ADVERTISEMENT

ಬಹುಗ್ರಾಮ ಕುಡಿಯುವ ನೀರು ಕಾಮಗಾರಿಗೆ ಅನುದಾನ

ಜಿಲ್ಲೆಯಲ್ಲಿ ನೀರಾವರಿ ಅಭಿವೃದ್ಧಿ: ಸಚಿವ ಪ್ರಭು ಚವಾಣ್ ಸಂತಸ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 1:54 IST
Last Updated 3 ಜುಲೈ 2022, 1:54 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಯಾದಗಿರಿ: ‘ಜಲ‌ಜೀವನ್ ಮಿಷನ್ ನಿಧಿ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಹಾಗೂ 3 ನಗರ ಸ್ಥಳೀಯ ಸಂಸ್ಥೆಗಳಾದ ಕಕ್ಕೇರಾ, ಕೆಂಭಾವಿ ಮತ್ತು ಹುಣಸಗಿ ಪಟ್ಟಣಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ₹2,054 ಕೋಟಿ ಪರಿಷ್ಕೃತ ಅಂದಾಜಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವಾಣ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಈ ಯೋಜನೆ ಅನುಷ್ಠಾನದಿಂದ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುವುದನ್ನು ತಡೆಗಟ್ಟಿ, ಕೃಷಿ, ತೋಟಗಾರಿಕೆ, ಕುಡಿಯುವ ನೀರು, ಅಂತರ್ಜಲ ಅಭಿವೃದ್ಧಿ ಮತ್ತು ದನ ಕರುಗಳಿಗೆ ಮೇವು ಸೇರಿದಂತೆ ಮುಂತಾದವುಗಳಿಗೆ ಪ್ರೊತ್ಸಾಹ ಸಿಕ್ಕಂತಾಗಿದೆ’ ಎಂದಿದ್ದಾರೆ.

‘ಈ ಹಿಂದೆಯೇ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ₹1,744.42 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸರ್ಕಾರ ಆದೇಶಿಸಿ, ಟೆಂಡರ್ ನೀಡಲಾಗಿತ್ತು. ಅಂದಾಜು ಪಟ್ಟಿಯನ್ನು 2018-19ನೇ ಸಾಲಿನ ದರಪಟ್ಟಿಗಳನ್ವಯ ತಯಾರಿಸಲಾಗಿತ್ತು. ಆದರೆ, ಕಾಲಕ್ರಮೇಣ ಸಿಮೆಂಟ್, ಸ್ಟೀಲ್, ಪೈಪ್, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಕಾರ್ಮಿಕರ ವೇತನಗಳಲ್ಲಿ ಗಣನೀಯ ಹೆಚ್ಚಳವಾಗಿದ್ದ ಕಾರಣ ₹2,054 ಕೋಟಿ ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ನೀರಾವರಿ ಯೋಜನೆ ಅನುಮೋದನೆಗೆ ಶಾಸಕರಾದ ರಾಜೂಗೌಡ, ವೆಂಕಟರೆಡ್ಡಿ ಮುದ್ನಾಳ ಅವರು ಸಹಕಾರ ನೀಡಿದ್ದಾರೆ. ನಿಗದಿತ ಅವಧಿಯಲ್ಲಿ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಜಿಲ್ಲಾಡಳಿತಕ್ಕೆ’ ಸೂಚನೆ ನೀಡಿದ್ದಾರೆ.

‘ನಾನು ಎಂದಿಗೂ ಕಳಪೆ ಕಾಮಗಾರಿಗೆ ಆಸ್ಪದ ನೀಡುವುದಿಲ್ಲ. ಕಾಮಗಾರಿಯಲ್ಲಿ ಕಳಪೆ ಕಂಡು ಬಂದರೆ ಗುತ್ತಿಗೆದಾರರನ್ನು ಯಾವುದೇ ಮುಲಾಜಿಲ್ಲದೇ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ಜನರಿಗೆ ಉತ್ತಮ ಗುಣಮಟ್ಟದ ಕಾಮಗಾರಿ ಅನುಷ್ಠಾನಗೊಳಿಸಿ’ ಎಂದು ಪ್ರಭು ಚವಾಣ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.