ADVERTISEMENT

ಭ್ರಷ್ಟಾಚಾರದಲ್ಲಿ ಮುಳುಗಿದ ಸರ್ಕಾರ: ಶಾಸಕ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:33 IST
Last Updated 1 ಡಿಸೆಂಬರ್ 2021, 4:33 IST
ಗುರುಮಠಕಲ್ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಶಿವಾನಂದ ಪಾಟೀಲ ಪರ ಮತ ಯಾಚಿಸಿದರು
ಗುರುಮಠಕಲ್ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಶಿವಾನಂದ ಪಾಟೀಲ ಪರ ಮತ ಯಾಚಿಸಿದರು   

ಗುರುಮಠಕಲ್: ‘ಕೆಲವು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿ ಆಗಿತ್ತು. ಆದರೆ ಪ್ರಸ್ತುತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿರುವುದರಿಂದ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನರೇಗಾ ಕಾಮಗಾರಿಗಳು ಜರುಗುತ್ತಿಲ್ಲ. ಈ ಕುರಿತು ಬಿ.ಜಿ.ಪಾಟೀಲ ಎಂದಾದರೂ ಧ್ವನಿಯೆತ್ತಿದ್ದರೇ? ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ₹3 ಸಾವಿರ ಕೋಟಿ ಅನುಧಾನ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಆದರೆ ₹1500 ಕೋಟಿ ಅನುದಾನವನ್ನೂ ನೀಡಿಲ್ಲ ಎಂದ ಅವರು, ಬಿಜೆಪಿ ಈ ಮೊದಲು ಹೇಳಿಕೊಂಡಂತೆ ಕೃಷಿ ಕಾಯ್ದೆಗಳಲ್ಲಿ ಒಳ್ಳೆಯ ಅಂಶಗಳಿದ್ದರೆ ಹಿಂಪಡೆದಿದ್ದೇಕೆ? ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದ ಬಿಜೆಪಿ ಮಾಡಿದ್ದೇನು? ಅದಕ್ಕೆ ದೆಹಲಿಯಲ್ಲಿ ಪ್ರತಿಭಟನೆ ನಿರತ ರೈತರು ಸರ್ಕಾರದ ತಲೆ ಬಗ್ಗಿಸಿ ಪಾಠ ಕಲಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ ಅವರಿಗೆ ಪಂಚಾಯಿತಿಗಳ ಕಾರ್ಯ ವೈಖರಿ, ಅಭಿವೃದ್ಧಿ ಕೆಲಸಗಳು ಹಾಗೂ ಗ್ರಾಮೀಣ ಜನತೆಯ ಆಶೋತ್ತರಗಳ ಕುರಿತು ಅಪಾರವಾದ ತಿಳುವಳಿಕೆ ಮತ್ತು ಕಾಳಜಿಯಿದೆ. ಅವರಿಗೆ ಮತ ನೀಡಿದರೆ ನಮ್ಮ ಭಾಗದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಲ ನೀಡಿದಂತಾಗುತ್ತದೆ ಎಂದರು.

ಅಭ್ಯರ್ಥಿ ಶಿವಾನಂದ ಪಾಟೀಲ ಮಾತನಾಡಿ, ಬಿಜೆಪಿ ಅಭ್ಯರ್ಥಿ ಹಣ ಖರ್ಚು ಮಾಡುವ ಮೂಲಕ ಮತ ಖರೀದಿಸುವ ಉಮೇದಿನಲ್ಲಿದ್ದು, ಈಗ ಪ್ರಬುದ್ಧರು ಬಿಜೆಪಿಗೆ ಮತ ನೀಡದೆ ಪಾಠ ಕಲಿಸಲಿದ್ದಾರೆ. ಉದ್ಯೋಗ ಖಾತ್ರಿ ಸರಿಯಾಗಿ ಅನುಷ್ಟಾನ ಮಾಡದ ಕಾರಣ ಈ ಭಾಗದ ಜನರು ಗುಳೆ ಹೋಗುತ್ತಿದ್ದಾರೆ. ನಾನು ಆಯ್ಕೆಯಾದರೆ ಈ ಭಾಗದ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ ಎಂದರು.

ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷರಾದ ಮಹಿಪಾಲರೆಡ್ಡಿ ಹತ್ತಿಕುಣಿ, ವಿಶ್ವನಾಥ ನೀಲಹಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸರೆಡ್ಡಿಗೌಡ ಪಾಟೀಲ್ ಅನಪೂರ, ಶರಣಪ್ಪ ಮಾನೇಗಾರ ಮಾತನಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

ಮುಖಂಡರಾದ ಶ್ರೇಣಿಕುಮಾರ ದೋಖಾ, ಶಿವಲಿಂಗಪ್ಪ ಪುಟಗಿ, ಸಿದ್ದಲಿಂಗರೆಡ್ಡಿ‌ ಗೌಡ ಉಳ್ಳೆಸೂಗೂರು, ಚಿದಾನಂದಪ್ಪ ಕಾಳಬೆಳಗುಂದಿ, ಕೃಷ್ಣಾ ಚೆಪೆಟ್ಲಾ, ವೀರಭದ್ರಪ್ಪ ಯಡ್ಡಳಿ, ಹಣಮಂತಪ್ಪ ಬಳಿಚಕ್ರ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ವಿವಿಧ ಸ್ಥಳೀಯ ಸಂಸ್ಥೆಗಳ ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.