ಗುರುಮಠಕಲ್: ಹಿಂಗಾರು ಹಂಗಾಮಿನ ಶೇಂಗಾ ಭಿತ್ತನೆ ಬೀಜ ಆರಂಭವಾಗಿದ್ದು, ತಾಲ್ಲೂಕಿನ ಎರಡೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯಕ ಬೀಜದ ದಾಸ್ತಾನು ಲಭ್ಯವಿದೆ.
ಗುರುಮಠಕಲ್ ರೈತ ಸಂಪರ್ಕ ಕೇಂದ್ರದಲ್ಲಿ 8 ನೂರು ಕ್ವಿಂಟಾಲ್ ಶೇಂಗಾ ಭಿತ್ತನೆ ಬೀಜವನ್ನು ತರಸಿದ್ದು, ಶುಕ್ರವಾರ(ಅ.3) 300 ಮತ್ತು ಶನಿವಾರ(ಅ.4) 150 ಸೇರಿ ಒಟ್ಟು 450 ಕ್ವಿಂಟಾಲ್ ಬೀಜ ವಿತರಿಸಲಾಗಿದೆ. ಸದ್ಯ 350 ಕ್ವಿಂಟಾಲ್ ದಾಸ್ತಾನು ಲಭ್ಯವಿದೆ. ಕೊಂಕಲ್ ರೈತ ಸಂಪರ್ಕ ಕೇಂದ್ರಕ್ಕೆ 350 ಕ್ವಿಂಟಾಲ್ ದಾಸ್ತಾನು ತರಿಸಲಾಗಿದ್ದು, ಅ.3 ರಂದು 30 ಮತ್ತು ಅ.4 ರಂದು 20 ಸೇರಿ ಒಟ್ಟು 50 ಕ್ವಿಂಟಾಲ್ ವಿತರಿಸಿದ್ದು, 300 ಕ್ವಿಂಟಾಲ್ ಬೀಜ ದಾಸ್ತಾನಿನಲ್ಲಿದೆ.
ಸದ್ಯ ಮಾರುಕಟ್ಟೆಯ ಧರಕ್ಕೆ ಮತ್ತು ರೈತ ಸಂಪರ್ಕ ಕೇಂದ್ರದಲ್ಲಿನ ಧರಕ್ಕೆ ಹೆಚ್ಚಿನ ಅಂತರವಿಲ್ಲದ ಕಾರಣ ಮಾರುಕಟ್ಟೆಯಲ್ಲಿ ಖರೀದಿಸಲಾಗುತ್ತಿದೆ. 'ಹೆಸರಿಗಷ್ಟೇ ಸರ್ಕಾರ ಸಹಾಯಧನದಲ್ಲಿ ಬೀಜ ವಿತರಿಸುತ್ತಿದ್ದೆ. ಸರತಿಯಲ್ಲಿ ನಿಂತು, ದಾಕಲೆಗಳನ್ನು ನೀಡಿ ಖರೀಸುವ ಬದಲಿಗೆ ಅದೇ ಧರದಲ್ಲಿ ಮಾರುಕಟ್ಟೆಯಲ್ಲಿ ನೇರವಾಗಿ ಖರೀದಿ ಮಾಡಬಹುದಲ್ಲ' ಎಂದು ರೈತ ನಾಗಪ್ಪ ಅಸಮದಾನ ವ್ಯಕ್ತಪಡಿಸಿದರು.
ಮುಂಗಾರು ಹಂಗಾಮಿನ ಅವಧಿಯಲ್ಲಿ 2 ಹೆಕ್ಟರ್ ಪ್ರದೇಶಕ್ಕೆ ತೊಗರಿ ಬೀಜ ಪಡೆದ ಜಮೀನಿನಿಗೆ ಶೇಂಗಾ ಬೀಜ ನೀಡುವುದಿಲ್ಲ. ಹೆಸರು ಅಥವಾ ಉದ್ದು ಪಡೆದವರಿಗೆ ಮತ್ತು ನೇರ ಭಿತ್ತನೆಗೆ ವಿತರಿಸಲಾಗುತ್ತಿದೆ. '800 ಕ್ವಿಂಟಾಲ್ ಒಂದೇ ದಿನದಲ್ಲಿ ವಿತರಣೆಯಾಗುತ್ತಿತ್ತು. ಆದರೆ, ಈ ವರ್ಷ ತರಿಸಿದ್ದ 800 ಕ್ವಿಂಟಾಲ್ ಬೀಜದಲ್ಲಿ ಇನ್ನೂ 300 ಕ್ವಿಂಟಾಲ್ ದಾಸ್ತಾನು ಉಳಿದಿದೆ' ಎನ್ನುತ್ತಾರೆ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ.
ನಿರಂತರ ಮಳೆಯಿಂದ ತೊಗರಿ, ಹತ್ತಿಯಲ್ಲಿ ಪೋಷಕಾಂಶಗಳ ಕೊರತೆಯು ಎದುರಾಗಿದ್ದರೆ, ಸಿಂಪಡಣೆಗೆ ಲಘು ಪೋಷಕಾಂಶಗಳ ಮಿಶ್ರಣ ನಮ್ಮಲ್ಲಿ ಲಭ್ಯವಿದೆ. ಜತೆಗೆ 'ರೈತರು ತಮ್ಮ ಬೆಳೆಗೆ ಸಂಬಂಧಿಸಿದ ರೋಗಗಳಿಗೆ ಆರ್.ಎಸ್.ಕೆ.ಗೆ ಸಂಪರ್ಕಿಸಿ ಸೂಕ್ತ ಮಾರ್ಗದರ್ಶನ ಪಡೆಯಬಹುದು' ಎಂದು ಕೃಷಿ ಅಧಿಕಾರಿ ಮಹಿಪಾಲರೆಡ್ಡಿ ತಿಳಿಸಿದರು.
ಬೀಜದ ಧರ: ಶೇಂಗಾ ಭಿತ್ತನೆ ಬೀಜದ ಧರವನ್ನು ಸಾಮಾನ್ಯ ವರ್ಗದ ರೈತರಿಗೆ ರೂ.11,600, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ರೂ.10,650 ನಿಗಧಿ ಮಾಡಲಾಗಿದೆ.
ಬೀಜ ಪಡೆಯಲು ಪಹಣಿ, ಬ್ಯಾಂಕ್ ಪಾಸ್‌ಬುಕ್, ಆಧಾರ್ ಪ್ರತಿ ಮತ್ತು ನೀರು ಬಳಕೆ ಪ್ರಮಾಣ ಪತ್ರ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಹೆಚ್ಚುವರಿಯಾಗಿ ಜಾತಿ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಎಂದು ಕೃಷಿ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.