವಸೂಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. ‘ಮಲ್ಲಾ ಬಿ. ಪಂಚಾಯಿತಿ ಬೇರೆ ಪಂಚಾಯಿತಿಗಳಿಗೆ ಹೋಲಿಸಿದರೆ ತಕ್ಕಮಟ್ಟಿಗೆ ಉತ್ತಮ ಕೆಲಸ ಮಾಡಿದೆ. ಆದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ’ ಎನ್ನುತ್ತಾರೆ ಕೆಆರ್‌ಡಿಎಸ್‌ಎಸ್ ಕೆಂಭಾವಿ ಹೋಬಳಿ ಸಂಚಾಲಕ ಮಂಜುನಾಥ ಕೊಂಬಿನ್. ‘ಅವ್ಯವಹಾರದ ದೂರು ದಾಖಲಾದ ಕಾರಣ ಕಳೆದ 4 ತಿಂಗಳಿನಿಂದ ನರೇಗಾ ಯೋಜನೆ ಸ್ಥಗಿತಗೊಂಡಿದೆ. ನರೇಗಾ ಯೋಜನೆಗೆ ಖರ್ಚು ಮಾಡಿದ ಹಣಕ್ಕೂ ಕಾಮಗಾರಿಗೂ ಅಜಗಜಾಂತರ ವ್ಯತ್ಯಾಸ ಇದೆ’ ಎನ್ನುವುದು ಅವರ ಆರೋಪ. ‘ಪಂಚಾಯಿತಿ ವ್ಯಾಪ್ತಿಯ ಯಾವ ಗ್ರಾಮದಲ್ಲೂ ಸಾರ್ವಜನಿಕ ಶೌಚಾಲಯ ಇಲ್ಲ. ಪಂಚಾಯಿತಿ ಕಚೇರಿ ಸುತ್ತಮುತ್ತಲೇ ಜನರು ಶೌಚಕ್ಕೆ ಹೋಗುತ್ತಾರೆ. ಪರಿಶಿಷ್ಟ ಜಾತಿ ಸಮುದಾಯದವರ ವಾರ್ಡ್‌ನಲ್ಲಿ ಹೊಲಸು ತಾಂಡವವಾಡುತ್ತಿದೆ. ಮುಖ್ಯ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತದೆ’ ಎಂದು ಆರೋಪಿಸುತ್ತಾರೆ.

Cut-off box - ಪಂಚಾಯ್ತಿ ಮುಂದೆ ಚರಂಡಿ ಇಲ್ಲ ಹುಣಸಗಿ: ಗಾಂಧಿ ಗ್ರಾಮ ಪುರಸ್ಕೃತ ತಾಲ್ಲೂಕಿನ ಕೋಳಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೋಳಿಹಾಳ ಗ್ರಾಮದಲ್ಲಿ ಇನ್ನೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಗ್ರಾಮದ ಚರಂಡಿ ನೀರು ಹರಿದು ಹೋಗುತ್ತಿದ್ದು ಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಮುಂದಾಗಬೇಕಿದೆ. ಈ ಗ್ರಾಪಂ ವ್ಯಾಪ್ತಿಯಲ್ಲಿ ಇಸಾಂಪುರ ಕೋಳಿಹಾಳ ತಾಂಡಾ ಗುಂಡಲಗೇರಾ ಗ್ರಾಮಗಳು ಬರುತ್ತಿದ್ದು ಒಟ್ಟು 20 ಸದಸ್ಯರಿದ್ದಾರೆ. ಕೋಳಿಹಾಳ ಗ್ರಾಮದಲ್ಲಿ 6 ಜನ ಸದಸ್ಯರಿದ್ದು 1500 ಮನೆಗಳಿವೆ. ಸುಮಾರು 2500 ಜನಸಂಖ್ಯೆ ಇದೆ. ‘ಜೆಜೆಎಂ ಯೋಜನೆಯಡಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಮಾತ್ರ ನಿರ್ಮಿಸಲಾಗಿದ್ದು ಇನ್ನೂ ಸೌಲಭ್ಯ ಕಲ್ಪಿಸಿರುವುದಿಲ್ಲ. ಅಲ್ಲದೇ ಸಿಸಿ ರಸ್ತೆಯನ್ನು ಅಗೆದು ಪೈಪ್‌ಲೈನ್ ಜೋಡಿಸಲಾಗಿದೆ. ಆದರೆ ಇನ್ನೂ ಅದರ ಮೇಲೆ ಕಾಂಕ್ರೀಟ್ ಹಾಕಿಲ್ಲ. ಗುಂಡಲಗೇರಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವರ್ಷಗಳೇ ಗತಿಸಿದ್ದರೂ ಇಂದಿಗೂ ದುರಸ್ತಿ ಮಾಡಿಲ್ಲ’ ಎಂದು ಗ್ರಾಮಸ್ಥರ ಆರೋಪವಾಗಿದೆ. ‘ಕಳೆದ ವರ್ಷ ಸರ್ಕಾರಿ ಪಿಯು ಕಾಲೇಜು ಗ್ರಾಮಕ್ಕೆ ಮಂಜೂರು ಆಗಿದ್ದು ಯಾವಾಗ ಆರಂಭವಾಗುತ್ತದೆ ಎಂದು ಕಾಯುತ್ತಿದ್ದೇವೆ’ ಎಂದು ಗ್ರಾಮದ ಬಸವರಾಜ ಬೆಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.