ಯಾದಗಿರಿ: ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಐದನೇ ದಿನವಾದ ಭಾನುವಾರ ಗಣೇಶ ವಿಸರ್ಜನೆಯನ್ನು ಮಳೆಯ ನಡುವೆಯೂ ಸಂಭ್ರಮದ ಮೆರವಣಿಗೆಯೊಂದಿಗೆ ನೆರವೇರಿಸಲಾಯಿತು.
ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಿ, ಪೂಜಿಸಿದ ಮಂಗಲ ಮೂರ್ತಿಗೆ ಭಕ್ತರು ಭಕ್ತಿಯ ವಿದಾಯ ಹೇಳಿ ನಮಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಭಾನುವಾರ ಸಂಜೆವರೆಗೂ ವಿರಾಮ ನೀಡಿದ್ದರೂ 7ರ ಸುಮಾರಿಗೆ ಮತ್ತೆ ಸುರಿಯತೊಡಗಿತು. ಈ ವೇಳೆ ಭಕ್ತರು ಗಣೇಶ ಮೂರ್ತಿಗೆ ಕೊಡೆ ಹಿಡಿದುಕೊಂಡು ಮೆರವಣಿಗೆಯನ್ನು ಮುಂದುವರಿಸಿದರು. ಕೆಲವು ವಾಹನಗಳಲ್ಲಿನ ಮೂರ್ತಿಗಳಿಗೆ ಪ್ಲಾಸ್ಟಿಕ್ ಹಿಡಿದಿದ್ದು ಕಂಡುಬಂತು.
ಮತ್ತೊಂದೆಡೆ, ಕೆಲವು ಯುವಕರು, ಮಕ್ಕಳು ಹಣೆಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಮಳೆಯನ್ನು ಲೆಕ್ಕಿಸದೆ ಡಿ.ಜೆ. ಹಾಡು, ಬ್ಯಾಂಡ್ ಬಾಜಾ, ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಗುಲಾಲ್ ಎರಚಿಕೊಂಡು ಸಂಭ್ರಮಿಸಿದರು.
ಮಹಿಳೆಯರೂ ಸಂಗೀತ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ‘ಗಣಪತಿ ಬಪ್ಪ ಮೋರೆಯಾ...’ ಜೈಕಾರವೂ ಮೆರವಣಿಗೆ ಉದ್ದಕ್ಕೂ ಮೊಳಗಿದವು. ಪಟ್ಟಾಕಿ ಸದ್ದು ಸಹ ಜೋರಾಗಿತ್ತು.
ಸಾವಿರಾರು ಭಕ್ತರು ಭಕ್ತಿ– ಭಾವದಿಂದ ಸಣ್ಣ ಮೂರ್ತಿಗಳನ್ನು ತಲೆಯ ಮೇಲೆ ಹೊತ್ತುಕೊಂಡು, ತಳ್ಳುವ ಬಂಡಿಯಲ್ಲಿ ಇರಿಸಿಕೊಂಡು, ಕೆಲವರು ವಾಹನಗಳ ಮೇಲೆ ಇರಿಸಿಕೊಂಡು ಸಣ್ಣ ಕೆರೆ (ಲುಂಬಿನ ಉದ್ಯಾನ) ಸಮೀಪ ಹಾಗೂ ದೊಡ್ಡ ಕೆರೆ ಬಳಿಯ ಪುಷ್ಕರಣಿಗಳಿಗೆ ಬಂದರು. ಯುವಕ ಮಂಡಳಿಯವರು ದೊಡ್ಡ ಮೂರ್ತಿಗಳನ್ನು ತೆರೆದ ವಾಹನಗಳಲ್ಲಿ ಇರಿಸಿಕೊಂಡು ತಂದರು.
ರಸ್ತೆಯ ಬದಿಯಲ್ಲಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಲಾಯಿತು. ವಿಸರ್ಜನೆಗಾಗಿ ನಿಯೋಜನೆಗೊಂಡಿದ್ದ ನಗರಸಭೆಯ ಸಿಬ್ಬಂದಿ ಅಲಂಕಾರಿಕ ವಸ್ತುಗಳು, ಹೂಗಳನ್ನು ಬದಿಯಲ್ಲಿ ಹಾಕಿದರು. ಬಳಿಕ ಮೂರ್ತಿಗಳನ್ನು ಪುಷ್ಕರಣಿಯ ನೀರಿನಲ್ಲಿ ಬಿಟ್ಟರು. ದೊಡ್ಡ ಮೂರ್ತಿಗಳನ್ನು ದೊಡ್ಡ ಕ್ರೇನ್‌ಗಳನ್ನು ಬಳಸಿ ಪುಷ್ಕರಣಿಗಳಲ್ಲಿ ವಿಸರ್ಜನೆ ಮಾಡಲಾಯಿತು.
ಮೂರ್ತಿಗಳನ್ನು ವಿಸರ್ಜನೆಗೆ ಕೊಂಡೊಯ್ಯುವ ಮುನ್ನ ಪ್ರತಿಷ್ಠಾಪನೆಯ ಸ್ಥಳದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಚೌತಿ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮೂರ್ತಿಯ ಮುಂದೆ ಇರಿಸಲಾದ ದೊಡ್ಡ ಲಡ್ಡು ಹರಾಜು ಮೂಲಕ ಭಕ್ತರಿಗೆ ನೀಡಲಾಯಿತು. ಹಲವೆಡೆ ನಿರಂತರ ಅನ್ನದಾನ ವ್ಯವಸ್ಥೆ ಮಾಡಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.