ADVERTISEMENT

ಸಾಮೂಹಿಕ ಅತ್ಯಾಚಾರ: ಹೇಳಿಕೆ ಬದಲಿಸಿದ ಸಂತ್ರಸ್ತೆ

ಟಿ.ನಾಗೇಂದ್ರ
Published 19 ಅಕ್ಟೋಬರ್ 2021, 3:25 IST
Last Updated 19 ಅಕ್ಟೋಬರ್ 2021, 3:25 IST
-
-   

ಶಹಾಪುರ: ಎರಡು ತಿಂಗಳ ಹಿಂದೆ ಅಟೊ ಚಾಲಕರಿಬ್ಬರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸುವಾಗ ತನ್ನ ಹೇಳಿಕೆ ಬದಲಿಸಿರುವುದು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪತ್ರದಲ್ಲಿ ಬಹಿರಂಗವಾಗಿದೆ.

’164 ಸಿಆರ್‌ಪಿಸಿ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸಲು ಪೊಲೀಸರು ಅಗಸ್ಟ್ 10ರಂದು ಹಾಜರುಪಡಿಸುತ್ತಾರೆ. ಆಗ ಸಂತ್ರಸ್ತೆಯು ನ್ಯಾಯಾಧೀಶರ ಮುಂದೆ, ’ಪೊಲೀಸರು ಹೇಳಿದ ಹಾಗೆ ನಾನು ಹೇಳಿಕೆಯನ್ನು ಕೊಡುತ್ತಿದ್ದೇನೆ. ಶಹಾಪುರ ದೇವದುರ್ಗದ ನಡುವೆ ಒಂದು ದಾಬಾದಲ್ಲಿ ನನ್ನ ದೂರದ ಸಂಬಂಧಿ ಜೊತೆ ಚಹಾ ಕುಡಿಯಲು ಕುಳಿತಿದ್ದೆ. ಇಬ್ಬರು ವ್ಯಕ್ತಿಗಳು ಟಂಟಂನಲ್ಲಿ ಕುಳಿತಿದ್ದರು. ಅವರು ಯಾರು ಎಂಬುದು ನನಗೆ ಗೊತ್ತಿದ್ದಿಲ್ಲ. ನಾವು ನಮ್ಮ ಊರಿಗೆ ಹೋಗುತ್ತಿರುವಾಗ ಆ ಇಬ್ಬರೂ ವ್ಯಕ್ತಿಗಳು ನಮ್ಮನ್ನು ಹಿಂಬಾಲಿಸಿಕೊಂಡು ಬಂದರು. ದಾರಿ ಮಧ್ಯೆ ನಮ್ಮನ್ನು ಅಡ್ಡಗಟ್ಟಿದ ಆ ಇಬ್ಬರು ವ್ಯಕ್ತಿಗಳು ಬೆದರಿಸಿ, ಬೈಕ್‌ ಕೀ ಕಿತ್ತುಕೊಂಡು ನನ್ನನ್ನು ಟಂಟಂ ಗಾಡಿಯಲ್ಲಿ 50 ಕಿ.ಮೀ ದೂರದ ದೇವದುರ್ಗ ಕ್ರಾಸ್‌ಗೆ ಕರೆದುಕೊಂಡು ಹೋಗಿ ನನ್ನನ್ನು ರೇಪ್ ಮಾಡಿರುತ್ತಾರೆ. ಅವರ ಹೆಸರು ರಾಜು ಮತ್ತು ವಿರೇಶ ಇರುತ್ತದೆ. ಅವರು ಶಹಾಪುರದವರು ಇರುತ್ತಾರೆ ಎಂದು ಅವರೇ ಹೇಳಿರುತ್ತಾರೆ. ನಂತರ ಅವರು ನನ್ನನ್ನು ದಾಬಾ ಹತ್ತಿರ ಕರೆದುಕೊಂಡು ಬಂದು ಬಿಟ್ಟು ಹೋಗಿರುತ್ತಾರೆ. ಹೀಗೆ ಆಗಿದೆ ಎಂದು ಪೊಲೀಸರು ಹೇಳು ಎಂದಿದ್ದಕ್ಕೆ ನಾನು ಹೇಳುತ್ತಿದ್ದೇನೆ' ಎಂಬ ಹೇಳಿಕೆಯನ್ನು ಪೊಲೀಸರು ಸಲ್ಲಿಸಿದ ದೋಷಾರೋಪಣೆ ಪತ್ರದಲ್ಲಿ ಲಗತ್ತಿಸಲಾಗಿದೆ.

ಸಂತ್ರಸ್ತೆಯು ಅಗಸ್ಟ್ 9 ರಂದು ಶಹಾಪುರ ಠಾಣೆಗೆ ಹಾಜರಾಗಿ ಇಬ್ಬರು ಆರೋಪಿಗಳು ನನ್ನನ್ನು ಎಳೆದುಕೊಂಡು ತಮ್ಮ ಅಟೊದಲ್ಲಿ ಹಾಕಿಕೊಂಡರು. ನಂತರ ರಸ್ತಾಪುರ ಕಮಾನ ವಿರುದ್ಧವಾಗಿ ಇರುವ ಕನ್ಯಾಕೊಳ್ಳುರ ರೋಡಿನ ಕಡೆಗೆ ಕರೆದುಕೊಂಡು ಹೋಗಿ ನಿರ್ಜನ ಸ್ಥಳದಲ್ಲಿ ಅವರಿಬ್ಬರು ನನ್ನ ಇಚ್ಛೆಯ ವಿರುದ್ಧವಾಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಅದರಂತೆ ಶಹಾಪುರ ಠಾಣೆಯ ಪೊಲೀಸರು ಆರೋಪಿ ರಾಜು ಹಾಗೂ ವಿರೇಶ ಅವರನ್ನು ಅಗಸ್ಟ್ 9ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ADVERTISEMENT

ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿ ಇಬ್ಬರು ಆರೋಪಿಗಳು ಕಲಂ 341,323,384,366,376(ಡಿ),201 ಸಹವಾಚಕ 34 ಐಪಿಸಿ ಅಡಿಯಲ್ಲಿ ಅಪರಾಧ ಎಸಗಿದ್ದರಿಂದ ಅವರ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದಾರೆ. ನಗರದಲ್ಲಿ ಅಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಇಡೀ ತಾಲ್ಲೂಕಿನ ಜನತೆ ಆತಂಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.